ಪರಿಸರ ಸಂರಕ್ಷಣೆ ದಾರಿದೀಪ: ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

|

Updated on: Dec 17, 2024 | 10:34 AM

ಪರಿಸರ ಸಂರಕ್ಷಣೆಯ ದಾರಿದೀಪವಾಗಿದ್ದ ತುಳಸಿ ಗೌಡ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಅವರು, ತುಳಸಿ ಗೌಡ ಅವರ ಕೆಲಸಕಾರ್ಯಗಳು ತಲೆಮಾರುಗಳ ವರೆಗೆ ಪ್ರೇರೇಪಣೆಯಾಗಿರಲಿವೆ ಎಂದಿದ್ದಾರೆ.

ಪರಿಸರ ಸಂರಕ್ಷಣೆ ದಾರಿದೀಪ: ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ತುಳಸಿ ಗೌಡ & ಪ್ರಧಾನಿ ಮೋದಿ
Follow us on

ನವದೆಹಲಿ, ಡಿಸೆಂಬರ್ 17: ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ, ಪುರಸ್ಕೃತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದಾರಿದೀಪವಾಗಿದ್ದ ತುಳಸಿ ಗೌಡ ಅವರ ಜೀವನ ನಮಗೆಲ್ಲ ಪ್ರೇರಣೆಯಾಗಲಿ ಎಂದು ಮೋದಿ ಸಂತಾಪ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಖ್ಯಾತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಅವರು ಇನ್ನು ಮುಂದೆಯೂ ನಮಗೆ ದಾರಿದೀಪವಾಗಿ ಇರಲಿದ್ದಾರೆ. ಈ ಭೂಮಿಯ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ತುಳಸಿ ಗೌಡ ಅವರ ಕೆಲಸಕಾರ್ಯಗಳು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ. ಅವರ ನಿಧನಕ್ಕೆ ಸಂತಾಪಗಳು. ಓಂ ಶಾಂತಿಃ ಎಂದು ಮೋದಿ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮೋದಿ ಸಂದೇಶ


ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಸ್ವಗೃಹದಲ್ಲಿ ತುಳಸಿ ಗೌಡ ಸೋವಾರ ನಿಧನರಾದರು. ಹಾಲಕ್ಕಿ ಸಮುದಾಯದ ತುಳಸಿ ಗೌಡ ವೃಕ್ಷಮಾತೆ ಎಂದೇ ಖ್ಯಾತರಾಗಿದ್ದರು. ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ

ಇಂದು ಹೊನ್ನಳ್ಳಿಯಲ್ಲಿ ಅಂತ್ಯಕ್ರಿಯೆ

ಪದ್ಮಶ್ರೀ ತುಳಸಿ ಗೌಡ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮ ಹೊನ್ನಳ್ಳಿಯಲ್ಲಿ ಸಿದ್ಧತೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನೆರವೇರಲಿದೆ. ತುಳಸಿ ಗೌಡ ಮನೆಯ ಬಳಿ ಇರುವ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ