Fact Check: ಸಂಭಾಲ್​​ನಲ್ಲಿ ಮಸೀದಿ ಸಮೀಕ್ಷೆ ವೇಳೆ ವಿಗ್ರಹ ಪತ್ತೆ ಆಗಿದೆಯೇ?, ಇಲ್ಲ, ಇದು ರಾಯಚೂರಿನಲ್ಲಿ ಸಿಕ್ಕ ಮೂರ್ತಿ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಫೋಟೋದಲ್ಲಿ ಕೆಲವು ಹಿಂದೂ ದೇವತೆಯ ವಿಗ್ರಹವಿದ್ದು, ಇದು ಸಂಭಾಲ್ ಮಸೀದಿ ಸಮೀಕ್ಷೆಯ ಸಮಯದಲ್ಲಿ ಸಿಕ್ಕಿದೆ ಎಂದು ಹೇಳಲಾಗುತ್ತದೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2024 ರ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಕೃಷ್ಣಾ ನದಿ ಸೇತುವೆಯ ನಿರ್ಮಾಣದ ವೇಳೆ ಸಿಕ್ಕ ವಿಗ್ರಹಗಳಾಗಿವೆ.

Fact Check: ಸಂಭಾಲ್​​ನಲ್ಲಿ ಮಸೀದಿ ಸಮೀಕ್ಷೆ ವೇಳೆ ವಿಗ್ರಹ ಪತ್ತೆ ಆಗಿದೆಯೇ?, ಇಲ್ಲ, ಇದು ರಾಯಚೂರಿನಲ್ಲಿ ಸಿಕ್ಕ ಮೂರ್ತಿ
ವೈರಲ್​​ ಪೋಸ್ಟ್​
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 10:36 AM

ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮಸೀದಿ ಸರ್ವೆ ವಿಚಾರವಾಗಿ ಕೋಲಾಹಲ ಎದ್ದಿದೆ. ಭಾನುವಾರ ಇಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿದ್ದು, ಈ ದಾಳಿಯಲ್ಲಿ ಇದುವರೆಗೆ 4 ಜನರು ಸಾವನ್ನಪ್ಪಿದ್ದಾರೆ, ಪೊಲೀಸರು ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಜಿಯೋರ್ ರೆಹಮಾನ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಜಿಯೋರ್ ರೆಹಮಾನ್ ಅವರನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಫೋಟೋದಲ್ಲಿ ಕೆಲವು ಹಿಂದೂ ದೇವತೆಯ ವಿಗ್ರಹವಿದ್ದು, ಇದು ಸಂಭಾಲ್ ಮಸೀದಿ ಸಮೀಕ್ಷೆಯ ಸಮಯದಲ್ಲಿ ಸಿಕ್ಕಿದೆ ಎಂದು ಹೇಳಲಾಗುತ್ತದೆ. ಎಕ್ಸ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ಪ್ರತಿಮೆ, ಸುದರ್ಶನ ಚಕ್ರ, ಹಿಂದೂ ಚಿಹ್ನೆಗಳು ಪತ್ತೆ. ಪ್ರತಿಯೊಬ್ಬ ಹಿಂದುವೂ ಶೇರ್ ಮಾಡಿ ಮತ್ತು ಹಿಂದೂ ಧರ್ಮವನ್ನು ಉಳಿಸಿ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2024 ರ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಕೃಷ್ಣಾ ನದಿ ಸೇತುವೆಯ ನಿರ್ಮಾಣದ ವೇಳೆ ಸಿಕ್ಕ ವಿಗ್ರಹಗಳಾಗಿವೆ. ಸಂಭಾಲ್ ಮಸೀದಿ ಸಮೀಕ್ಷೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ಈ ಫೋಟೋವನ್ನು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ 8 ಫೆಬ್ರವರಿ 2024 ರಂದು ಸುಮಿತಾ ಶ್ರೀವಸ್ತವ್ ಎಂಬವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ವೈರಲ್ ಆಗುತ್ತಿರುವ ಇದೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ‘7 ಫೆಬ್ರವರಿ 2024 ರಂದು ತೆಲಂಗಾಣ-ಕರ್ನಾಟಕ ಗಡಿಯ ಸಮೀಪ ಕೃಷ್ಣಾ ನದಿಯ ದಡದಲ್ಲಿ ಭಗವಾನ್ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗವು ಪತ್ತಿಯಾಗಿದೆ. ಕರ್ನಾಟಕದ ರಾಯಚೂರಿನಲ್ಲಿ ಸೇತುವೆಯ ನಿರ್ಮಾಣದ ಸಮಯದಲ್ಲಿ ಅದನ್ನು ಮರುಪಡೆಯಲಾಗಿದೆ. ಶಿಲ್ಪಗಳು 1,000 ವರ್ಷಗಳ ಹಿಂದಿನವು ಎಂದು ನಂಬಲಾಗಿದೆ. ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗವು ಈಗ ಭಾರತದ ಪುರಾತತ್ವ ಇಲಾಖೆಯ ಅಡಿಯಲ್ಲಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದೊಂದಿಗೆ ನಾವು ವೈರಲ್ ಫೋಟೋವನ್ನು ಹೋಲಿಸಿದಾಗ ಎರಡೂ ಒಂದೆ ಫೋಟೋ ಎಂದು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ಈ ಫೋಟೋಗಳು ಅಂತರ್ಜಾಲದಲ್ಲಿ ಬಹಳ ಹಿಂದೆಯೇ ಲಭ್ಯವಿವೆ ಎಂಬುದು ಸಾಬೀತಾಗಿದೆ. ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ರಾಯಚೂರು-ವಿಷ್ಣು ವಿಗ್ರಹ ಪತ್ತೆ ಪತ್ತೆ ಎಂಬ ಕೀವರ್ಸ್ ಬಳಸಿ ಹುಡುಕಿದ್ದೇವೆ. ಆಗ ಸ್ವತಃ ಟಿವಿ9 ಕನ್ನಡ ಫೆಬ್ರವರಿ 6 2024 ರಂದು ‘ರಾಯಚೂರು: ಸೇತುವೆ ಕಾಮಗಾರಿ ವೇಳೆ ನದಿಯಲ್ಲಿ ಕೃಷ್ಣನ ವಿಗ್ರಹ, ಶಿವಲಿಂಗ ಪತ್ತೆ’ ಎಂಬ ಹೆಡ್​ಲೈನ್​ನೊಂದಿಗೆ ವೈರಲ್ ಫೋಟೋದ ಮೊದಲ ಮೂರು ಚಿತ್ರಗಳನ್ನು ಸೇರಿಸಿ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿನ ಶಕ್ತಿ ನಗರ ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ. ರಾಯಚೂರು-ತೆಲಂಗಾಣ ಗಡಿಯಲ್ಲಿರುವ ಶಕ್ತಿ ನಗರ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ. ದೇವಸ್ಥಾನಗಳ ಧ್ವಂಸದ ವೇಳೆ ಮತಾಂದರ ಕೈಯಿಂದ ವಿಗ್ರಹಗಳನ್ನು ರಕ್ಷಿಸಿಕೊಳ್ಳಲು ಅಂದಿನ ಜನರು ವಿಗ್ರಹಗಳನ್ನು ನದಿಯಲ್ಲಿ ಮುಳುಗಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಈ ವಿಗ್ರಹಗಳು 11ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿವೆ ಎಂದು ಇತಿಹಾಸ ತಜ್ಞೆ ಪದ್ಮಜಾ ದೇಸಾಯಿ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸಂಶೋಧನೆ ನಡೆಸಬೇಕಿದೆ ಎಂದರು’’ ಎಂಬ ಮಾಹಿತಿ ಇದರಲ್ಲಿದೆ.

ರಾಯಚೂರು: ಸೇತುವೆ ಕಾಮಗಾರಿ ವೇಳೆ ನದಿಯಲ್ಲಿ ಕೃಷ್ಣನ ವಿಗ್ರಹ, ಶಿವಲಿಂಗ ಪತ್ತೆ

ಅಂತೆಯೇ, ನ್ಯೂಸ್ 9 ಕೂಡ 06 ಫೆಬ್ರವರಿ 2024 ರಂದು, ‘ಕರ್ನಾಟಕದ ರಾಯಚೂರಿನ ಕೃಷ್ಣಾ ನದಿಯಲ್ಲಿ ಶತಮಾನಗಳಷ್ಟು ಹಳೆಯದಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗ ಪತ್ತೆಯಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಇದರಲ್ಲೂ ಅದೇ ಮೊದಲ ಮೂರು ವೈರಲ್ ಫೋಟೋ ಇದೆ. ರಾಯಚೂರು ನಗರದ ಶಕ್ತಿನಗರ ಬಳಿಯ ಕೃಷ್ಣಾ ನದಿಯಲ್ಲಿ ವಿಷ್ಣು ಮತ್ತು ಶಿವನ ಎರಡು ವಿಗ್ರಹಗಳು ಪತ್ತೆಯಾಗಿವೆ. ಶತಮಾನಗಳಷ್ಟು ಹಳೆಯದಾದ ಈ ವಿಗ್ರಹಗಳು ರಾಯಚೂರು ಮತ್ತು ತೆಲಂಗಾಣ ಗಡಿಯಲ್ಲಿ ಕೃಷ್ಣಾ ನದಿಗೆ ಸೇತುವೆ ನಿರ್ಮಾಣದ ವೇಳೆ ಪತ್ತೆಯಾಗಿವೆ ಎಂಬ ಮಾಹಿತಿ ಇದರಲ್ಲಿದೆ.

https://www.news9live.com/state/karnataka/centuries-old-lord-vishnu-idol-and-shiva-linga-found-in-krishna-river-in-karnatakas-raichur-2430557

ಇನ್ನು ವೈರಲ್ ಪೋಸ್ಟ್​ನಲ್ಲಿರುವ ನಾಲ್ಕನೇ ಫೋಟೋವನ್ನು (ವೃತ್ತಾಕಾರದ ಚಕ್ರ ಸುದರ್ಶನ ಚಕ್ರ) ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಥೇಟ್ ಇದೇ ಫೋಟೋವನ್ನು ಇಂಡಿಯಾಮಾರ್ಟ್ ಎಂಬ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಕಂಡುಬಂದುದೆ.

ಹೀಗಾಗಿ ಕರ್ನಾಟಕದಲ್ಲಿ ಕೃಷ್ಣಾ ನದಿಯ ಸೇತುವೆಯ ನಿರ್ಮಾಣದ ಸಮಯದಲ್ಲಿ ಪತ್ತೆಯಾದ ಈ ವಿಗ್ರಹವನ್ನು ಈಗ ಉತ್ತರ ಪ್ರದೇಶದ ಘಟನೆಗಳಿಗೆ ಲಿಂಕ್ ಮಾಡಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ