Narendra Modi: ಮಾ.12 ರಂದು 16 ಸಾವಿರ ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ಮೋದಿ

|

Updated on: Mar 11, 2023 | 8:01 AM

Bengaluru-Mysore Express Way: ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಮಾ.12) ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ ಲೋಕಾರ್ಪಣೆ ಸೇರಿಸಿದಂತೆ ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Narendra Modi: ಮಾ.12 ರಂದು 16 ಸಾವಿರ ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಳೆ (ಮಾ.12) ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ (Bengaluru-Mysore Express Way) ಲೋಕಾರ್ಪಣೆ ಸೇರಿಸಿದಂತೆ ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿಯವರು ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೇ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ (Hubli-Dharwad) ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ವರ್ಷದ ಆರಂಭದಿಂದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ನಾಳೆ ಭೇಟಿ ಸೇರಿ 6ನೇ ಬಾರಿ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಭಾರತ ಚುನಾವಣಾ ಆಯೋಗದ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದೆ. 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 118-ಕಿಮೀ ಉದ್ದದ 6 ಪಥದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು (NH-275)ಯನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.
ಹಾಗೇ 92 ಕಿಮೀ ಉದ್ದದ ಮೈಸೂರು-ಖುಶಾಲನಗರ ಚತುಷ್ಪಥ ಹೆದ್ದಾರಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 4,130 ಕೋಟಿ ರೂ.ಗಳ ಯೋಜನೆಯು ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು 5 ಗಂಟೆಗಳ ಪ್ರಯಾಣವನ್ನು ಕೇವಲ 2.5 ಗಂಟೆಗಳಿಗೆ ಇಳಿಸುತ್ತದೆ.

ಇದನ್ನೂ ಓದಿ: ದೇಶದ ವಿಪತ್ತು ನಿರ್ವಹಣೆ ಸಾಮರ್ಥ್ಯವನ್ನು ವಿಶ್ವವೇ ಮೆಚ್ಚಿದೆ; ಪ್ರಧಾನಿ ಮೋದಿ

ಧಾರವಾಡದಲ್ಲಿ 2019ರಲ್ಲಿ ಧಾರವಾಡದಲ್ಲಿ ಪ್ರಧಾನಿ ಮೋದಿಯವರು ಐಐಟಿಗೆ ಶಂಕುಸ್ಥಾಪನೆ ಮಾಡಿದ್ದರು. 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಐಐಟಿ ಕಟ್ಟಡವನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಉದ್ದದ ರೈಲ್ವೇ ಪ್ಲಾಟ್‌ಫಾರ್ಮ್​​ ಸುಮಾರು 20 ಕೋಟಿ ವೆಚ್ಚದಲ್ಲಿ 1,507 ಮೀಟರ್ ಉದ್ದದ ವೇದಿಕೆ ನಿರ್ಮಿಸಲಾಗಿದೆ. ಇದಲ್ಲದೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ನಿಲ್ದಾಣದ ಮೇಲ್ದರ್ಜೆಗೆ ಏರಿಸಲಾಗಿದ್ದು, ಪ್ರಧಾನಿಯವರು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ಮೋದಿ ನೆರವೇರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ. ಹುಬ್ಬಳ್ಳಿಯ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಲಿದ್ದಾರೆ. 250 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ ಪಡಿಸಲಿದ್ದು, ತೃತೀಯ ಹಂತದ ಹೃದ್ರೋಗ ಚಿಕಿತ್ಸೆ ನೀಡಲಾಗುವುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Sat, 11 March 23