ಎಸ್ಸಿ ಎಸ್ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುವಾಗಿ ಆರ್ಥಿಕ ಸಹಾಯದ ಕಾನೂನು ಮಾಡಿದ್ದು ಕಾಂಗ್ರೆಸ್: ಸಿದ್ದರಾಮಯ್ಯ
ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಎಸ್ಸಿ ಎಸ್ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುವಾಗಿ ಆರ್ಥಿಕ ಸಹಾಯದ ಕಾನೂನು ಮಾಡಿದ್ದು ನಾವು. ಹೀಗಿದ್ದಾಗ ಬಿಜೆಪಿಗೆ ನೀವು ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ದಾವಣಗೆರೆ: ನಾನು ಮುಖ್ಯಮಂತ್ರಿಯಾದ ನಂತರ ಎಸ್ಸಿ ಎಸ್ಟಿ (SC ST) ಜನಾಂಗದ ಜನಸಂಖ್ಯೆಗೆ ಆಧಾರವಾಗಿ ವಿಶೇಷ ಕಾನೂನು ಮಾಡಿದ್ದೆ. ಹೀಗಿದ್ದಾಗ ನೀವು ಯಾಕೆ ಬಿಜೆಪಿಗೆ (BJP) ಮತ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. ಜಿಲ್ಲೆಯ ಜಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ (Congress Praja Dhwavi Yatra) ಮಾತನಾಡಿದ ಅವರು, ಎಸ್ಟಿಪಿ ಟಿಎಸ್ಪಿ ಕಾನೂನು ಮಾಡಿದೆ. ರಾಜ್ಯದಲ್ಲಿ ಶೇ.24.8ರಷ್ಟು ಎಸ್ಸಿ ಎಸ್ಟಿ ಜನಾಂಗದ ಜನರು ಇದ್ದಾರೆ. ನಾನು ಮುಖ್ಯಮಂತ್ರಿಯಾದ ಮೇಲೆ ಈ ಜನಾಂಗಕ್ಕೆ ವಿಶೇಷ ಕಾನೂನು ಮಾಡಿದ್ದೆ. ಇಂತಹ ಕಾನೂನು ಮಾಡದ ಬಿಜೆಪಿಗೆ ನೀವು ಯಾಕೆ ವೋಟ್ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಎಸ್ಸಿ ಎಸ್ಟಿಗೆ 88ಸಾವಿರ ಕೋಟಿ ಹಣ ಖರ್ಚು ಮಾಡಿದೆ. ತುಳಿತಕ್ಕೆ ಒಳಗಾದವರಿಗೆ ವಿಶೇಷ ಸೌಲಭ್ಯ ಕೊಡದೇ ಹೋದರೆ ಉದ್ಧಾರ ಆಗುವುದು ಹೇಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇವರು (ಬಿಜೆಪಿ) ದುಡ್ಡು ಹೊಡೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ನಾನು ವಕೀಲ. ಜೊತೆಗೆ ಲಾ ಕಾಲೇಜ್ ಮೂರು ವರ್ಷ ಎವಿಡೆನ್ಸ್ ಕಾಯ್ದೆ ಬಗ್ಗೆ ಪಾಠ ಮಾಡಿದ್ದೇನೆ. ಶಾಸಕ ಮಾಡಾಳ್ ವಿರೂಪಾಕಪ್ಪ ರೇಡ್ ಹ್ಯಾಂಡ್ ಆಗಿ ಸಿಕ್ಕಿದ್ದಾನೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬೆಂಬಲಿಗರ ಪೈಪೋಟಿ; 50 ಕ್ಷೇತ್ರಗಳಿಗೆ ಅಂತಿಮಗೊಳ್ಳದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ
ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರಿಗೆ ಲಂಚಾ ಹೊಡೆಯುವುದು ಕಡಿಮೆ ಮಾಡಿ, ಬಡವರಿಗೆ ಏಳು ಕೆಜಿ ಅಕ್ಕಿ ಕೊಡಿ ಅಂತ ನಾನು ಹೇಳಿದ್ದೆ. ಆದರೆ ಅವರು ಕೆಜಿಯಲ್ಲಿ ಕಡಿಮೆ ಮಾಡಿದರು ಎಂದರು. ರಾಜ್ಯದ ಬಜೆಟ್ ಗಾತ್ರ ಮೂರು ಲಕ್ಷದ ಎಂಬತ್ತು ಸಾವಿರ ಕೋಟಿ ಇದೆ. ಇದರಲ್ಲಿ ಅಕ್ಕಿ ಕೊಡಲು ಹಣ ಕೊರತೆ ಆಗುತ್ತಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮೂರು ಬಾರಿ ಸರ್ವೆ: ಸಿದ್ದರಾಮಯ್ಯ
ರಾಜ್ಯದಲ್ಲಿ ನಾನು ಈಗಾಗಲೇ ಮೂರು ಸಲ ಸರ್ವೇ ಮಾಡಿಸಿದ್ದೇನೆ. ಹೈಕಮಾಂಡ್ ಕೂಡಾ ಪ್ರತ್ಯೇಕ ಸರ್ವೇ ಮಾಡಿಸಿದೆ. ಯಾರಿಗೆ ಸರ್ವೇದಲ್ಲಿ ಒಳ್ಳೆಯ ಅಭಿಪ್ರಾಯ ಇದೆಯೋ ಅಂತಹವರಿಗೆ ಟಿಕೆಟ್ ಕೊಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರುವ ವಾತಾವರಣವಿದೆ. ಇದೇ ಕಾರಣಕ್ಕೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಶೇಖಡಾವರಾ ಮತಗಳು ಕಾಂಗ್ರೆಸ್ಗೆ ಹೆಚ್ಚು ಬಂದಿತ್ತು. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಮಾನತೆಯ ವಿರುದ್ಧ ಬಿಜೆಪಿಯವರು ಇದ್ದಾರೆ. ಮನುವಾದಿ ಹಾಗೂ ಪುರೋಹಿತ ಶಾಹಿಗಳು ಈ ದೇಶಕ್ಕೆ ಶಾಪ ಎಂದು ವಿವೇಕಾನಂದರು ಹೇಳಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Fri, 10 March 23