Narendra Modi: ದೇಶದ ವಿಪತ್ತು ನಿರ್ವಹಣೆ ಸಾಮರ್ಥ್ಯವನ್ನು ವಿಶ್ವವೇ ಮೆಚ್ಚಿದೆ; ಪ್ರಧಾನಿ ಮೋದಿ
ಕೆಲಸದ ಗುರುತಿಸುವಿಕೆ ಮತ್ತು ಸುಧಾರಣೆಗಳು ವಿಪತ್ತು ನಿರ್ವಹಣೆಯನ್ನು ಬಲಪಡಿಸುವ ಎರಡು ಪ್ರಮುಖ ಅಂಶಗಳಾಗಿವೆ. ದೇಶದ ವಿಪತ್ತು ನಿರ್ವಹಣೆ ಸಾಮರ್ಥ್ಯವನ್ನು ವಿಶ್ವವೇ ಮೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನ ಭವನದಲ್ಲಿ ಹೇಳಿದರು.
ನವದೆಹಲಿ: ಕೆಲಸದ ಗುರುತಿಸುವಿಕೆ ಮತ್ತು ಸುಧಾರಣೆಗಳು ವಿಪತ್ತು ನಿರ್ವಹಣೆಯನ್ನು ಬಲಪಡಿಸುವ ಎರಡು ಪ್ರಮುಖ ಅಂಶಗಳಾಗಿವೆ. ದೇಶದ ವಿಪತ್ತು ನಿರ್ವಹಣೆ ಸಾಮರ್ಥ್ಯವನ್ನು ವಿಶ್ವವೇ ಮೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ‘ವಿಪತ್ತು ಅಪಾಯ ಕಡಿಮೆ ಮಾಡುವುದು ಮತ್ತು ನಿರ್ವಹಣಾ ವೇದಿಕೆ (NDPRR)’ಯ 3ನೇ ಸೆಷನ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಹವಾಮಾನ ಬದಲಾವಣೆಗೆ ಸ್ಥಳೀಯವಾಗಿ ಸ್ಥಿತಿಸ್ಥಾಪಕತ್ವ ಹೊಂದುವುದು’ ಎಂಬ ಧ್ಯೇಯದೊಂದಿಗೆ ಸೆಷನ್ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿಯವರು ವಿಜೇತರಿಗೆ ‘ಸುಭಾಷ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರ’ ಪ್ರದಾನ ಮಾಡಿದರು. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಮಿಜೋರಾಂನ ಲುಂಗ್ಲೆಯಿ ಫೈರ್ ಸ್ಟೇಷನ್ ಅನ್ನು 2023ರ ವಿಜೇತರೆಂದು ಘೋಷಿಸಲಾಯಿತು. ನಂತರ ವಿಪತ್ತಿನ ಅಪಾಯ ಕಡಿಮೆ ಮಾಡುವ ವಿಷಯಕ್ಕೆ ಸಂಬಂಧಿಸಿದ ಪ್ರದರ್ಶನ ಮಳಿಗೆಯನ್ನು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಮೋದಿ, ಕೆಲಸದ ಗುರುತಿಸುವಿಕೆ ಮತ್ತು ಸುಧಾರಣೆಗಳು ವಿಪತ್ತು ನಿರ್ವಹಣೆಯನ್ನು ಬಲಪಡಿಸುವ ಎರಡು ಪ್ರಮುಖ ಅಂಶಗಳಾಗಿವೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದ್ದಾಗ ಭಾರತದ ರಕ್ಷಣಾ ತಂಡಗಳು ಕೈಗೊಂಡಿದ್ದ ಕಾರ್ಯಾಚರಣೆಗೆ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತೆ ಮಾಡಿದೆ ಎಂದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ
ಭವಿಷ್ಯದ ತಂತ್ರಜ್ಞಾನಗಳೊಂದಿಗೆ ವಿಪತ್ತು ನಿರ್ವಹಣೆ ವಿಚಾರದಲ್ಲಿ ಸ್ಥಿತಿಸ್ಥಾಪಕತ್ವ ಹೊಂದಬೇಕಿದೆ. ಸ್ಥಳೀಯ ತಂತ್ರಜ್ಞಾನ ಮತ್ತು ಸಲಕರಣೆಗಳ ಬಳಕೆ ಸದ್ಯದ ತುರ್ತಾಗಿದೆ. ನಾವು ಭವಿಷ್ಯದ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಸ್ಥಿತಿಸ್ಥಾಪಕತ್ವ ಹೊಂದಬೇಕಿದೆ. ಹಾಗೆ ಮಾಡಿದಾಗ ಮಾತ್ರ ವಿಪತ್ತಿನ ಅಪಾಯವನ್ನು ಕಡಿಮೆ ಮಾಡುವ ದಿಶೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದರು.
ಎನ್ಡಿಪಿಆರ್ಆರ್ ಎಂದರೇನು?
ಎನ್ಪಿಡಿಆರ್ಆರ್ ಅಥವಾ ವಿಪತ್ತು ಅಪಾಯ ಕಡಿಮೆ ಮಾಡುವುದು ಮತ್ತು ನಿರ್ವಹಣಾ ವೇದಿಕೆ ಕೇಂದ್ರ ಸರ್ಕಾರದಿಂದ ಸ್ಥಾಪಿಯವಾಗಿದೆ. ಹಲವರ ಸಹಭಾಗಿತ್ವದೊಂದಿಗೆ ಈ ವೇದಿಕೆ ಸ್ಥಾಪನೆಯಾಗಿದ್ದು, ವಿಪತ್ತು ನಿರ್ವಹಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂವಾದ, ಅನುಭವಗಳ ಹಂಚಿಕೆ, ಪರಾಮರ್ಶೆ, ಐಡಿಯಾಗಳ ಹಂಚಿಕೆ, ಕ್ರಿಯೆ-ಆಧಾರಿತ ಸಂಶೋಧನೆಗೆ ಅನುಕೂಲ ಕಲ್ಪಿಸಿಕೊಡುತ್ತದೆ. ಸರ್ಕಾರ, ಸಂಸದರು, ಮೇಯರ್‌ಗಳು, ಮಾಧ್ಯಮಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಎನ್‌ಜಿಒಗಳು, ಸ್ಥಳೀಯ ಸಮುದಾಯಗಳ ಪ್ರತಿನಿಧಿಗಳು, ವೈಜ್ಞಾನಿಕ, ಶೈಕ್ಷಣಿಕ ಸಂಸ್ಥೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳು ಇತ್ಯಾದಿಗಳನ್ನು ಒಂದೇ ವೇದಿಕೆಯಡಿ ತಂದು ದೇಶದ ವಿಪತ್ತು ಅಪಾಯ ಕಡಿಮೆ ಮಾಡುವುದು ಮತ್ತು ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ವೇದಿಕೆ ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ