Brahmapuram: ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ನಂತರ ಗ್ಯಾಸ್ ಚೇಂಬರ್ನಂತೆ ಆದ ಕೊಚ್ಚಿ; ನಗರದಲ್ಲಿ ಲಾಕ್ಡೌನ್ನಂಥಾ ಪರಿಸ್ಥಿತಿ
ಎರಡನೇ ದಿನ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ, ದಟ್ಟವಾದ ಕಪ್ಪು ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿದೆ. ಪ್ಲಾಸ್ಟಿಕ್, ಲೋಹ ಮತ್ತಿತರ ಸುಟ್ಟ ವಸ್ತುಗಳ ಹೊಗೆ ನಗರದ ಕಾಲೋನಿಗಳತ್ತ ಬರುತ್ತಿರುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ
ಕೊಚ್ಚಿ: ನಗರದ ಬ್ರಹ್ಮಪುರಂ(Brahmapuram )ಪ್ರದೇಶದಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ (waste management plant) ಭಾರೀ ಬೆಂಕಿ ಕಾಣಿಸಿಕೊಂಡ ಒಂದು ವಾರದ ಬಳಿಕ ಕೇರಳದ ಕೊಚ್ಚಿ ಗ್ಯಾಸ್ ಚೇಂಬರ್ (gas chamber) ಆಗಿ ಮಾರ್ಪಟ್ಟಿದೆ. ಎರಡನೇ ದಿನ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ, ದಟ್ಟವಾದ ಕಪ್ಪು ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿದೆ. ಪ್ಲಾಸ್ಟಿಕ್, ಲೋಹ ಮತ್ತಿತರ ಸುಟ್ಟ ವಸ್ತುಗಳ ಹೊಗೆ ನಗರದ ಕಾಲೋನಿಗಳತ್ತ ಬರುತ್ತಿರುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಹಲವರಿಗೆ ಕಣ್ಣು ಮತ್ತು ಗಂಟಲುಗಳು ಸುಡುವ ರೀತಿಯ ಅನುಭವವಾಗಿದೆ ಎಂದು ಅವರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಜನರು ಹೊರಗೆ ಹೋಗುವಾಗ N95 ಮಾಸ್ಕ್ ಅನ್ನು ಬಳಸಬೇಕೆಂದು ಕೇರಳ ಸರ್ಕಾರ ಹೇಳಿದೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಜನರು ಹೊರಾಂಗಣದಲ್ಲಿ ಜಾಗಿಂಗ್ ಮಾಡುವುದು ಬೇಡ ಎಂದು ಹೇಳಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳು 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ. ಕೊಚ್ಚಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಮತ್ತು ನೆರೆಯ ಎರ್ನಾಕುಲಂನಲ್ಲಿ ಕೆಲವು ಶಾಲೆಗಳನ್ನು ಮುಚ್ಚಲಾಗಿದೆ. ಕೊಚ್ಚಿಯಲ್ಲಿ, ಪರಿಸ್ಥಿತಿಯು ಕೋವಿಡ್-19 ಲಾಕ್‌ಡೌನ್ ಅನ್ನು ಹೋಲುತ್ತದೆ. ರಸ್ತೆಗಳಲ್ಲಿ ಕೆಲವೇ ಜನರಿದ್ದಾರೆ. ಹೊರಗೆ ಕಂಡವರು ಮಾಸ್ಕ್ ಹಾಕಿಕೊಂಡಿದ್ದಾರೆ. ಮಕ್ಕಳು, ವೃದ್ಧರು ಹೊರಗೆ ಕಾಲಿಡುತ್ತಿಲ್ಲ.
ಕನಿಷ್ಠ 50,000 ಟನ್ ಕಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪೀಡಿತ ಪ್ರದೇಶದಿಂದ ಹೊರಬರುವ 70 ರಷ್ಟು ಹೊಗೆಯನ್ನು ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದ ಶೇ.30ರಷ್ಟು ಹೊಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ನಾವು ಕೆಲಸ ಮಾಡುತ್ತಿದ್ದೇವೆ. ಅಲ್ಲಿ ಹೊಗೆಯುಂಟು ಮಾಡುವ ಪ್ಲಾಸ್ಟಿಕ್ ತ್ಯಾಜ್ಯವು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ, ಬೆಂಕಿ ಹೊತ್ತಿಕೊಂಡಾಗ ಹೆಚ್ಚು ಪರಿಣಾಮ ಬೀರಲಿಲ್ಲ, ಬೆಂಕಿ ನಂದಿಸಿದ ನಂತರ ದಟ್ಟವಾದ ಹೊಗೆ ನಿಯಂತ್ರಿಸುವುದು ನಮಗೆ ತುಂಬಾ ಕಷ್ಟವಾಯಿತು. ಇಂದು, ನನ್ನ ಮನೆ ಕೂಡ ಹೊಗೆಯಿಂದ ತುಂಬಿತ್ತು, ನಿನ್ನೆ, ನನ್ನ ಸ್ನೇಹಿತರು ಹಾಸ್ಟೆಲ್‌ನಲ್ಲಿ ಮಾಸ್ಕ್ ಹಾಕಿಕೊಂಡು ಮಲಗಬೇಕಾಗಿತ್ತು. ಅವರು ಹೊಗೆ ಮತ್ತು ವಾಸನೆ ಬಗ್ಗೆ ದೂರುತ್ತಿದ್ದರು ಎಂದು ತ್ಯಾಜ್ಯ ನಿರ್ವಹಣಾ ಘಟಕದಿಂದ ಕೇವಲ 1 ಕಿಮೀ ದೂರದಲ್ಲಿರುವ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಲಿಜ್ ಬಿಜು ಬುಧವಾರ ಎನ್‌ಡಿಟಿವಿಗೆ ತಿಳಿಸಿದರು.
ಇದನ್ನೂ ಓದಿ: Brahmapuram Waste Plant: ವಾಯು ಮಾಲಿನ್ಯದಿಂದ ಉಸಿರುಗಟ್ಟಿದ ಕೊಚ್ಚಿ ನಗರ; ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಸಂಭವಿಸಿದ್ದೇನು?
ಅಗ್ನಿಶಾಮಕ ದಳ ಮತ್ತು ನೌಕಾಪಡೆಯ ಹೆಲಿಕಾಪ್ಟರ್‌ಗಳ ಕನಿಷ್ಠ 30 ತಂಡಗಳು ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಇದು ಪ್ಲಾಸ್ಟಿಕ್, ಲೋಹ ಮತ್ತು ರಬ್ಬರ್ ಸೇರಿದಂತೆ ದೊಡ್ಡ ಪ್ರಮಾಣದ ಕಸದ ರಾಶಿಗೆ ಬೆಂಕಿ ಹಚ್ಚಿ ವಿಷಕಾರಿ ಹೊಗೆಯನ್ನು ಬಿಡುಗಡೆ ಮಾಡಿದೆ.
“ನಾನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನಾವು ಹೀಗೆ ಉಸಿರಾಡಲು ಸಾಧ್ಯವಿಲ್ಲ” ಎಂದು ಲಿಜ್ ಬಿಜು ಹೇಳಿದ್ದಾರೆ
ಕೊಚ್ಚಿಯ ಬ್ರಹ್ಮಪುರಂ ಕೇರಳದ 14 ಜಿಲ್ಲೆಗಳಲ್ಲಿ ಏಕೈಕ ದೊಡ್ಡ ಕೇಂದ್ರೀಕೃತ ಘನ ತ್ಯಾಜ್ಯ ನಿರ್ವಹಣಾ ಘಟಕವಾಗಿದೆ.
ಕೊಚ್ಚಿ ನಗರವು ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ ಎಂದು ಕೇರಳ ಹೈಕೋರ್ಟ್ ಕೊಚ್ಚಿ ನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದರ ಕುರಿತು ವರದಿ ಮತ್ತು ಕ್ರಿಯಾ ಯೋಜನೆಯನ್ನು ಕೇಳಿದೆ. ಬೆಂಕಿಯ ಕಾರಣ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ನಾಗರಿಕ ಸಂಸ್ಥೆ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Fri, 10 March 23