ಇಂದು ಕರ್ನಾಟಕಕ್ಕೆ ಮೋದಿ: 10800 ಕೋಟಿ ರೂ ಯೋಜನೆಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ ನೆರವೇರಿಸಲಿರುವ ಪ್ರಧಾನಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಜನವರಿ 19) ಕಲಬುರಗಿ ಹಾಗೂ ಯಾದಗಿರಿಗೆ ಭೇಟಿ ನೀಡಲಿದ್ದು, ಈ ವೇಳೆ 10,800 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಕಲಬುರಗಿ/ಯಾದಗಿರಿ: ರಾಷ್ಟ್ರೀಯ ಯುವಜನೋತ್ಸವ ಚಾಲನೆ ನೀಡಲು ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಹೌದು.. ಕಲ್ಯಾಣ ಕರ್ನಾಟಕ ಗೆಲ್ಲುವ ಗುರಿ ಹೊಂದಿರುವ ಪ್ರಧಾನಿ ಮೋದಿ, ನಾಳೆ(ಜನವರಿ 19) ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಈ ವೇಳೆ ನರೇಂದ್ರ ಮೋದಿ ಅವರು ಎರಡು ಜಿಲ್ಲೆಗಳಲ್ಲಿ ಸುಮಾರು 10,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ನಾಳೆ ಬೆಳಗ್ಗೆ 9ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಹೊರಟು ಬೆಳಗ್ಗೆ 11.05ಕ್ಕೆ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಲಿದ್ದಾರೆ. ಬಳಿಕ ಕಲಬುರಗಿ ಏರ್‌ಪೋರ್ಟ್‌ನಿಂದ ಹೆಲಿಕಾಪ್ಟರ್‌ನಲ್ಲಿ ಯಾದಗಿರಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಯಾದಗಿರಿ ಜಿಲ್ಲೆಯ ಕೊಡೆಕಲ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಕೊಡೆಕಲ್ ಗ್ರಾಮದಲ್ಲಿ ಬಸವಸಾಗರ ಡ್ಯಾಂನ ಸ್ವಯಂಚಾಲಿತ ಕ್ರಸ್ಟ್‌ಗೇಟ್‌ಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.
ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು.
— Narendra Modi (@narendramodi) January 18, 2023
4.50 ಲಕ್ಷ ಹೆಕ್ಟೇರ್‌ಗೆ ನೀರು
ಈ ಜಲಾಶಯವು ಎಡ ಮತ್ತು ಬಲದಂಡೆ ಕಾಲುವೆಗಳು ಮತ್ತು ಏತ ನೀರಾವರಿ ಜಾಲಗಳ ಮೂಲಕ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 5.40 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ನಾರಾಯಣಪುರ ಎಡದಂಡೆ ಕಾಲುವೆಯು ಕಮಾಂಡ್ ಪ್ರದೇಶಕ್ಕೆ 4.50 ಲಕ್ಷ ಹೆಕ್ಟೇರ್‌ಗೆ ನೀರು ಸರಬರಾಜು ಮಾಡುವ ಮುಖ್ಯ ದಾರಿಯಾಗಿದ್ದು, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ 560 ಗ್ರಾಮಗಳ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಒಟ್ಟು ವೆಚ್ಚ ಸುಮಾರು 4,700 ಕೋಟಿ ರೂ.ಯೋಜನೆಯದ್ದಾಗಿದೆ.
2100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸೂರತ್ – ಚೆನ್ನೈ ಎಕ್ಸ್‌ಪ್ರೆಸ್‌ವೇ
ಮಧ್ಯಾಹ್ನ 1.15ಕ್ಕೆ ಕೊಡೆಕಲ್‌ನಿಂದ ಕಲಬುರಗಿ ಜಿಲ್ಲೆಯ ಮಳಖೇಡದತ್ತ ಮೋದಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಮಳಖೇಡ ಹೆಲಿಪ್ಯಾಡ್‌ಗೆ ಮೋದಿ ಎಂಟ್ರಿಯಾಗಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಕಂದಾಯ ಹಕ್ಕುಪತ್ರಗಳನ್ನ ವಿತರಿಸಲಿದ್ದಾರೆ. 51 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಹಸ್ತಾಂತರಿಸಲಿದ್ದಾರೆ. ಇನ್ನು ಇದೇ ವೇಳೆ ಪ್ರಧಾನ ಮಂತ್ರಿಗಳು NH-150C ಯ 71 ಕಿಮೀ ವಿಭಾಗದ ಅಡಿಗಲ್ಲು ಹಾಕಲಿದ್ದಾರೆ. ಈ 6 ಲೇನ್ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಯು ಸೂರತ್ – ಚೆನ್ನೈ ಎಕ್ಸ್‌ಪ್ರೆಸ್‌ವೇ ಭಾಗವಾಗಿದೆ. 2100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸೂರತ್ – ಚೆನ್ನೈ ಎಕ್ಸ್‌ಪ್ರೆಸ್‌ವೇ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ- ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು. ಇದು ಅಸ್ತಿತ್ವದಲ್ಲಿರುವ ಮಾರ್ಗವನ್ನು 1600 ಕಿಲೋಮೀಟರ್‌ಗಳಿಂದ 1270 ಕಿಮೀಗಳಿಗೆ ಕಡಿಮೆ ಮಾಡುತ್ತದೆ.
ಮಧ್ಯಾಹ್ನ 3.10ಕ್ಕೆ ಮಳಖೇಡ ಹೆಲಿಪ್ಯಾಡ್‌ನಿಂದ ವಾಪಸ್ ತೆರಳುವ ಮೋದಿ ಕಲಬುರಗಿ ಏರ್‌ಪೋರ್ಟ್‌ನಿಂದ ಮುಂಬೈಗೆ ವಾಪಸಾಗಲಿದ್ದಾರೆ.
ಕರ್ನಾಟಕ ಪ್ರವಾಸದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್
ಇನ್ನು ನಾಳೆ ಕರ್ನಾಟಕ ಪ್ರವಾಸಕೈಗೊಳ್ಳುವ ಬಗ್ಗೆ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. 10,000 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡುತ್ತೇವೆ. ಈ ಕಾಮಗಾರಿಗಳು ಜಲ ಶಕ್ತಿ ಹಾಗೂ ರಸ್ತೆಗಳು ಒಳಗೊಂಡಿವೆ. ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ನಾಳೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
Published On - 9:01 pm, Wed, 18 January 23