ಚಿಕ್ಕಬಳ್ಳಾಪುರ: ಗಾಂಜಾ, ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಆದರೆ ಇನ್ನೂ ಕೆಲವು ವ್ಯಕ್ತಿಗಳು ಮಾದಕ ವಸ್ತು ಆಫೀಮು ಮೊರೆ ಹೋಗುವುದನ್ನು ಮಾತ್ರ ಬಿಟ್ಟಿಲ್ಲ. ಅದರಂತೆ ರಾಜಾಸ್ಥಾನದಿಂದ ಚಿಕ್ಕಬಳ್ಳಾಪುರಕ್ಕೆ ಅಫೀಮು ತಂದಿದ್ದು, ವ್ಯಾಪಾರಿಗಳು ಸೇರಿದಂತೆ ಯುವ ಜನಾಂಗವನ್ನು ಇದರತ್ತ ಸೆಳೆಯುತ್ತಿದ್ದಾರೆ. ಆದರೆ ಸದ್ಯ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ.
ಗಾಂಜಾ, ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಅಕ್ರಮ ಸರಬರಾಜಿನ ಮೇಲೆ ಪೊಲೀಸರು ಎಷ್ಟೇ ಕಣ್ಣು ಇಟ್ಟರೂ ಕೆಲವರು ಹೇಗಾದರೂ ಮಾಡಿ ಮಾದಕ ವಸ್ತುಗಳನ್ನು ತಂದು ಬೇಕಾದವರಿಗೆ ಮಾರಾಟ ಮಾಡುತ್ತಾರೆ. ಇದೇ ರೀತಿ ಚಿಕ್ಕಬಳ್ಳಾಪುರ ನಗರದಲ್ಲಿ ಬಟ್ಟೆ ಹಾಗೂ ಪ್ಲಾಸ್ಟಿಕ್ ವ್ಯಾಪಾರಿಯೊಬ್ಬ ರಾಜಾಸ್ಥಾನದಿಂದ ಅಫೀಮು ತರಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ರಾಜಾರೋಷವಾಗಿ ಮಾರಾಟ ಮಾಡಿ ನಗರದ ಕೆಲವು ವರ್ತಕರು ಮತ್ತು ಅವರ ಮಕ್ಕಳು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳನ್ನು ಮಾದಕ ವಸ್ತುವಿನ ಕಡೆ ಸೆಳೆಯುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಕೆ.ರವಿಶಂಕರ್ ಹಾಗೂ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಅವರಿಂದ 388 ಗ್ರಾಂ ತೂಕದ ಮಾದಕ ವಸ್ತು ಅಫೀಮು ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲತಃ ರಾಜಾಸ್ಥಾನದ ಬಡಿಪೋಲ್, ಜಾಲೋರ್ ನಗರದ ನಿವಾಸಿಯಾದ ರಾಣಾಸಿಂಗ್ ಹಾಗೂ ಜೋಗ್ ಸಿಂಗ್, ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ವ್ಯಾಪಾರಕ್ಕೆ ಎಂದು ಆಗಮಿಸಿದ್ದು, ಬಟ್ಟೆ ಹಾಗೂ ಪ್ಲಾಸ್ಟಿಕ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಸದ್ಯ ಇಬ್ಬರು ಪೊಲೀಸರ ವಶದಲ್ಲಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗಿದೆ. ತನಿಖೆ ವೇಳೆ ಇನ್ನೂ ಕೆಲವರು ಮಾದಕ ವಸ್ತು ಮಾರಾಟ ಮಾಡಿದುದರ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗಾಂಜಾಗಿಂತ ಅಪಾಯಕಾರಿ ಹಾಗೂ ನಶೆ ಏರುವ ಮಾದಕ ವಸ್ತು ಎಂದರೆ ಅಫೀಮು. ಸ್ಥಳಿಯವಾಗಿ ಲಭ್ಯವಿಲ್ಲದಿದ್ದರು ಬೇರೆ ರಾಜ್ಯಗಳಿಂದ ತರಿಸಿ ಆರೋಪಿಗಳು ಮಾರಾಟ ಮಾಡಿದ್ದು, ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದ ಸುತ್ತಮುತ್ತ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳಿದ್ದು, ಅಲ್ಲಿಯ ಕೆಲವು ವಿದ್ಯಾರ್ಥಿಗಳು ಆರೋಪಿಗಳ ಬಳಿ ಬಂದು ಹೋಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
(ವರದಿ: ಭೀಮಪ್ಪ ಪಾಟೀಲ 99809141135)
ಇದನ್ನೂ ಓದಿ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್, 5 KG ಗಾಂಜಾ ವಶ
ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 5 ಲಕ್ಷ ರೂ. ಮೌಲ್ಯದ ಅಫೀಮು ವಶ
(Police arrested two while selling opium in chikkaballapur )