ಮಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (UNLAWFUL ACTIVITIES (PREVENTION) ACT – UAPA) ಅನ್ವಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರವು ಪಿಎಫ್ಐನ ಅಧಿಕೃತ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಖಾತೆಗಳಲ್ಲಿ ಕೋಟ್ಯಾಂತರ ರೂಪಾಯಿ ಹಣ ಇತ್ತು. ಇದನ್ನು ಹೊರತುಪಡಿಸಿಯೂ ಕೋಟ್ಯಂತರ ರೂಪಾಯಿ ಹಣವು ಸಂಘಟನೆಯ ಬಳಿಯಿದೆ ಎಂದು ಟಿವಿ9ಗೆ ಜಾರಿ ನಿರ್ದೇಶನಾಲಯದ (ಇಡಿ) ಉನ್ನತ ಮೂಲದಿಂದ ಮಾಹಿತಿ ಲಭ್ಯವಾಗಿದೆ. ಕೆಲ ಸಾಮಾನ್ಯ ಕಾರ್ಯಕರ್ತರ ಖಾತೆಗಳಲ್ಲಿಯೂ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಇದು ದೇಶ-ವಿದೇಶಗಳಿಂದ ಬಂದಿರುವ ದೇಣಿಗೆ ಹಣ. ಯುಪಿಐ ಕೋಡ್, ಕ್ಯುಆರ್ ಕೋಡ್ ಮೂಲಕ ಸಣ್ಣಸಣ್ಣ ಮೊತ್ತದ ಹಣವನ್ನು ಹಲವು ಸಲ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
12 ಪಿಎಫ್ಐ ಕಚೇರಿಗಳಿಗೆ ಬೀಗ
ಪಿಎಫ್ಐ ನಿಷೇಧ ಆದೇಶ ಹೊರಬಿದ್ದ ನಂತರ ಮಂಗಳೂರಿನ 12 ಪಿಎಫ್ಐ ಕಚೇರಿಗಳಿಗೆ ಬೀಗ ಹಾಕಲಾಗಿದೆ. ಮಂಗಳೂರು, ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೋಣಾಜೆ ಸೇರಿದಂತೆ ವಿವಿಧೆಡೆ ತಡರಾತ್ರಿವರೆಗೂ ಪೊಲೀಸರು ದಾಳಿ ನಡೆಸಿದರು. ದಾಳಿ ಕಾರ್ಯಾಚರಣೆ ವೇಳೆ ದಾಖಲೆಗಳನ್ನೂ ಜಪ್ತಿ ಮಾಡಲಾಯಿತು. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಮಡಿಕೇರಿ ಪಿಎಫ್ಐ ಕಚೇರಿ ಮೇಲೆ ದಾಳಿ
ಕೊಡಗು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಡಿಕೇರಿಯ ಮಹದೇವ ಪೇಟೆಯಲ್ಲಿರುವ ಪಿಎಫ್ಐ ಕಚೇರಿ ಮೇಲೆ ಪೊಲೀಸರು ತಡರಾತ್ರಿ ದಾಳಿ ನಡೆಸಿ ಶೋಧ ನಡೆಸಿದರು. ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ನಡೆದ ತಪಾಸಣೆ ನಡೆಯಿತು. ತಪಾಸಣೆ ಬಳಿಕ ಕಚೇರಿಗೆ ಬೀಗಮುದ್ರೆ ಹಾಕಲಾಯಿತು.
ಬೆಳಗಾವಿ: ಪಿಎಫ್ಐ ಜಿಲ್ಲಾಧ್ಯಕ್ಷ ನಾಪತ್ತೆ
ಬೆಳಗಾವಿ: ದೇಶಾದ್ಯಂತ ಪಿಎಫ್‌ಐ ಸಂಘಟನೆ ನಿಷೇಧ ಆದೇಶ ಜಾರಿಗೆ ಬಂದಿದೆ. ಆದರೆ ಬೆಳಗಾವಿ ಪೊಲೀಸರಿಗೆ ಈವರೆಗೆ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ನವೀದ್ ಕಟಗಿ ಎಲ್ಲಿದ್ದಾರೆ ಎಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಬಹುದು ಎಂಬುದನ್ನು ಅರಿತಿದ್ದ ನವೀದ್ ಸುಲಭವಾಗಿ ಪರಾರಿಯಾಗಿದ್ದ. ಇದೀಗ ಪ್ರತ್ಯೇಕ ತಂಡಗಳನ್ನು ರಚಿಸಿ ನವೀದ್ ಬಂಧನಕ್ಕೆ ಪೊಲೀಸರು ನೆರೆಯ ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ಶೋಧಕಾರ್ಯ ಆರಂಭಿಸಿದ್ದಾರೆ.
ನವೀದ್ ಕಟಗಿ ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ ಅವನ ಪತ್ತೆಯು ಪೊಲೀಸರಿಗೆ ಕಷ್ಟವಾಗಿದೆ. ಪಿಎಫ್ಐ ಮೇಲೆ ಎನ್‌ಐಎ ದಾಳಿ ನಡೆಸಿದ್ದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಯುವಕರನ್ನು ಸಂಘಟಿಸಿ ಸೆ 22ರಂದು ಕಾಕತಿ ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ.
ಉಡುಪಿ: ಮುಂದುವರಿದ ಶೋಧ
ಉಡುಪಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಿಎಫ್ಐ ಮತ್ತು ಎಸ್ಡಿಪಿಐ ಕಚೇರಿಗಳನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಪಿಎಫ್ಐ ಕಚೇರಿಗೆ ಸೇರಿದ ದಾಖಲೆ, ಪೀಠೋಪಕರಣ ಜಪ್ತಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಹೂಡೆ ಮತ್ತು ಗಂಗೊಳ್ಳಿಯಲ್ಲಿರುವ ಎಸ್ಡಿಪಿಐ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಎಸ್ಡಿಪಿಐ ಮುಖಂಡರಾದ ಬಶೀರ್, ನಜೀರ್ ಮನೆಗಳನ್ನು ಪರಿಶೀಲಿಸಲು ಪೊಲೀಸರು ಮುಂದಾದರು. ಆದರೆ ಮನೆಗಳಿಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬರಿಗೈಲಿ ಹಿಂದಿರುಗಬೇಕಾಯಿತು.
Published On - 10:08 am, Thu, 29 September 22