ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ: ಪ್ರಲ್ಹಾದ್​ ಜೋಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2024 | 3:42 PM

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣದ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಳಪೆ ಗುಣಮಟ್ಟದ ಐವಿ ದ್ರಾವಣ ಕಾರಣವೆಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಗ್ಯ ಸಚಿವರು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ: ಪ್ರಲ್ಹಾದ್​ ಜೋಶಿ
ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ: ಪ್ರಲ್ಹಾದ್​ ಜೋಶಿ
Follow us on

ಬೆಂಗಳೂರು, ಡಿಸೆಂಬರ್​ 07: ಬಳ್ಳಾರಿಯ ಬಾಣಂತಿಯರ ಸಾವು ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಮನೆ ಮಗಳನ್ನ ಕಳೆದುಕೊಂಡ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ  ಸಮರ ಸಾರಿದೆ. ಸದ್ಯ ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದು, ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ. ಆದರೆ ಕೇಂದ್ರ ವಿರುದ್ಧ ಪದೇಪದೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಸಿದ್ದರಾಮಯ್ಯ ರಾಜಕೀಯಕ್ಕೆ ಬರುವಾಗ ಬಳ್ಳಾರಿ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಐವಿ ದ್ರಾವಣ ಸ್ಯಾಂಪಲ್​​ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ ಪಕ್ಕದ ರಾಜ್ಯಗಳಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಲಿಲ್ಲ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವೇ ಇದೆಯಲ್ವಾ? ಅಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 5 ಬಾಣಂತಿಯರ ಸಾವು: ಬಿಮ್ಸ್​ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣ ವಿಫಲರಾಗಿದ್ದಾರೆ. ಆರೋಗ್ಯ ಸಚಿವರು ಬರೀ ಮುಖ್ಯಮಂತ್ರಿ ಹಿಂದೆ ಓಡಾಡಿಕೊಂಡಿದ್ದಾರೆ. ಯಾವ ಮಂತ್ರಿಗಳೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಎಂದು ಸಂಪುಟದಲ್ಲಿ ಸಚಿವರಿಗೆ ಸಿಎಂ ಹೇಳಿದ್ದಾರೆ, ಆದರೂ ಮಂತ್ರಿಗಳು ಇದುವರೆಗೂ ಭೇಟಿ ನೀಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಸುಳ್ಳು ಹೇಳುವ ಸಿಎಂ ಅನ್ನು ರಾಜ್ಯ ಹಿಂದೆ ಕಂಡಿಲ್ಲ

ನಬಾರ್ಡ್​ನಿಂದ ರಾಜ್ಯಕ್ಕೆ ಹಣ ಕಮ್ಮಿ ಮಾಡಿಲ್ಲ. ಇಡೀ ದೇಶಕ್ಕೆ ಕಡಿಮೆಯಾಗಿದೆ. ಈ ವಿಚಾರದಲ್ಲಿ ಸಿಎಂ ಸುಳ್ಳು ಹೇಳಿದ್ದಾರೆ. ಬ್ಯಾಂಕ್​ಗಳು ಕೃಷಿ ವಲಯಕ್ಕೆ ಉತ್ತಮವಾಗಿಯೇ ಸಾಲ ಕೊಡುತ್ತಿವೆ. ರಾಷ್ಟ್ರೀಯ ಬ್ಯಾಂಕ್​ಗಳು, ಸಹಕಾರ ಬ್ಯಾಂಕ್​ಗಳು 4% ಬಡ್ಡಿ ದರದಲ್ಲೇ ಸಾಲ ಕೊಡುವುದು. ಆದರೆ ಸಿಎಂ 7% ನಲ್ಲಿ ಸಾಲ ಕೊಡುತ್ತಿವೆ ಅಂತ ಸುಳ್ಳು ಹೇಳಿದ್ದಾರೆ. ಪ್ರಶ್ನೆ ಕೇಳಿದರೆ ಪತ್ರಕರ್ತರಿಗೆ ಸಿಎಂ ಬೆದರಿಸುತ್ತಾರೆ. ಜನರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಇವರು ಸುಳ್ಳುಗಾರ ಸಿದ್ದರಾಮಯ್ಯ. ಸುಳ್ಳು ಹೇಳುವುದರಲ್ಲಿ ಇವರಿಗೆ ನೊಬೆಲ್ ಸಿಗಬೇಕು. ಇಂಥಾ ಸುಳ್ಳು ಹೇಳುವ ಸಿಎಂ ಅನ್ನು ರಾಜ್ಯ ಹಿಂದೆ ಕಂಡಿಲ್ಲ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ

ರಾಜ್ಯ ಸರ್ಕಾರದಿಂದ ಮತ್ತಷ್ಟು ಕೋವಿಡ್ ಕೇಸ್ ಹಾಕುವ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್​ನವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ರಾಜ್ಯಪಾಲರೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೂ ನೈತಿಕವಾಗಿ ಅವತ್ತೇ ರಾಜೀನಾಮೆ ಕೊಡಬೇಕಿತ್ತು. ರಾಜ್ಯಪಾಲರಿಗೆ, ಸಂವಿಧಾನ ಹುದ್ದೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.