ಚೆಕ್‌ಬುಕ್ ನೀಡದ ಅಂಚೆ ಕಚೇರಿ: ಒಂದೂವರೆ ತಿಂಗಳಲ್ಲಿಯೇ ನ್ಯಾಯ ಕೊಡಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ವ್ಯವಹಾರಕ್ಕೆ ಅನುಕೂಲವಾಗಲೆಂದು ವ್ಯಕ್ತಿಯೊಬ್ಬರು ಚೆಕ್‌ಬುಕ್ ನೀಡಲು ಅಂಚೆ ಕಚೇರಿ ಮನವಿ ಮಾಡಿದ್ದರು. ಆದರೆ ಸಿಬ್ಬಂದಿ ಚೆಕ್‌ಬುಕ್ ನೀಡಲಿಲ್ಲ. ಹೀಗಾಗಿ ಆ ವ್ಯಕ್ತಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ಆರಂಭಿಸಿದ ಆಯೋಗವು ಕೇವಲ ಒಂದೂವರೆ ತಿಂಗಳಲ್ಲೇ ನ್ಯಾಯ ದೊರಕಿಸಿಕೊಟ್ಟಿದೆ.
ಧಾರವಾಡ, ಸೆ.29: ವ್ಯವಹಾರಕ್ಕೆ ಅನುಕೂಲವಾಗಲೆಂದು ವ್ಯಕ್ತಿಯೊಬ್ಬರು ಚೆಕ್‌ಬುಕ್ ನೀಡಲು ಅಂಚೆ ಕಚೇರಿ ಮನವಿ ಮಾಡಿದ್ದರು. ಆದರೆ ಸಿಬ್ಬಂದಿ ಚೆಕ್‌ಬುಕ್ ನೀಡಲಿಲ್ಲ. ಹೀಗಾಗಿ ಆ ವ್ಯಕ್ತಿ ಧಾರವಾಡ (Dharwad) ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ಆರಂಭಿಸಿದ ಆಯೋಗವು ಕೇವಲ ಒಂದೂವರೆ ತಿಂಗಳಲ್ಲೇ ನ್ಯಾಯ ದೊರಕಿಸಿಕೊಟ್ಟಿದೆ. ಆ ಮೂಲಕ ಶೀಘ್ರ ನ್ಯಾಯಾದಾನಕ್ಕೆ ಬದ್ಧವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ನಗರದ ಸಾಧನಕೇರಿ ನಿವಾಸಿ ವೀರಭದ್ರಪ್ಪ ಸದಲಪುರ ಎಂಬುವರು ಕಿತ್ತೂರು ಚೆನ್ನಮ್ಮ ಪಾರ್ಕ್ ಬಳಿಯ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. ವ್ಯವಹಾರಕ್ಕೆ ಅನುಕೂಲವಾಗಲು ರೂ. 48 ಭರಿಸಿ ಚೆಕ್‌ಬುಕ್ ನೀಡಲು ಮನವಿ ಮಾಡಿದ್ದರು. ಆದರೆ, ಅಂಚೆ ಇಲಾಖೆ ಚೆಕ್‌ಬುಕ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೀರಭದ್ರಪ್ಪ ಅವರು ಅಂಚೆ ಇಲಾಖೆ ಮೇಲೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ: ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ರೂ.17,632 ದಂಡ ಮತ್ತು ಪರಿಹಾರ ವಿಧಿಸಿದ ಗ್ರಾಹಕರ ಆಯೋಗ
ದೂರು ವಿಚಾರಣೆ ನಡೆಸಿದ ಆಯೋಗವು, ಉಭಯತರ ಮಧ್ಯೆ ಸಂದಾನ ನಡೆಸಿತು. ಕೆವೈಸಿ ಫಾರ್ಮ್ ತುಂಬಿಕೊಟ್ಟರೆ ತಾವು ದೂರುದಾರರಿಗೆ ಚೆಕ್‌ಬುಕ್ ನೀಡಲು ಸಿದ್ಧ ಎಂದು ಹಾಜರಿದ್ದ ಅಂಚೆ ಕಚೇರಿ ಅಧಿಕಾರಿ ಸದಾಶಿವ ಮಾಲೂರ ಒಪ್ಪಿಕೊಂಡಿದ್ದರು.
ಕೂಡಲೇ ದೂರುದಾರನ್ನು ಕರೆದೊಯ್ದು ಅವರ ಅಗತ್ಯ ಸಹಿಗಳನ್ನು ಪಡೆದುಕೊಂಡು ಅವರಿಗೆ ಚೆಕ್‌ಬುಕ್ ನೀಡಲಾಯಿತು. ಈ ಮೂಲಕ ರಾಜಿ ಸಂಧಾನದ ಮೂಲಕ ಈ ಪ್ರಕರಣವನ್ನು ಒಂದೂವರೆ ತಿಂಗಳಲ್ಲಿ ಇತ್ಯರ್ಥಗೊಳಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Fri, 29 September 23