ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತದೆ. ಹರಿವಿನ ಪ್ರಮಾಣ ಎಷ್ಟಿತ್ತೆಂದರೆ, ನದಿ ತುಂಬಿ ಸುತ್ತಲಿನ ಪ್ರದೇಶಗಳಲ್ಲಿಯೂ ನೀರು ಆವರಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಕೊಣ್ಣೂರ ಗ್ರಾಮಕ್ಕೆ ನೀರು ಪೂರೈಕೆಯ ಉದ್ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್ ಫಾರ್ಮರ್ ಗಳು ಮುಳುಗುವ ಸಂದರ್ಭ ಎದುರಾಗಿತ್ತು. ಅಲ್ಲದೆ, ಈ ಸಂದರ್ಭದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆಯಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಈ ಭಾಗದ ಪವರ್ ಮ್ಯಾನ್ ಮಂಜುನಾಥ ಕುಂಬಾರ ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿ ಸ್ಥಳಕ್ಕೆ ತಲುಪಿದ್ದಾರೆ. ಕೆಳಗೆ ನೆಲದಿಂದ ಒಂದಾಳು ನೀರು ತುಂಬಿತ್ತು. ಸೂಕ್ತ ಸಮಯದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂದಿರುಗಿದ್ದಾರೆ. ಇದರಿಂದ ಇದಕ್ಕೂ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುವದರಿಂದ ನೀರು ಸರಬರಾಜಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿದ್ದಾರೆ. ಮಂಜುನಾಥರ ಈ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಕೂಡಲೇ ಈ ಟ್ರಾನ್ಸಫರ್ಮರ್ ನ ಸಂಪರ್ಕ ಕಡಿತಗೊಳಿಸದಿದ್ದರೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆಯಾಗುವಂತಿತ್ತು. ಇದರ ಸಂಪರ್ಕ ಕಡಿತಗೊಳಿಸಿದಾಗ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನೀರು ಸರಬರಾಜು ಮುಂದುವರೆಯುತ್ತದೆ. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗಲೂ ಈ ಸಮಸ್ಯೆ ಎದುರಾಗುತ್ತದೆ. ಆದರೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ. ಹೀಗಾಗಿ ಈ ಅಪಾಯವನ್ನು ಎದುರಿಸಲು ತಯಾರಾದೆ ಅಂತ ಕೆಇಬಿ ಪವರ್ ಮ್ಯಾನ್ ಮಂಜುನಾಥ ಕುಂಬಾರ ಟಿವಿ 9 ಡಿಜಿಟಲ್ ಗೆ ಹೇಳಿದ್ದಾರೆ.
Published On - 6:27 pm, Wed, 14 September 22