
ಬೆಂಗಳೂರು, (ಆಗಸ್ಟ್ 01): ಕೆ.ಆರ್ .ನಗರ ಅತ್ಯಾಚಾರ ಪ್ರಕರಣದಲ್ಲಿ ಕಳೆದ 14 ತಿಂಗಳಿನಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (Bengaluru Special Court)ಇಂದು (ಆಗಸ್ಟ್ 01) ತೀರ್ಪು ಪ್ರಕಟಿಸಿದ್ದು, ನಾಳೆ(ಆಗಸ್ಟ್ 02) ಕೋರ್ಟ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ. ಇನ್ನು ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ಜಡ್ಜ್ ಗಜಾನನ ಭಟ್ ಹೊಸ ದಾಖಲೆ ಬರೆದಿದ್ದಾರೆ. ಹೌದು..ಈ ರೀತಿಯ ಅತ್ಯಾಚಾರ ಪ್ರಕರಣವನ್ನು ತ್ವರಿತ ಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಕೇವಲ 7 ತಿಂಗಳಲ್ಲೇ ತೀರ್ಪು ಪ್ರಕಟಿಸಿರುವುದು ದಾಖಲೆಯಾಗಿದೆ. ಈವರೆಗೂ ಈ ರೀತಿ ಪ್ರಕರಣದಲ್ಲಿ ಇಷ್ಟು ಬೇಗ ವಿಚಾರಣೆ ನಡೆಸಿ ತೀರ್ಪು ನೀಡಿದ ಉದಾಹರಣೆಗಳಿಲ್ಲ. ಹೀಗಾಗಿ ನ್ಯಾಯಾಧೀಶ ಗಜಾನನ ಭಟ್ ಅವರು ಈ ದಾಖಲೆ ಮಾಡಿದ್ದಾರೆ.
ಸಾಮಾನ್ಯವಾಗಿ ಪ್ರಕರಣ ಕೋರ್ಟ್ನಲ್ಲಿದೆ ಅಂದ್ರೆ ಸ್ವಲ್ಪ ವಿಳಂಬವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಈ ರೀತಿ ಕೇಸ್ ನಲ್ಲಿ ವಾದ ಪ್ರತಿವಾದ, ಆ ಅರ್ಜಿ , ಈ ಅರ್ಜಿ ಹಾಕಿಕೊಂಡು ಮುಂದೂಡಕೆಯಾತ್ತಲೇ ಇರುತ್ತವೆ. ಆದ್ರೆ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೋರ್ಟ್, ತ್ವರಿತಗತಿಯಲ್ಲಿ ಸಾಕ್ಷ್ಯ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ಕೇವಲ ಏಳೇ ಏಳು ತಿಂಗಳಲ್ಲಿ ತೀರ್ಪು ನೀಡಿರುವುದು ದಾಖಲೆಯಾಗಿದೆ.
ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಿಸಬಹುದೇ? ಸ್ಯಾಮ್ಸಂಗ್ ಜೆ 4 ಮೊಬೈಲ್ ಸೀಜ್ ಮಾಡಿರುವ ಬಗ್ಗೆಯೂ ವಿವರಣೆ ಕೇಳಿತ್ತು. ಕೆಲ ಕಾಲ ವಿಚಾರಣೆಯನ್ನು ಮುಂದೂಡಿದ್ದ ಕೋರ್ಟ್, ಇದೀಗ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣ ಸಂಬಂಧ ತ್ವರಿತಗತಿಯಲ್ಲಿ ಕೇವಲ ಏಳೇ ತಿಂಗಳಲ್ಲಿ ಎಲ್ಲಾ ವಿಚಾರಣೆ ನಡೆಸಿ ಕೋರ್ಟ್ ತೀರ್ಪು ನೀಡಿರುವುದು ವಿಶೇಷವಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಕೆ. ಆರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಒಟ್ಟು 424 ಪುಟಗಳ ತೀರ್ಪುನ್ನು ಪ್ರಕಟಿಸಿದೆ. ಇನ್ನೂ ಮೂರು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
ಕೆಲ ತಿಂಗಳ ಹಿಂದೆ ನಡೆದ ಕರ್ನಾಟಕ ಹೈಕೋರ್ಟ್‌ನ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಕಾರು ಚಾಲಕನಿಂದ ಪಡೆದ ಫೋಟೋ, ವಿಡಿಯೋ ಸಾಕ್ಷಿಯನ್ನು ನೀಡುವಂತೆ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ನಲ್ಲಿ ಮನವಿ ಮಾಡಿದ ಸಂದರ್ಭದಲ್ಲಿ ಎಲ್ಲಾವೂ ಅಶ್ಲೀಲವಾಗಿವೆ ಎಂದು ಕೋರ್ಟ್ ಕಿಡಿಕಾರಿತ್ತು. ಜತೆಗೆ ಈ ಎಲ್ಲಾ ಸಾಕ್ಷಿ ವಿಡಿಯೋ, ಫೋಟೋಗಳನ್ನು ನೀಡುವುದಿಲ್ಲ ಎಂದು ನಿರಾಕರಣೆ ಮಾಡಿತ್ತು.
2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ಈ ಸಂಬಂಧ ದೂರು ನೀಡಿದ್ದರು. ಮಹಿಳೆ ನಿಡಿದ್ದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಬಳಿಕ ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡದ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2,000 ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2024ರ ಅಂತ್ಯದಲ್ಲಿ ಈ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.