ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು: ಯಾವ ಸೆಕ್ಷನ್ ಅಡಿ ಎಷ್ಟೆಷ್ಟು ಶಿಕ್ಷೆ, ದಂಡ? ಇಲ್ಲಿದೆ ವಿವರ

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಲ್ಲದೆ, ಪ್ರಕರಣ ಮುಚ್ಚಿಹಾಕಲು ಆಕೆಯನ್ನು ಅಪಹರಿಸಿ ಬೆದರಿಕೆ ಹಾಕಿದ್ದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಿದೆ. ಅಲ್ಲದೆ, ವಿವಿಧ ಸೆಕ್ಷನ್​​ಗಳ ಅಡಿ ದಂಡವನ್ನೂ ವಿಧಿಸಿದೆ. ಅವುಗಳ ಪೂರ್ಣ ವಿವರ ಇಲ್ಲಿದೆ.

ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು: ಯಾವ ಸೆಕ್ಷನ್ ಅಡಿ ಎಷ್ಟೆಷ್ಟು ಶಿಕ್ಷೆ, ದಂಡ? ಇಲ್ಲಿದೆ ವಿವರ
ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು
Updated By: Ganapathi Sharma

Updated on: Aug 02, 2025 | 6:21 PM

ಬೆಂಗಳೂರು, ಆಗಸ್ಟ್ 2: ಕೆಆರ್​ ನಗರ ಮಹಿಳೆಯ ಅತ್ಯಾಚಾರ ಕೇಸ್​​ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಮಹತ್ವದ ತೀರ್ಪು ಕೊಟ್ಟಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revannaಜೀವನಪರ್ಯಂತ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಯಾವುದೇ ಕರುಣೆಯನ್ನು ತೋರದ ಕೋರ್ಟ್​, ಕಠಿಣಾತಿ ಕಠಿಣವಾಗಿ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಕೊಟ್ಟಿದೆ. ಇಂದಿನಿಂದಲೇ ಪ್ರಜ್ವಲ್ ರೇವಣ್ಣಗೆ ಜೈಲು ಶಿಕ್ಷೆ ಅಧಿಕೃತವಾಗಿ ಆರಂಭವಾಗಲಿದೆ.

ಕೋರ್ಟಿನಲ್ಲಿ ಶುಕ್ರವಾರ ಕಣ್ಣೀರಿದ್ದ ಪ್ರಜ್ವಲ್ ರೇವಣ್ಣ, ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಬೇಡಿಕೊಂಡಿದ್ದರು. ಇಂದೂ ಕೂಡ ಕಣ್ಣೀರಿಟ್ಟಿದ್ದರು. ಆದರೆ ಯಾವ ಪ್ರಾರ್ಥನೆಯೂ ಫಲಿಸಲಿಲ್ಲ. ಮಾಡಿದ ಪಾಪ ಕೃತ್ಯಕ್ಕೆ ಕೋರ್ಟ್​ ಕಠಿಣ ಶಿಕ್ಷೆಯನ್ನೇ ಕೊಟ್ಟಿದೆ.

ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ

ಸೆಕ್ಷನ್ – ಶಿಕ್ಷೆ – ದಂಡ (ರೂ.ಗಳಲ್ಲಿ)

  • IPC 376 (2)(k) – ಜೀವಾವಧಿ ಶಿಕ್ಷೆ – 5 ಲಕ್ಷ
  • IPC 376(2)(n) – ಜೀವನಪರ್ಯಂತ ಜೈಲು – 5 ಲಕ್ಷ
  • IPC 354(A) – 3 ವರ್ಷ ಸೆರೆವಾಸ – 25,000
  • IPC 354(B) – 7 ವರ್ಷ ಸೆರೆವಾಸ – 50,000
  • IPC 354(c) – 3 ವರ್ಷ ಸೆರೆವಾಸ – 25,000
  • IPC 506 – 2 ವರ್ಷ ಸೆರೆವಾಸ – 10,000
  • IPC 201 – 3 ವರ್ಷ ಸೆರೆವಾಸ – 25,000
  • ಐಟಿ ಕಾಯ್ದೆ ಸೆ.66(E) – 3 ವರ್ಷ ಸೆರೆವಾಸ – 25,000

ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ ಬರೋಬ್ಬರಿ 11.60 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 376 (2)(k)ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿದ್ದರೆ, 376(2)(n) ಅಡಿ ಪದೇಪದೆ ಅತ್ಯಾಚಾರ ಸಂಬಂಧ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 354(A) ಅಡಿಯಲ್ಲಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 354(B) ಅಡಿಯಲ್ಲಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ, ಐಪಿಸಿ ಸೆಕ್ಷನ್‌ 354(c) 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ ವಿಧಿಸಿದ್ದರೆ, ಐಪಿಸಿ ಸೆಕ್ಷನ್‌ 506 ಅಡಿಯಲ್ಲಿ 2 ವರ್ಷ ಸೆರೆವಾಸ, 10,000 ರೂಪಾಯಿ ದಂಡ, ಐಪಿಸಿ ಸೆಕ್ಷನ್‌ 201ಅಡಿಯಲ್ಲಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ, ಐಟಿ ಕಾಯ್ದೆ ಸೆ.66(E) ಅಡಿಯಲ್ಲಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ ವಿಧಿಸಲಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಹಿನ್ನೆಲೆ

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಗನ್ನಿಕಡ ತೋಟದ ಮನೆಯಲ್ಲಿ ಮಹಿಳೆಯ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದ. ಕುಡಿಯಲು ನೀರು ತೆಗೆದುಕೊಂಡು ಬಾ ಎಂದು ಹೇಳಿದ್ದ ಆತ, ಆಕೆ ಕೊಠಡಿಗೆ ನೀರು ತರುತ್ತಿದ್ದಂದೆಯೇ ಬಾಗಿಲು ಹಾಕಿದ್ದ. ಬಾಗಿಲು ತೆಗೆಯಣ್ಣ ಎಂದರೂ ಬಿಡದೆ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದ. ಬಲವಂತವಾಗಿ ಸೀರೆ, ಬ್ಲೌಸ್ ತೆಗೆದು ದೌರ್ಜನ್ಯವೆಸಗಿದ್ದ. ಬಲವಂತವಾಗಿ ಅತ್ಯಾಚಾರ ಎಸಗಿದ್ದ ಪ್ರಜ್ವಲ್, ಅತ್ಯಾಚಾರದ ವಿಡಿಯೋ ಮಾಡಿಕೊಂಡಿದ್ದ.

ಅತ್ಯಾಚಾರ ಕೇಸ್ ಹಿನ್ನೆಲೆ

ಬಸವನಗುಡಿಯ ಮನೆ ಸ್ವಚ್ಛಗೊಳಿಸಲು ಬಂದಾಗಲೂ ಇದೇ ರೀತಿ ವರ್ತನೆ ತೋರಿದ್ದ. ಒಗೆಯೋಕೆ ಬಟ್ಟೆ ತೆಗೆದುಕೊಂಡು ಹೋಗುವಂತೆ ಮಹಿಳೆಯನ್ನು ಕರೆದಿದ್ದ. ಆಕೆ ಕೊಠಡಿಗೆ ಹೋಗಲು ಹಿಂಜರಿದಾಗ ಮಹಿಳೆಯನ್ನು ಗದರಿದ್ದ. ರೂಮ್ ಒಳಗೆ ಹೋಗುತ್ತಿದ್ದಂತೆಯೇ ಬಾಗಿಲಿನ ಚಿಲಕ ಹಾಕಿದ್ದ. ರೂಮ್ ಲಾಕ್ ಮಾಡಿಕೊಂಡು ಬಲವಂತವಾಗಿ ಅತ್ಯಾಚಾರವೆಸಗಿದ್ದ. ವಿಷಯ ಬಾಯಿಬಿಟ್ಟರೆ ಮಗನಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

ಮಾಡಿದ ಪಾಪಕೃತ್ಯಕ್ಕೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಆಗಿದೆ. ಜೀವನ ಪರ್ಯಂತ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ