
ಹುಬ್ಬಳ್ಳಿ, ಸೆಪ್ಟೆಂಬರ್ 30: ಕೇಂದ್ರದಂತೆ ರಾಜ್ಯ ಸರ್ಕಾರವೂ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಮಾಡಬಹುದು. ರಾಜ್ಯ ಸರ್ಕಾರಗಳಿಗೆ ಈ ಸ್ವಾತಂತ್ರ್ಯವನ್ನ ನೀಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳು ಎಫ್‌ಆರ್‌ಪಿ ನೀಡುತ್ತಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಎಫ್‌ಆರ್‌ಪಿ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರವಾಗಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ‘ಅಕ್ಟೋಬರ್ 12ರಂದು ರೈತರ ಜೊತೆಗೆ ಸಭೆ ನಡೆಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರಿಗೆ ನೆರವಾಗುವ ಉತ್ತಮ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚೆಗೆ ನಾವು ಸಿದ್ಧ, ಅವರು ಬಂದಾಗ ಅವರೊಂದಿಗೆ ಗೌರವ ಮತ್ತು ಪ್ರೀತಿಯಿಂದ ನಾವು ಮಾತುಕತೆ ನಡೆಸಲು ಸಿದ್ಧ’ ಎಂದು ಹೇಳಿದರು.
ಇದನ್ನೂ ಓದಿ: ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ
‘2018ರಿಂದ ಇದೇ ಬೆಲೆ ಇದೆ, ಅದನ್ನು ಅಲ್ಲಗಳೆಯಲ್ಲ. 31 ರೂಪಾಯಿಗಿಂತ ಹೆಚ್ಚಿಗೆ ಮಾರಾಟ ಮಾಡಬಹುದು. ಕಡಿಮೆ ಬೆಲೆಗೆ ಮಾರಾಟ ಮಾಡುವಂತಿಲ್ಲ. ಕಾರ್ಖಾನೆಗಳ ಹಿತಾಸಕ್ತಿ ಕಾಯ್ದುಕೊಳ್ಳಲು ಈ ನಿಯಮ ಮಾಡಲಾಗಿದೆ. ಬೆಲೆಯಲ್ಲಿ ವ್ಯತಾಸ ಆದರೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದ್ದು, ಸಕ್ಕರೆ ಕಾರ್ಖಾನೆಗಳು ದಿವಾಳಿ ಆಗುವ ಸಾಧ್ಯತೆಗಳಿರುತ್ತೆ. ಆಗ ಬೆಂಬಲ ಬೆಲೆ ನೀಡುವ ಬಗ್ಗೆ ಚರ್ಚೆ ಬರುತ್ತದೆ’ ಎಂದರು.
‘ಮಾರುಕಟ್ಟೆಯಲ್ಲಿ ಸಕ್ಕರೆ ಕಡಿಮೆ ಆದರೆ ಮಾತ್ರ ಅಂತಹ ಸಮಯದಲ್ಲಷ್ಟೇ ಸರ್ಕಾರ ಮಧ್ಯಪ್ರವೇಶಿಸುತ್ತದೆ. ಕನಿಷ್ಠ ಬೆಲೆ, ಬೆಂಬಲ ಬೆಲೆ ವಿಚಾರದಲ್ಲಿ ಗೊಂದಲ ಆಗುತ್ತಿದೆ. ರೈತರಿಗೆ ನೀಡುವುದನ್ನು ಎಫ್‌ಆರ್‌ಪಿ ಎಂದು ಕರೆಯುತ್ತಾರೆ. ಮೊದಲು 210 ರೂ ಇತ್ತು, ಈಗ 365 ರೂ. ಇದೆ’ ಎಂದು ಸ್ಪಷ್ಟನೆ ನೀಡಿದರು.
‘ಯುಪಿಎ ಸರ್ಕಾರ 80 ಪೈಸೆ ಎಫ್‌ಆರ್‌ಪಿ ಹೆಚ್ಚಿಸಿದ್ದ ದಾಖಲೆ ಇದೆ. ಮೋದಿ ಸರ್ಕಾರಕ್ಕೂ ಮುನ್ನ ರೈತರಿಗೆ ಕಾರ್ಖಾನೆಗಳು ಹಣ ನೀಡುತ್ತಿರಲಿಲ್ಲ. ಸಾವಿರಾರು ಕೋಟಿ ರೂ ಬಾಕಿ ಉಳಿಸಿಕೊಂಡಿದ್ದವು. ನಮ್ಮ ಸರ್ಕಾರ ಬಂದ ಬಳಿಕ 16,500 ಕೋಟಿ ರೂ ಕೊಟ್ಟು ರೈತರಿಗೆ ಹಣ ನೀಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
‘ಇಂದು ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಹೆಚ್ಚಾಗಿದೆ. ಮೋದಿ ಸರ್ಕಾರ ಎಥೆನಾಲ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇಂದು 20% ಎಥೆನಾಲ್ ಬ್ಲೆಂಡ್ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಂದ 1200 ಕೋಟಿ ಲೀಟರ್ ಎಥೆನಾಲ್ ಸರ್ಕಾರ ಖರೀದಿ ಮಾಡುತ್ತಿದೆ. ಕಾರ್ಖಾನೆಗಳು ಈಗ ಹೆಚ್ಚಿನ ಎಥೆನಾಲ್ ಉತ್ಪಾದನೆ ಮಾಡುತ್ತಿವೆ. ಮುಂದೆ ಹೊಸ ಬದಲಾವಣೆಗಳಲ್ಲಿ ಬ್ಲೆಂಡಿಂಗ್ ಹೆಚ್ಚಾಗಬಹುದು. ಸಕ್ಕರೆ ಬೆಲೆ ಹೆಚ್ಚಾದಾಗ ಸಕ್ಕರೆ ಉತ್ಪಾದನೆ ಕಡಿಮೆ ಆಗಿದೆ. ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಉತ್ಪಾದನೆ ಕಡಿಮೆ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಸರ್ಕಾರದ ಎಥೆನಾಲ್ ಖರೀದಿಯಿಂದ ರೈತರಿಗೆ ಸಹಾಯವಾಗಿದೆ. ಎಥೆನಾಲ್ ಖರೀದಿ ಮಾಡುವಾಗ 14 ದಿನಗಳಲ್ಲಿ ಕಾರ್ಖಾನೆಯಿಂದ ರೈತರಿಗೆ ಕಬ್ಬಿಣ ಹಣ ಕೊಡಬೇಕು ಎಂದು ಷರತ್ತು ಹಾಕಿದೆ. ಮೊದಲು ವರ್ಷಗಟ್ಟಲೇ ರೈತರಿಗೆ ಹಣ ಕೊಡಲು ವಿಳಂಬ ಮಾಡುತ್ತಿದ್ದ ಕಾರ್ಖಾನೆಗಳು, ಈಗ ಸರಿಯಾದ ಸಮಯಕ್ಕೆ ರೈತರಿಗೆ ಹಣ ನೀಡಲಾಗುತ್ತಿದೆ. 98% ರೈತರಿಗೆ ಕಾರ್ಖಾನೆಗಳು ರೈತರಿಗೆ ಕಬ್ಬಿಣ ಹಣ ಪಾವತಿಸಿವೆ’ ಎಂದು ಅವರು ಹೇಳಿದ್ದಾರೆ.
‘ಸಕ್ಕರೆ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಕನಿಷ್ಠ ಬೆಲೆ 30-31 ರೂ.ನಲ್ಲಿ ಮಾರುವಂತೆ ನಿಯಮವಿದೆ. ಒಳ್ಳೆಯ ದರ ಬಂದಾಗ ಮಾರಬೇಕೆಂದು ರೂಲ್ಸ್ ಮಾಡಿದ್ದೇವೆ. 15 ಕಿ.ಮೀ. ಮಧ್ಯದಲ್ಲಿ ಒಂದು ಸಕ್ಕರೆ ಫ್ಯಾಕ್ಟರಿ ಇರಬೇಕು. ರೈತರಿಗೆ ಉಪಯೋಗವಾಗಲೆಂದು ಈ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಮೊದಲ ಆದ್ಯತೆ, ಗ್ರಾಹಕರಿಗೆ ಎರಡನೇ ಆದ್ಯತೆ ನೀಡಲಾಗುತ್ತದೆ. ಈ ವಿಚಾರವಾಗಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ಮಾಡುವುದಾಗಿ ಹೇಳಿದ್ದಾರೆ’ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.