ಹಿಂದೂ ಪದದ ಬಗ್ಗೆ ಸತೀಶ್‌ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ: ಪ್ರಮೋದ್ ಮುತಾಲಿಕ್

| Updated By: ರಶ್ಮಿ ಕಲ್ಲಕಟ್ಟ

Updated on: Nov 07, 2022 | 6:01 PM

ಸತೀಶ್ ಅವರಿಗೆ ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕ್ಷಮೆ ಕೇಳಲಿ. ಹಿಂದೂ ಶಬ್ದ ಅತ್ಯಂತ ಪ್ರಾಚೀನ ಮತ್ತು ಪುರಾತನವಾದುದು.ಕ್ರಿಸ್ತ ಪೂರ್ವದಿಂದಲೂ ಹಿಂದೂ ಶಬ್ದ ಬಳಕೆಯಲ್ಲಿದೆ.

ಹಿಂದೂ ಪದದ ಬಗ್ಗೆ ಸತೀಶ್‌ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ: ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
Follow us on

ಹಿಂದೂ ಪದದ ಬಗ್ಗೆ ಸತೀಶ್ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಟಿವಿ9 ಜತೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod muthalik) ಹೇಳಿದ್ದಾರೆ. ಕಾಂಗ್ರೆಸ್ ನಾಯಕ (Congress) ಸತೀಶ್ ಜಾರಕಿಹೊಳಿ (Satish Laxmanrao Jarkiholi) ಹೇಳಿಕೆಯನ್ನು ನಾನು ಖಂಡಿಸುವೆ. ಹಿಂದೂಗಳನ್ನು ಅವಹೇಳನ ಮಾಡುತ್ತಿರೋದು ಸರಿಯಲ್ಲ. ಸತೀಶ್‌ ಒಬ್ಬ ನಾಸ್ತಿಕವಾದಿ, ಹಿಂದೂ ವಿರೋಧಿ ಆಗಿದ್ದಾರೆ.ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ. ಸತೀಶ್ ಅವರಿಗೆ ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕ್ಷಮೆ ಕೇಳಲಿ. ಹಿಂದೂ ಶಬ್ದ ಅತ್ಯಂತ ಪ್ರಾಚೀನ ಮತ್ತು ಪುರಾತನವಾದುದು.ಕ್ರಿಸ್ತ ಪೂರ್ವದಿಂದಲೂ ಹಿಂದೂ ಶಬ್ದ ಬಳಕೆಯಲ್ಲಿದೆ. ಹಿಂದೂ ಶಬ್ದಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಕುವೆಂಪುರವರ ನಾಡಗೀತೆಯಲ್ಲೇ ಹಿಂದೂ ಪದ ಇದೆ. ಹಿಂದೂ ಧರ್ಮ ಜೀವನ ಪದ್ಧತಿ ಅಂತಾ ‘ಸುಪ್ರೀಂ’ ಹೇಳಿದೆ.ಹಿಂದೂ ಶಬ್ದ ಜಾತಿ ಸೂಚಕ ಅಲ್ಲ, ಮತ ಸೂಚಕ ಅಲ್ಲ ಎಂದಿದ್ದಾರೆ ಮುತಾಲಿಕ್.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

‘ಹಿಂದೂ’ (Hindu) ಎಂಬ ಪದಕ್ಕೆ ಅಸಭ್ಯ ಅರ್ಥವಿದ್ದು, ಅದರ ಮೂಲ ಭಾರತದಲ್ಲ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್  ನಾಯಕ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ  ಹೇಳಿರುವುದು ವಿವಾದಕ್ಕೀಡಾಗಿದೆ. ಹಿಂದೂ ಎಂಬ ಪದ ಇದು ಪರ್ಷಿಯನ್ ಭಾಷೆಯಿಂದ ಬಂದಿದೆ ಎಂದು ಅವರು ಹೇಳಿದ್ದಾರೆ. ಹಿಂದೂ ಎಂಬ ಪದ ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದನ್ನು ಚರ್ಚೆ ಮಾಡಬೇಕು ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾರಕಿಹೊಳಿ ಅವರ ಮಾತು ಹಿಂದೂಗಳಿಗೆ ಮಾಡಿದ ಅವಮಾನ ಮತ್ತು ಪ್ರಚೋದನೆ ಎಂದು ಬಿಜೆಪಿ ಟೀಕಿಸಿದೆ. ಹಿಂದೂ ಪದದ ಅರ್ಥವನ್ನು ತಿಳಿದರೆ ನಿಮಗೆ ನಾಚಿಕೆಯಾಗುತ್ತದೆ. ಇದು ಅಸಭ್ಯವಾಗಿದೆ ಎಂದು ಜಾರಕಿಹೊಳಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ಪದ ಎಲ್ಲಿಂದ ಬಂದಿದೆಯೆಂದು ತಿಳಿಯಲು ವಿಕಿಪೀಡಿಯಾ ಚೆಕ್ ಮಾಡಿ ಎಂದು ಅವರು ಹೇಳಿದ್ದಾರೆ.

ಜಾರಕಿಹೊಳಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ  ರೀತಿ ಮಾತನಾಡಿದ್ದಾರೆ.