ಮರ ಕಡಿದು ಹೆಲಿಪ್ಯಾಡ್​ ಮಾಡಬೇಕಾ.. ತಲೇಲಿ ಗೊಬ್ಬರ ತುಂಬಿದ್ಯಾ: ಅಧಿಕಾರಿಗಳಿಗೆ ಪ್ರತಾಪ್ ಸಿಂಹ ತರಾಟೆ

| Updated By: ganapathi bhat

Updated on: Apr 12, 2021 | 6:57 PM

ಮರ ಕಡಿದು ಹೆಲಿಪ್ಯಾಡ್ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಜನ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ಅಂದವನ್ನು ಹಾಳುಗೆಡವಲು ನಾವು ಬಿಡುವುದಿಲ್ಲ. ಮರ ಕಡಿದು, ಪರಿಸರ ಹಾಳುಮಾಡಿ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

ಮರ ಕಡಿದು ಹೆಲಿಪ್ಯಾಡ್​ ಮಾಡಬೇಕಾ.. ತಲೇಲಿ ಗೊಬ್ಬರ ತುಂಬಿದ್ಯಾ: ಅಧಿಕಾರಿಗಳಿಗೆ ಪ್ರತಾಪ್ ಸಿಂಹ ತರಾಟೆ
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಲಿತ್ ಮಹಲ್ ಪ್ಯಾಲೆಸ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೆಲಿಪ್ಯಾಡ್​ ಬಗ್ಗೆ ಈಗಾಗಲೇ ಸಾಕಷ್ಟು ವಿರೋಧ ಕೇಳಿಬಂದಿತ್ತು. ಬೆಳೆದು ನಿಂತಿರುವ ಮರಗಳನ್ನು ಕಡಿದು ಹೆಲಿಪ್ಯಾಡ್ ಮಾಡುವುದಕ್ಕೆ ಮೈಸೂರಿನ ಜನ ಅಸಮಾಧಾನ ಹೊರಹಾಕಿದ್ದರು. ಇದೀಗ ಜನರ ಧ್ವನಿಗೆ ಇನ್ನಷ್ಟು ಬಲ ಬಂದಂತಾಗಿದ್ದು ಸ್ವತಃ ಮೈಸೂರು ಸಂಸದ ಪ್ರತಾಪ್ ಸಿಂಹ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಗಳ ವಿರುದ್ಧ ಕಿಡಿಕಾರಿದ್ದಾರೆ. ಮರಗಳನ್ನು ಕಡಿದು ಹೆಲಿಪ್ಯಾಡ್ ಮಾಡುವಂತಹದ್ದೇನಿದೆ ಎಂದು ಪ್ರಶ್ನೆ ಎತ್ತಿರುವ ಪ್ರತಾಪ್​ ಸಿಂಹ ಮರದ ತೊಗಟೆ ಕೆತ್ತಿ ಗುರುತು ಮಾಡಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಲಿಟೂರಿಸಂ ಪ್ರಸ್ತಾವನೆಯ ಸ್ಥಳಕ್ಕೆ ಪ್ರತಾಪ್​ ಸಿಂಹ ಭೇಟಿ ನೀಡಿದ ವೇಳೆ ಜಾಗದ ಗುರುತಿಗಾಗಿ ಮರಗಳ ತೊಗಟೆ ತೆಗೆದು ಗುರುತು ಮಾಡಿದ್ದು ಅವರ ಗಮನಕ್ಕೆ ಬಂದಿದೆ. ಅದನ್ನು ನೋಡಿ ಸಿಟ್ಟಾದ ಸಂಸದರು ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದು ಬೇಸಿಗೆಯಲ್ಲಿ ಮರದ ತೊಗಟೆ ಒಡೆದು ಹಾಕಿದ್ದೀರಲ್ಲ. ಹೀಗೆ ಮಾಡಿದರೆ ಮರಗಳಿಗೆ ತೊಂದರೆ ಆಗುತ್ತೆ ಎನ್ನುವುದೂ ಗೊತ್ತಿಲ್ವಾ? ಎಂದು ಕೇಳಿದ್ದಾರೆ. ಆಗ ಪ್ರವಾಸೋದ್ಯಮ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡಿದ್ದಾಗಿ ಅರಣ್ಯಾಧಿಕಾರಿಗಳು ತಿಳಿಸಿದಾಗ, ಪ್ರವಾಸೋದ್ಯಮ ಇಲಾಖೆಯವ್ರ ತಲೇಲಿ ಗೊಬ್ಬರ ತುಂಬಿದೆ. ಯಾವ ಘನಕಾರ್ಯ ಮಾಡಲು ನೀವು ಮುಂದಾಗಿದ್ದೀರಿ ಎಂದು ಹರಿಹಾಯ್ದಿದ್ದಾರೆ.

ಸುಮ್ಮನೆ ಯೋಜನೆ ಮಾಡುವುದಲ್ಲ, ಅದಕ್ಕೊಂದು ರೂಪುರೇಷೆ ಬೇಕಲ್ಲವೇ? ಇಲ್ಲಿ ಮರ ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡಬೇಕಾ? 10 ಮೀ.ಟರ್ ಪಕ್ಕದಲ್ಲಿ ಈಗಾಗಲೇ ಹೆಲಿಪ್ಯಾಡ್ ಇದೆ. ರಾಜಮನೆತನದವರನ್ನು ಕೇಳಿದರೆ ಬಾಡಿಗೆಗೆ ಹೆಲಿಪ್ಯಾಡ್ ಕೊಡಲ್ಲ ಅಂತಿದ್ರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಮರಗಳ ತೊಗಟೆ ಒಡೆದು ಗುರುತು ಹಾಕಿದ್ದಕ್ಕೆ ಸಿಟ್ಟಾಗಿ, ನಾನು ಮಲೆನಾಡಿನವನು. ಮರಗಳ ಬಗ್ಗೆ ನಿಮಗಿಂತ ಹೆಚ್ಚು ಗೊತ್ತಿದೆ. ಹೀಗೆ ತೊಗಟೆ ತೆಗೆದರೆ ಅದು ಮರಗಳಿಗೆ ಹಾನಿ ಮಾಡಿದಂತೆ ಎಂದು ಪ್ರವಾಸೋದ್ಯಮ ಇಲಾಖೆ‌ ಅಸಿಸ್ಟೆಂಟ್ ಡೈರೆಕ್ಟರ್ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರಿಂದಲೂ ವಿರೋಧ
ಮರ ಕಡಿದು ಹೆಲಿಪ್ಯಾಡ್ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಜನ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ಅಂದವನ್ನು ಹಾಳುಗೆಡವಲು ನಾವು ಬಿಡುವುದಿಲ್ಲ. ಮರ ಕಡಿದು, ಪರಿಸರ ಹಾಳುಮಾಡಿ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಅರಮನೆಗೆ ಸೇರಿದ್ದು -ವಿವಾದದ ಯಾತನೆ ಬಿಚ್ಚಿಟ್ಟ ರಾಜವಂಶಸ್ಥೆ ಪ್ರಮೋದಾದೇವಿ

ಇದನ್ನೂ ಓದಿ: ನೈಟ್​ ಕರ್ಫ್ಯೂ ಜಾರಿ; ಮೈಸೂರು ಪ್ರವಾಸಿ ತಾಣಗಳು ಜನರಿಲ್ಲದೆ ಖಾಲಿ ಖಾಲಿ