ವಾರದ ಹಿಂದೆ ಘಟನೆ ನಡೆದಿದ್ದರೂ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆ: ಹರ್ಷ ಸಹೋದರಿ ಅಶ್ವಿನಿ
ಒಂದು ವಾರದ ಹಿಂದೆಯೇ ಕರಾವಳಿ ಭಾಗದಲ್ಲಿ ಕೊಲೆ ನಡೆದಿತ್ತು. ಈ ಪ್ರಕರಣದ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿತ್ತು. ಇನ್ನಾದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಇಂತಹ ಪ್ರಕರಣಗಳು ಮರುಕಳಿಸಲಿದೆ ಎಂದು ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಸಹೋದರಿ ಅಶ್ವಿನಿ ಹೇಳಿದ್ದಾರೆ.
ಶಿವಮೊಗ್ಗ: ಒಂದು ವಾರದ ಹಿಂದೆಯೇ ಕರಾವಳಿ ಭಾಗದಲ್ಲಿ ಕೊಲೆ ನಡೆದಿತ್ತು. ಈ ಪ್ರಕರಣದ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದ ಪರಿಣಾಮವೇ ಪ್ರವೀಣ್ ಹತ್ಯೆಯಾಗಿದೆ. ಹಂತಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಸಹೋದರಿ ಅಶ್ವಿನಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅಶ್ವಿನಿ, ಮಸೂದ್ ಪ್ರಕರಣದ ನಂತರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು ಎಂದಿದ್ದಾರೆ.
ಇದೇ ರೀತಿ ಕೊಲೆಗಳು ನಡೆಯುತ್ತಿದ್ದರೆ ಹೇಗೆ ಎಂದು ಪ್ರಶ್ನಿಸಿದ ಹರ್ಷ ಸಹೋದರಿ ಅಶ್ವಿನಿ, ಹರ್ಷಾ ಕಳೆದುಕೊಂಡ ನೋವಿನಲ್ಲಿ ಇರುವಾಗಲೇ ಮತ್ತೊಬ್ಬ ಸಹೋದರನನ್ನು ಕಳೆದುಕೊಂಡಿರುವೆ. ಇದರಿಂದ ನಮಗೆ ನಮ್ಮ ಕುಟುಂಬಕ್ಕೆ ಮತ್ತಷ್ಟು ಆಘಾತ ಆಗಿದೆ. ಕಳೆದ ಒಂದು ವಾರದ ಹಿಂದೆ ಅಲ್ಲಿ ಒಂದು ಘಟನೆ ನಡೆದಿತ್ತು. ಅದರ ನಂತರ ಪೊಲೀಸರು ಎಲ್ಲ ಎಚ್ಚರಿಕೆ ವಹಿಸಬೇಕಿತ್ತು ಎಂದರು.
ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಯಿತು. ಇದರಿಂದಾಗಿ ಹಂತಕರಿಗೆ ಭಯ ಇಲ್ಲದಂತಾಗಿದೆ. ಹಂತಕರಿಗೆ ಭಯ ಮುಟ್ಟಿಸುವ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಬೇಕಿದೆ ಮತ್ತು ಅಪರಾಧ ಕೃತ್ಯಗಳ ವಿರುದ್ಧ ಕಠಿಣ ಕಾನೂನಿನ ಅಗತ್ಯ ಇದೆ. ಬಿಜೆಪಿ ಸರಕಾರದ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೇ ಇಂತಹ ಪ್ರಕರಣ ಮರುಕಳಿಸುತ್ತವೆ ಎಂದು ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಪ್ರವೀಣ್ ನೆಟ್ಟಾರು ಶವಯಾತ್ರೆ ವೇಳೆ ಪೊಲೀಸರು ಕಾರ್ಯಕರ್ತರ ಮೇಲೆ ನಡೆಸಿದ ಲಾಠಿ ಚಾರ್ಜ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಶ್ವಿನಿ, ನಿನ್ನೆ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆದಿದೆ. ರಕ್ತ ಸುರಿಯುತ್ತಿದ್ಧರು ಯಾರೂ ಗಮನ ಹರಿಸಿಲ್ಲ ಎಂದರು.
ಪ್ರವೀಣ್ ಅತ್ತೆ ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ದೂರುದಾರ ಮಧು ಜೊತೆ ವಾಸ ಮಾಡುತ್ತಿದ್ದ ಅತ್ತೆ ಶೀಲಾ ಅವರು ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಮಧು ಕೆಲಸಕ್ಕೆಂದು ಹೋಗುತ್ತಿದ್ದ ಮತ್ತು ರಾತ್ರಿ 8 ರಿಂದ 9 ಗಂಟೆ ಹೊತ್ತಿಗೆ ಮನೆಗೆ ವಾಪಸ್ಸಾಗುತ್ತಿದ್ದ. ಆದರೆ ಘಟನೆ ನಡೆದ ದಿನ ರಾತ್ರಿ ಮಧು ಬರಲಿಲ್ಲ. ಹೀಗಾಗಿ ಮಧು ಪತ್ನಿ ಕರೆ ಮಾಡಿ ವಿಚಾರಿಸಿದಾಗ ಪ್ರವೀಣ್ ಹತ್ಯೆ ವಿಚಾರ ತಿಳಿದುಬಂತು ಎಂದಿದ್ದಾರೆ.
Published On - 10:34 am, Thu, 28 July 22