ಬಿಜೆಪಿಗೆ ತಟ್ಟಿದ ರಾಜೀನಾಮೆ ಬಿಸಿ: ರಾಜ್ಯಾದ್ಯಂತ ಮುಂದುವರಿದ ಬಿಜೆಪಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.

ಬಿಜೆಪಿಗೆ ತಟ್ಟಿದ ರಾಜೀನಾಮೆ ಬಿಸಿ: ರಾಜ್ಯಾದ್ಯಂತ ಮುಂದುವರಿದ ಬಿಜೆಪಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ
ಬಾಗಲಕೋಟೆಯಲ್ಲಿ ರಾಜೀನಾಮೆ ನೀಡಿದ ಬಿಜೆಪಿಯ ವಿವಿಧ ಪದಾಧಿಕಾರಿಗಳು
TV9kannada Web Team

| Edited By: Rakesh Nayak

Jul 28, 2022 | 9:45 AM

ವಿಜಯಪುರ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೀಗ ಕಾರ್ಯಕರ್ತರ ಹಾಗೂ ಮುಖಂಡರ ರಾಜೀನಾಮೆ ಬಿಸಿ ತಟ್ಟುತ್ತಿದೆ. ಹತ್ಯೆ ನಂತರ ರಾಜ್ಯಾದ್ಯಂತ ಅನೇಕ ಯುವ ಮುಖಂಡರು ತಮ್ಮ ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಪರ್ವ ಮುಂದುವರಿದಿದ್ದು, ವಿಜಯಪುರ ಜಿಲ್ಲೆಯ ಜಿಲ್ಲಾ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಸಮಿತಿಯ 9 ಮಂಡಲಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರವೀಣ್ ಹತ್ಯೆ ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಸಮಿತಿಯ 9 ಮಂಡಲಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ನಡೆದ ಕೊಲೆಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎಂದು ನಮ್ಮ ಕಣ್ಣಮುಂದೆ ಇದೆ. ಕಠಿಣ ಕ್ರಮದ ಭರವಸೆ ಭರವಸೆಯಾಗಿಯೇ ಉಳಿದ ಕಾರಣ ಸಾಮೂಹಿಕ ರಾಜೀನಾಮೆ ನೀಡುತ್ತಿರುವುದಾಗಿ ಉಲ್ಲೇಖಿಸಿ ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಅವರಿಗೆ ಸಲ್ಲಿಸಿದ್ದಾರೆ.

ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸ ಇದೆ. ವಿಚಾರ ಸಿದ್ದಾಂತಗಳಿಗಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತಹದ್ದು ಇತಿಹಾಸವಾದರೆ, ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತದೆ. ಹಿಂದೆಲ್ಲ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಕಠಿಣ ಕ್ರಮ ಎನ್ನುವ ಭರವಸೆ ಭರವಸೆಯಾಗಿ ಉಳಿದಿರುವ ಕಾರಣ ವಿಜಯಪುರ ಜಿಲ್ಲಾ ಸಮಿತಿ ಹಾಗೂ ಒಂಬತ್ತು ಮಂಡಳಗಳ ಪೂರ್ವ ಸಮಿತಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ. ಧನ್ಯವಾದಗಳು ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ. ಆದರೆ, ಜಿಲ್ಲಾಧ್ಯಕ್ಷರು ರಾಜೀನಾಮೆಯನ್ನು ಅಂಗೀಕರಿಸಿಲ್ಲ.

ಚಿತ್ರದುರ್ಗ ಜಿಲ್ಲೆಯೂ ಸಾಮೂಹಿಕ ರಾಜೀನಾಮೆ

ಚಿತ್ರದುರ್ಗ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಆಡಳಿತರೂಢ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಜಿಲ್ಲಾ ಉಪಾದ್ಯಕ್ಷ ಆರ್. ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಚಳ್ಳಕೆರೆ ತಾಲೂಕು ಯುವ ಘಟಕದ ಅದ್ಯಕ್ಷ ಎಸ್.ಶಶಿಧರ್ ಹಾಗೂ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಕಠಿಣ ಕ್ರಮದ ಭರವಸೆಯ ಬದಲು‌ ಕಠಿಣ ಕಾನೂನು ಹಾಗೂ ಮುನ್ನೆಚ್ಚರಿಕೆಯ ಕ್ರಮವನ್ನು ಜಾರಿಗೊಳಿಸುವಂತೆ ರಾಜೀನಾಮೆಯಲ್ಲಿ ಆಗ್ರಹಿಸಿದ್ದಾರೆ.

ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ ಯುವ ಮೋರ್ಚಾ ಕೋಷ್ಟಾಧ್ಯಕ್ಷ

ಕೊಪ್ಪಳ: ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಜಿಲ್ಲೆಯಲ್ಲಿ ರಾಜೀನಾಮೆ ಮುಂದುವರಿದಿದೆ. ಯುವ ಮೋರ್ಚಾದ ಗ್ರಾಮೀಣ ಮಂಡಲದ ಕೋಷ್ಟಾಧ್ಯಕ್ಷ ಅಣ್ಣಯ್ಯ ಹಿಟ್ನಾಳ್ ಅವರು ರಾಜೀನಾಮೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ತಾಯಿಗೆ ಸಮಾನ, ಒಲೈಕೆ ರಾಜಕಾರಣ ಮಾಡಬೇಡಿ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ ಹಿಟ್ನಾಳ್, ನನ್ನಂತ ಇನ್ನು ಅನೇಕ ಪಕ್ಷದ ಕಾರ್ಯಕರ್ತರು ರಾಜೀನಾಮೆ ನೀಡಲಿದ್ದಾರೆ. ಆತ್ಮಸಾಕ್ಷಿಗೆ ವಿರುದ್ದವಾಗಿ ನಾನು ಕೆಲಸ‌ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲೂ  ಸಾಮೂಹಿಕ ರಾಜೀನಾಮೆ

ಬಾಗಲಕೋಟೆ: ಪ್ರವೀಣ್ ಹತ್ಯೆಯಿಂದ ಕೆರಳಿ ಕೆಂಡಾಮಂಡಲರಾಗಿರುವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕೆ ರಾಜೀನಾಮೆ ಬಿಸಿ ತಟ್ಟಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲೂ ಸಾಮೂಹಿಕ ರಾಜೀನಾಮೆ ನೀಡಲಾಗಿದ್ದು, ಬಿಜೆಪಿಯ ವಿವಿಧ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ಸಲ್ಲಿಕೆಯಾಗಿದೆ. ಜಮಖಂಡಿ ಬಿಜೆಪಿಯ ನಗರ ಮಂಡಲ, ಒಬಿಸಿ ಮೋರ್ಚಾ, ಮಹಿಳಾ ಮತ್ತು ಎಸ್​ಸಿ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಶಿರಗನ್ನವರ್, ಜಮಖಂಡಿ ನಗರ ಮಂಡಲ ಕಾರ್ಯದರ್ಶಿ ಶಂಕರ ಕಾಳೆ, ಒಬಿಸಿ ಮೋರ್ಚಾ ಅಧ್ಯಕ್ಷ ಶಾಮ ಗಣಾಚಾರಿ, ಒಬಿಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ದೇಬಡಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಗೊರನಾಳ, ಎಸ್​ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ್ ಬೋವಿ, ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ನೀಡಿದ್ದಾರೆ.

ಮೊದಲು ಹಿಂದುತ್ವ, ನಂತರ ಪಕ್ಷ ಎಂದು ರಾಜೀನಾಮೆ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲೂ ರಾಜಿನಾಮೆ ನೀಡಲಾಗಿದ್ದು, ನಮಗೆ ಮೊದಲು ಹಿಂದುತ್ವ ನಂತರ ಪಕ್ಷ ಎಂದು ರಾಜೀನಾಮೆಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ನನ್ನ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸ್ಥಾನಕ್ಕೆ ರೇಖ ಶಂಭು ಪಟೇಲ ಅವರು ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada