ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ; ಚಾಮರಾಜನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ

Biligiriranga Hills: ಬಿಳಿಗಿರಿ ರಂಗನ ಬೆಟ್ಟದ ದೇವಸ್ಥಾನದ ಭೇಟಿಯ ಬಳಿಕ ರಾಷ್ಟ್ರಪತಿಗಳು ಚಾಮರಾಜನಗರದಲ್ಲಿ 450 ಬೆಡ್​ಗಳ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ.

ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ; ಚಾಮರಾಜನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್
Updated By: ಸುಷ್ಮಾ ಚಕ್ರೆ

Updated on: Oct 07, 2021 | 9:33 AM

ಬೆಂಗಳೂರು: 4 ದಿನಗಳ ಕರ್ನಾಟಕ ಪ್ರವಾಸಕ್ಕೆ ಬಂದಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ (Ramnath Kovind) ನಿನ್ನೆ ಐಎಎಫ್‌ ವಿಶೇಷ ವಿಮಾನದಲ್ಲಿ ಬೆಂಗಳೂರು ತಲುಪಿದ್ದಾರೆ. ಕರ್ನಾಟಕ ಪ್ರವಾಸ ಮುಗಿಸಿ ಅ. 9ರಂದು ರಾಷ್ಟ್ರಪತಿಗಳು ದೆಹಲಿಗೆ ವಾಪಾಸ್ ಹೋಗಲಿದ್ದಾರೆ. ಇಂದು ಚಾಮರಾಜನಗರಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಇಂದು ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಬಿಳಿಗಿರಿ ರಂಗನ ಬೆಟ್ಟದ ದೇವಸ್ಥಾನದ ಭೇಟಿಯ ಬಳಿಕ ರಾಷ್ಟ್ರಪತಿಗಳು ಚಾಮರಾಜನಗರದಲ್ಲಿ 450 ಬೆಡ್​ಗಳ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ರಾಷ್ಟ್ರಪತಿಗಳು ಆಗಮಿಸುತ್ತಿರುವುದರಿಂದ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿ ರಂಗನ ಬೆಟ್ಟ ಸಮೀಪ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ. ಚಾಮರಾಜನಗರ ಜಿಲ್ಲಾಡಳಿತ ಇಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿ ರಂಗನ ಬೆಟ್ಟ, ಚಾಮರಾಜನಗರ ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಚಾಮರಾಜನಗರದಲ್ಲಿ 15 ಕಿ. ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಏರ್ ಕ್ರಾಫ್ಟ್‌ ಬಳಕೆ, ಏರ್ ಬಲೂನ್ ಹಾರಾಟ, ಬ್ಯಾನರ್, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಜಿಲ್ಲಾ ಪೊಲೀಸರಿಗೂ ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರಾಷ್ಟ್ರಪತಿಗಳ ಜೊತೆ ಪಾಲ್ಗೊಳ್ಳಲಿದ್ದಾರೆ.

ಇಂದು ಮತ್ತು ನಾಳೆ ರಾಮನಾಥ್ ಕೋವಿಂದ್ ಮಂಗಳೂರಿನ ಸರ್ಕ್ಯುಟ್ ಹೌಸ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳು ಮಂಗಳೂರಿನ ಸರ್ಕ್ಯುಟ್ ಹೌಸ್‌ಗೆ ಆಗಮಿಸಲಿದ್ದಾರೆ. ಇಂದು ಸಂಜೆ ಮಂಗಳೂರಿಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ. 8ರಂದು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅ. 9ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಮನಾಥ್ ಕೋವಿಂದ್ ದೆಹಲಿಗೆ ತೆರಳಲಿದ್ದಾರೆ. ಅ. 8ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಅದಕ್ಕಾಗಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ರಾಮನಾಥ ಕೋವಿಂದ್‌ ಶೃಂಗೇರಿ ಶಾರದಾ ಪೀಠಕ್ಕೆ ಅ. 8ರಂದು ಆಗಮಿಸುವ ಹಿನ್ನೆಲೆಯಲ್ಲಿ ಮೂರು ಹೆಲಿಕಾಪ್ಟರ್‌ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್‌, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಗಿದೆ. ಹಾಗೇ, ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಅ.8ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಗೆ ಭೇಟಿ; ಜಿಲ್ಲಾಡಳಿತ ವಿರುದ್ಧ ವ್ಯಾಪಾರಸ್ಥರು ಗರಂ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ಅ 7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ

Published On - 9:25 am, Thu, 7 October 21