Private Bus Ticket Fare: ಕೆಎಸ್​ಆರ್​ಟಿಸಿ, ಮೆಟ್ರೋ ಬಳಿಕ ಮತ್ತೊಂದು ಶಾಕ್; ಖಾಸಗಿ ಬಸ್ ಟಿಕೆಟ್ ದರವೂ ಶೀಘ್ರ ಏರಿಕೆ

ಖಾಸಗಿ ಬಸ್ ಟಿಕೆಟ್ ದರ ಏರಿಕೆ: ಬೆಂಗಳೂರಿನಲ್ಲಿ ಮತ್ತು ಕರ್ನಾಟಕದಾದ್ಯಂತ ಖಾಸಗಿ ಬಸ್‌ಗಳ ಟಿಕೆಟ್ ದರ ಶೇಕಡಾ 15 ರಿಂದ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಡೀಸೆಲ್ ಬೆಲೆ ಏರಿಕೆಯನ್ನು ಕಾರಣವನ್ನಾಗಿ ನೀಡಿ ಖಾಸಗಿ ಬಸ್ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ದರ ಏರಿಕೆಯನ್ನು ಕೂಡ ಕಾರಣವಾಗಿ ನೀಡಿದ್ದಾರೆ. ಒಂದು ವೇಳೆ ದರ ಹೆಚ್ಚಳವಾದರೆ, ಈಗಾಗಲೇ ಹೆಚ್ಚುತ್ತಿರುವ ಪ್ರಯಾಣ ವೆಚ್ಚ ಮತ್ತಷ್ಟು ಹೊರೆಯಾಗಲಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Private Bus Ticket Fare: ಕೆಎಸ್​ಆರ್​ಟಿಸಿ, ಮೆಟ್ರೋ ಬಳಿಕ ಮತ್ತೊಂದು ಶಾಕ್; ಖಾಸಗಿ ಬಸ್ ಟಿಕೆಟ್ ದರವೂ ಶೀಘ್ರ ಏರಿಕೆ
ಸಾಂದರ್ಭಿಕ ಚಿತ್ರ

Updated on: Apr 16, 2025 | 8:13 AM

ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಜನರಿಗೆ ಮತ್ತೊಂದು ಬೆಲೆ ಏರಿಕೆಯ (Price Hike) ಶಾಕ್‌ ನೀಡಲು ಖಾಸಗಿ ಬಸ್‌ ಮಾಲೀಕರು (Private Bus Owners) ಸಿದ್ಧತೆ ನಡೆಸಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಟಿಕೆಟ್ ದರ ಏರಿಕೆ ಆಗಿರುವುದೇ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಸಹ ವಿವಿಧ ಕಾರಣಗಳನ್ನು ಮುಂದಿಟ್ಟು ಟಿಕೆಟ್ ದರ ಏರಿಕೆ (Private Bus Ticket price hike) ಅನಿವಾರ್ಯ ಅಂತ ಹೇಳಿರುವುದು ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯ ಸರಕಾರ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದ ಕ್ರಮ ಹಿಂಪಡೆಯದಿದ್ದರೆ ನಾವು ಟಿಕೆಟ್‌ ದರ ಹೆಚ್ಚಳ ಮಾಡುತ್ತೇವೆ ಎಂದು ಮಾಲೀಕರು ಹೇಳಿರುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟರಾಜ್ ಶರ್ಮಾ ತಿಳಿಸಿದ್ದಾರೆ. ದರ ಶೇಕಡಾ 15 ರಿಂದ 20 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಶಕ್ತಿ ಯೋಜನೆಯಿಂದಲೂ ಹೊಡೆತ: ಖಾಸಗಿ ಬಸ್ ಮಾಲೀಕರ ಅಳಲು

ಶಕ್ತಿ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ ಸುಮಾರು 429 ಕೋಟಿ ಟಿಕೆಟ್ ನೀಡಲಾಗಿದೆ. ಪ್ರತಿಪಕ್ಷಗಳ ಟೀಕೆಯ ನಡುವೆ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಆದರೆ ಖಾಸಗಿ ಸಾರಿಗೆ ಸಂಸ್ಥೆಗಳ ಆದಾಯ ನೆಲ ಕಚ್ಚುತ್ತಿದೆ. ಈಗ ಖಾಸಗಿ ಬಸ್‌ಗಳು ದರ ಏರಿಕೆ ಮಾಡದಿದ್ದರೆ ಉದ್ಯಮಕ್ಕೆ ಭಾರಿ ನಷ್ಟವಾಗಲಿದೆ. ಪ್ರತಿ ಬಸ್‌ ನಿರ್ವಹಣೆಗೆ ಸುಮಾರು 18-20 ಸಾವಿರ ರೂ. ಖರ್ಚಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ
ಮೆಟ್ರೋ ಕಾಮಗಾರಿ ವೇಳೆ ದುರಂತ:ಹೊಸದಾಗಿ ಖರೀದಿಸಿದ್ದ ಆಟೋ ಜಖಂ, ಚಾಲಕನೂ ಸಾವು
ಜಾತಿ ಗಣತಿ: ಡಿಕೆ ಶಿವಕುಮಾರ್​ಗೆ ಮಹತ್ವದ ಬೇಡಿಕೆ ಇಟ್ಟ ಒಕ್ಕಲಿಗ ಶಾಸಕರು
ಜಾತಿ ಗಣತಿ ಜಾರಿ ಮಾಡಿದ್ರೆ ಸರ್ಕಾರ ಬೀಳಿಸುತ್ತೇವೆ: ಒಕ್ಕಲಿಗರಿಂದ ಎಚ್ಚರಿಕೆ
ಖಾಸಗಿ, ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಏರಿಕೆ: ಊರಿಗೆ ಹೊರಟವರಿಗೆ ಶಾಕ್

ಪ್ರಯಾಣಿಕರಿಂದ ವಿರೋಧ

ಆದರೆ ಒಂದು ವೇಳೆ ಶೇ 20 ರಷ್ಟು ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ತೀರಾ ಹೊರೆ ಆಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಳ ಮಾಡುತ್ತವೆ. ಆದರೆ ಇದೀಗ ಕಾಯಂ ಆಗಿ ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿರುವುದು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಲಿದೆ

ಇದನ್ನೂ ಓದಿ: ಖಾಸಗಿ, ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಏರಿಕೆ: ನಾಲ್ಕೈದು ದಿನ ರಜೆಗೆಂದು ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಇತರ ಕಡೆಗಳಿಗೆ ಪ್ರಯಾಣ ಮಾಡುವ ಜನರು ಬೆಲೆ ಏರಿಕೆಯ ಪರಿಣಾಮ ತತ್ತರಿಸಿ ಹೋಗುತ್ತಿದ್ದಾರೆ. ಇನ್ನು ಖಾಸಗಿ ಬಸ್​​ಗಳ ಟಿಕೆಟ್ ಸಹ ಏರಿಕೆಯಾದರೆ ಜನ ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ‘ಟಿವಿ9’, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 am, Wed, 16 April 25