ಮಗಳನ್ನೇ ದೇವದಾಸಿ ಮಾಡಲು ಹೋದ ತಾಯಿ: ರಕ್ಷಿಸಿ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿದ ಪೊಲೀಸ್
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ತಾಯಿಯೇ ಮಗಳನ್ನು ದೇವದಾಸಿ ಪದ್ಧತಿಗೆ ದೂಡಲು ಮುಂದಾಗಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸರು ಆಕೆಯನ್ನು ರಕ್ಷಿಸಿ, ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಆ ಮೂಲಕ ಯುವತಿ ದೇವದಾಸಿ ಆಗುವುದನ್ನು ತಡೆದಿದ್ದಾರೆ. ಸದ್ಯ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಳ್ಳಾರಿ, ಏಪ್ರಿಲ್ 16: ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಸಮಾಜದಲ್ಲಿ ಕೆಲವೊಂದು ಅನಿಷ್ಟ ಪದ್ಧತಿಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅದರಲ್ಲಿ ದೇವದಾಸಿ (Devadasi) ಪದ್ಧತಿ ಕೂಡ ಒಂದು ಎನ್ನಬಹುದು. ಈ ಅನಿಷ್ಟ ಪದ್ಧತಿಯನ್ನ ನಿಲ್ಲಿಸಲು ಅದೇಷ್ಟೇ ಕಠಿಣ ಕಾನೂನುಗಳನ್ನ ಜಾರಿಗೆ ತಂದಿದ್ದರೂ ಗೌಪ್ಯವಾಗಿ ಇಂದಿಗೂ ಈ ಪದ್ದತಿಗೆ ಅದೇಷ್ಟೋ ಮಹಿಳೆಯರು (girl) ಬಲಿಯಾಗುತ್ತಿದ್ದಾರೆ. ಸದ್ಯ ಇದಕ್ಕೆ ಜಿಲ್ಲೆಯ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಪೊಲೀಸರ ಜಾಣ ನಡೆಯಿಂದ ಯುವತಿ ದೇವದಾಸಿ ಆಗೋದ್ರಿಂದ ಜಸ್ಟ್ ಮಿಸ್ ಆಗಿದ್ದಾಳೆ.
ಕುಟುಂಬಸ್ಥರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿಯನ್ನು ರಕ್ಷಿಸಿರುವ ಬಳ್ಳಾರಿ ಜಿಲ್ಲೆಯ ಕುರಿಗೋಡು ಪೊಲೀಸರು, ಆಕೆ ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್ನ ಯುವತಿ ತನ್ನದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಯುವತಿಯ ತಾಯಿ ಪ್ರೀತಿಯನ್ನು ವಿರೋಧಿಸಿದ್ದರು. ಅಲ್ಲದೇ ನೀನು ಏನಾದರೂ ಆ ಯುವಕನನ್ನ ಮದ್ವೆ ಆದರೆ ದೇವದಾಸಿ ಆಗಬೇಕಾಗುತ್ತದೆ ಅಂತಾ ನಿತ್ಯವೂ ಕಿರುಕುಳ ಕೊಡುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು-ಮಂಗಳೂರು-ಕೊಲ್ಲಂಗೆ ವಿಶೇಷ ರೈಲುಗಳು: ಇಲ್ಲಿದೆ ವೇಳಾಪಟ್ಟಿ
ಯುವತಿ ತಾನು ಪ್ರೀತಿಸಿದ ಯುವಕನ ಕೈ ಹಿಡಿಯಲು ಮುಂದಾಗಿದ್ದರಿಂದು ಬಲವಂತವಾಗಿ ಯುವತಿಗೆ ಮುತ್ತು ಕಟ್ಟಿಸಿ, ದೇವದಾಸಿ ಮಾಡಲು ತಾಯಿ ಯತ್ನಿಸಿದ್ದರು. ಆದರೆ ತಾಯಿಯ ನಡೆಯಿಂದ ಕಂಗೆಟ್ಟಿದ್ದ ಯುವತಿ ದೇವದಾಸಿ ವಿಮೋಚನಾ ಸಂಘಟನೆ ಮೂಲಕ ಠಾಣೆ ಮೆಟ್ಟಿಲೇರಿದ್ದಳು.
ದೇವದಾಸಿಯನ್ನಾಗಿ ಮಾಡುವ ತಾಯಿಯ ನಿರ್ಧಾರ ಒಪ್ಪದ ಯುವತಿ, ಪುನರ್ವಸತಿ ಕಲ್ಪಿತ ದೇವದಾಸಿಯರ ವಿಮೋಚನಾ ಸಂಘವನ್ನ ಸಂಪರ್ಕ ಮಾಡಿದ್ದಳು. ಆಗ ದೇವದಾಸಿ ವಿಮೋಚನಾ ಸಂಘದವರು ಕೂಡಲೇ ಕುರುಗೋಡು ಠಾಣೆಯ ಪಿಎಸ್‌ಐ ಸುಪ್ರಿತ್ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಪಿಎಸ್ಐ ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದ್ದಾರೆ. ಆಗ ಪ್ರೀತಿಸಿದ ಇಬ್ಬರನ್ನೂ ಒಂದು ಮಾಡಲು ನಿರ್ಧರಿಸಿ, ಎಲ್ಲರ ಸಮ್ಮುಖದಲ್ಲಿಯೇ ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ. ಈ ಮೂಲಕ ದೇವದಾಸಿ ಪದ್ದತಿಗೆ ತಳ್ಳಲ್ಪಡ್ತಿದ್ದ ಯುವತಿಯನ್ನ ರಕ್ಷಿಸಿ, ತಾನು ಪ್ರೀತಿಸಿದ ಯುವಕನ ಕೈ ಹಿಡಿಯುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯ ಬಹುತೇಕ ಪಿಎಚ್‌ಸಿಗಳಲಿಲ್ಲ ಮರಣೋತ್ತರ ಪರೀಕ್ಷೆ ಕೇಂದ್ರಗಳು
ಸದ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆಯನ್ನ ಗಮನಿಸಿದರೆ ಇನ್ನೂ ಮುತ್ತು ಕಟ್ಟಿ ದೇವದಾಸಿ ಬಿಡುವ ಪದ್ಧತಿ ಸಮಾಜದಲ್ಲಿ ಜೀವಂತವಾಗಿದೆ ಅನ್ನೋದು ಸ್ಪಷ್ಟ. ಈ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಕಾಯ್ದೆ ಕಟ್ಟಳೆಗಳನ್ನು ಜಾರಿ ಮಾಡಿದ್ದರೂ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದೆ. ಇನ್ನೂ ಯುವತಿಯನ್ನ ದೇವದಾಸಿಯನ್ನಾಗಿ ಮಾಡಲು ಹೊರಟಿದ್ದ ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತ್ತರಾಗಿ ಆಗಬೇಕಿದ್ದ ಅನಾಹುತವನ್ನ ತಡೆದಿರುವ ಪೊಲೀಸರ ಕಾರ್ಯವು ಕೂಡ ಇಲ್ಲಿ ಪ್ರಶಂಸನೀಯ.
ದೇವದಾಸಿ ಪದ್ಧತಿ ಎಂದರೇನು?
ದೇವದಾಸಿ ಎಂದರೆ ‘ದೇವರ ಸೇವಕಿ’ ಎಂಬ ಅರ್ಥ ಇದೆ. ಸಾಂಪ್ರದಾಯಿಕವಾಗಿ ಯುವತಿಯನ್ನು ದೇವರಿಗೆ ಅಥವಾ ದೇವಾಲಯಕ್ಕೆ ಸಮರ್ಪಿಸಲಾಗುತ್ತದೆ. ಇನ್ನೂ ಮಂಗಳವಾರ ಮತ್ತು ಶುಕ್ರವಾರದಂದು ದೇವಿಯ ವಾರಗಳಂದು ಜೋಗತಿಯರು ಸೇರಿ ಗುರುತಿಸಿದ ಮಹಿಳೆಗೆ ಹಾರ ಹಾಕುತ್ತಾರೆ. ಇದನ್ನು ಮುತ್ತು ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಆಕೆಗೆ ದೇವದಾಸಿ ಪಟ್ಟ ಸಿಗುತ್ತದೆ.
ಒಮ್ಮೆ ಸಮರ್ಪಿಸಲಾದ ಯುವತಿ ತಮ್ಮ ಜೀವನಪರ್ಯಂತ ಎಲ್ಲಾ ರೀತಿಯಲ್ಲಿ ದೇವಾಲಯಕ್ಕೆ ಸೇವೆ ಸಲ್ಲಿಸಬೇಕು. ಆಚರಣೆಗಳನ್ನು ನಿರ್ವಹಿಸಬೇಕು. ಹಿಂದಿನ ಕಾಲದ ಈ ಪದ್ಧತಿ ಇಂದಿಗೂ ಅಲ್ಲಿಲ್ಲಿ ನಡೆದುಕೊಂಡು ಬಂದಿದೆ. ಈ ರೀತಿಯ ಪದ್ಧತಿಯನ್ನು ಹೆಚ್ಚಾಗಿ ದಕ್ಷಿಣ ಮತ್ತು ಪಶ್ಚಿಮ ಭಾರತದ ಭಾಗಗಳಲ್ಲಿ ಕಾಣಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:02 am, Wed, 16 April 25