ನಾವು ಆಟ ಆಡಲು ವಿದೇಶಕ್ಕೆ ಹೋಗ್ತಿಲ್ಲ: ಅಮೆರಿಕಕ್ಕೆ ತೆರಳಲು ಅನುಮತಿ ನೀಡದ್ದಕ್ಕೆ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಪ್ರಿಯಾಂಕ್ ಖರ್ಗೆ ಅವರು ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿಗೆ ವಾಪಸಾದ ಬಳಿಕ ಮಾತನಾಡಿದ ಅವರು, ಕರ್ನಾಟಕದ ಆರ್ಥಿಕ ಪ್ರಗತಿಯ ಬಗ್ಗೆ ವಿವರ ನೀಡಿ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಆಕರ್ಷಣೆಗೆ ತಮ್ಮ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರವು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ಆಟ ಆಡಲು ವಿದೇಶಕ್ಕೆ ಹೋಗ್ತಿಲ್ಲ: ಅಮೆರಿಕಕ್ಕೆ ತೆರಳಲು ಅನುಮತಿ ನೀಡದ್ದಕ್ಕೆ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಪ್ರಿಯಾಂಕ್ ಖರ್ಗೆ (ಸಾಂದರ್ಭಿಕ ಚಿತ್ರ)

Updated on: Jun 19, 2025 | 7:50 AM

ಬೆಂಗಳೂರು, ಜೂನ್ 19: ನಾವು ಆಟ ಆಡಲು ವಿದೇಶಗಳಿಗೆ ಹೋಗುತ್ತಿಲ್ಲ. ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಕರ್ತವ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ಪ್ಯಾರಿಸ್ ಪ್ರವಾಸದಿಂದ ಬುಧವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಅಮೆರಿಕ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬಂಡವಾಳ ತರುವುದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾದರೆ ನಮ್ಮ ದೇಶಕ್ಕೆ ತಾನೇ ಒಳ್ಳೆಯದು. ಕರ್ನಾಟಕವು ದೇಶದ ಆರ್ಥಿಕತೆಯ ಎಂಜಿನ್ ಇದ್ದಂತೆ ಎಂದರು.

ಅಮೆರಿಕಕ್ಕೆ ತೆರಳದಂತೆ ವಿನಾಕಾರಣ ನಿರ್ಬಂಧಿಸಿರುವುದು ಸರಿಯಲ್ಲ. ಕಳೆದ ಬಾರಿ ನಾನು, ಎಂಬಿ ಪಾಟೀಲ್ ಅಮೆರಿಕಕ್ಕೆ ಹೋಗಿದ್ದೆವು. ಆಗ 35 ರಿಂದ 40 ಸಾವಿರ ಕೋಟಿ ರೂ. ಮೊತ್ತದ ಲೆಟರ್ ಆಫ್ ಇಂಟೆಂಟ್ ಹಾಗೂ ಒಪ್ಪಂದಗಳಾಗಿದ್ದವು. ಅದನ್ನು ‘ಇನ್ವೆಸ್ಟ್ ಕರ್ನಾಟಕ’ ಮೂಲಕ ಮಾಡಿದ್ದೆವು. ಇತ್ತೀಚೆಗೆ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ವಸ್ತು ತಯಾರಿಕೆಗೆ ಒಪ್ಪಿಗೆ ನೀಡಲಾಗಿದೆ. ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಇದರ ಪ್ರತಿಫಲವಾಗಿ ಕರ್ನಾಟಕ ಎಲೆಕ್ಟ್ರಾನಿಕ್ಸ್ ಹಬ್ ಹಾಗೂ
ಏರೋಸ್ಪೇಸ್ ಹಬ್ ಆಗಿದೆ. ನವೋದ್ಯಮದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಲು ಸಾಧ್ಯವಾಗುತ್ತಿದೆ. ಕಳೆದ ವರ್ಷ ಇಷ್ಟೆಲ್ಲ ಮಾಡಿದ್ದರೂ ಈಗ ಅಮೆರಿಕ ಪ್ರವಾಸ ಪ್ರಸ್ತಾವ ಯಾಕೆ ತಿರಸ್ಕರಿಸಿದರೋ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯಶಸ್ಸನ್ನು ಕೇಂದ್ರ ಕಟ್ಟಿಹಾಕುತ್ತಿದೆ: ಖರ್ಗೆ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯಶಸ್ಸನ್ನು ಕೇಂದ್ರ ಸರ್ಕಾರ ಕಟ್ಟಿಹಾಕುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಅಮೆರಿಕಕ್ಕೆ ತೆರಳಲು ನಿರ್ಬಂಧಿಸಿರುವುದಕ್ಕೆ ಕಾರಣ ನೀಡಬೇಕು ಎಂದು ಆಗ್ರಹಿಸಿದರು. ‘ಮೇಕ್​ ಇನ್ ಇಂಡಿಯಾ’ ಅಂತ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಯಾವುದೇ ಘೋಷಣೆ ಮಾಡಿದ್ದರೂ ಅದು ಕರ್ನಾಟಕದಲ್ಲೇ ಆರಂಭವಾಗುತ್ತದೆ. ನಮ್ಮ ರಾಜ್ಯದಲ್ಲಿ ಅರ್ಹತೆ, ಅಷ್ಟೊಂದು ಮಾನವ ಸಂಪನ್ಮೂಲ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ
ಸಿಎಂ ವಿರುದ್ಧವೇ ದಾಳ ಉರುಳಿಸಿದ್ದ ಸಚಿವರು! ತೆರೆಮರೆ ರಹಸ್ಯದ ವಿವರ ಇಲ್ಲಿದೆ
ಪ್ರೀತಿಯ ನಾಟಕ, ಅಶ್ಲೀಲ ವಿಡಿಯೋ: ಆಂಧ್ರದ ಮಹಿಳೆಯ ವಂಚಿಸಿದವ ಅರೆಸ್ಟ್
ವಿಧಾನಸೌಧ, ಎಂಎಸ್ ಬಿಲ್ಡಿಂಗ್, ಲೋಕಾಯುಕ್ತ ಕಚೇರಿ ಸುತ್ತ ಪಾರ್ಕಿಂಗ್ ಜಂಜಾಟ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ

ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ

ಮೊದಲು ವಿದೇಶಕ್ಕೆ ತೆರಳಲು ನಿಯೋಗಕ್ಕೆ ಅನುಮತಿ ನೀಡಲಿಲ್ಲ. ನಂತರ ವಿದೇಶಕ್ಕೆ ತೆರಳಲು ನಿಯೋಗಕ್ಕೆ ಅನುಮತಿ ನೀಡಿದರು. ಆದರೆ, ನಮಗೆ ಅನುಮತಿ ನೀಡದೆ ತಿರಸ್ಕರಿಸಿದರು. ಇವೆಲ್ಲದರ ಬಗ್ಗೆ ಏನೇನು ಮಾಹಿತಿಯಿದೆ ಅದನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಿ. ಕೇಂದ್ರ ಸರ್ಕಾರದ ನಡೆ ಸರಿಯಲ್ಲ, ಈ ಬಗ್ಗೆ ನಂತರ ಮಾತನಾಡುವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ