ಬೆಂಗಳೂರು, ಮಾರ್ಚ್ 5: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಿದ ಆರೋಪಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ವಿಚಾರಣೆಯನ್ನು ವಿಧಾನಸೌಧ ಪೊಲೀಸರು (Vidhana Soudha Police) ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ 40 ಮಂದಿಯ ವಿಚಾರಣೆ ನಡೆಸಲಾಗಿದ್ದು, 15ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಂತಿಮವಾಗಿ ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಬಂಧಿತರನ್ನು ಮಾರ್ಚ್ 6ರವರೆಗೆ ಕಸ್ಟಡಿಗೆ ಪಡೆದಿರುವ ವಿಧಾನಸೌಧ ಪೊಲೀಸರು, ಆರೋಪಿಗಳಾದ ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹ್ಮದ್, ಮೊಹಮ್ಮದ್ ಇಲ್ತಾಜ್ ಹಿನ್ನೆಲೆ ಕೆದಕುತ್ತಿದ್ದಾರೆ. ಆದರೆ, ಪ್ರಕರಣವನ್ನು ಮುಚ್ಚಿಹಾಕಲು ದೊಡ್ಡ ಮಟ್ಟದ ಷಡ್ಯಂತ್ರ ನಡೆದಿತ್ತಾ ಎಂಬ ಅನುಮಾನ ಈಗ ಬಲವಾಗಿದೆ. ಇದಕ್ಕೆ ಕಾರಣವೂ ಇದೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿಗಳನ್ನ ರಕ್ಷಿಸಿ, ಫೆಬ್ರುವರಿ 27ರ ಮರುದಿನವೇ ಪ್ರಕರಣ ಮುಗಿಸಿಬಿಡಲು ಪೊಲೀಸರು ಯತ್ನಿಸಿದ್ದರೇ ಎಂಬ ಅನುಮಾನ ಕೆಲವು ನಡೆಗಳಿಂದ ವ್ಯಕ್ತವಾಗಿದೆ. ಯಾಕಂದರೆ, ಆರೋಪಿಗಳ ಮೊಬೈಲ್ನಲ್ಲಿದ್ದ ಡಾಟಾವನ್ನು ಕೂಡಲೇ ಡಿಲೀಟ್ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಜೊತೆಗಿದ್ದ ಫೋಟೋ, ವಿಡಿಯೋಗಳು, ಸಾಮಾಜಿಕ ಜಾಲತಾಣದ ಪ್ರೊಫೈಲ್ ಸೇರಿ ಎಲ್ಲವನ್ನೂ ಡಿಲೀಟ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಪೊಲೀಸರೇ ಡಾಟಾ ಡಿಲೀಟ್ ಮಾಡಿದ್ದರೇ? ಆರೋಪಿಗಳೇ ಡಿಲೀಟ್ ಮಾಡಿದ್ದರೇ ಎಂಬ ಪ್ರಶ್ನೆಗಳು ಸೃಷ್ಟಿಯಾಗಿವೆ.
ಅಂದು ಘಟನೆ ನಡೆದ ಮರು ದಿನ ಡಿಲೀಟ್ ಆಗಿರುವ ಡಾಟಾವನನ್ನು ರಿಟ್ರೀವ್ ಮಾಡಲು ಇದೀಗ ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳ ವಾಟ್ಸಾಪ್, ಟೆಲಿಗ್ರಾಂ ಡಾಟಾ ಸಂಗ್ರಹಕ್ಕೆ ಎಫ್ಎಸ್ಎಲ್ಗೆ ಮೊಬೈಲ್ ರವಾನಿಸಲಾಗಿದೆ. ಮೂವರಿಗೂ ರಾಷ್ಟ್ರ ವಿರೋಧಿ ಸಂಘಟನೆ ಲಿಂಕ್ ಇದೆಯಾ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇದಲ್ಲದೇ, ವಿಧಾನಸೌಧಕ್ಕೆ ಈ ಮೂವರು ಪಾಸ್ ಇಲ್ಲದೇ ಪ್ರವೇಶ ಮಾಡಿರುವುದು ಬೆಳೆಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಮಧ್ಯೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನೂತನ ರಾಜ್ಯಸಭಾ ಸದಸ್ಯನ ಆಶೀರ್ವಸೇನ್ ವಿರುದ್ಧ ಬಿಜೆಪಿ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಜತೆಗೆ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ಕೂಡ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗ: ಪರಮೇಶ್ವರ್
ನಾಸಿರ್ ಹುಸೇನ್ ಅವರ ವಿಜಯೋತ್ಸವದ ವೇಳೆ ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಆರೋಪಿಗಳು ಪಾಸ್ ಕೂಡ ಇಲ್ಲದೆ ವಿಧಾನಸೌಧ ಆವರಣ ಪ್ರವೇಶಿಸಿದ್ದರು ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ