ಕಲಬುರ್ಗಿ: ಕರ್ನಾಟಕದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರುದ್ರಗೌಡ ಪಾಟೀಲನನ್ನು ಸಿಐಡಿ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು 7 ದಿನಗಳು ವಶದಲ್ಲಿ ಇರಿಸಿಕೊಳ್ಳಲು ಸಿಐಡಿಗೆ ಅನುಮತಿ ನೀಡಿದೆ. ರುದ್ರಗೌಡ ಪಾಟೀಲ್ನನ್ನು ಕಲಬುರಗಿಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕಳೆದ ಏಪ್ರಿಲ್ 23ರಂದು ರುದ್ರಗೌಡ ಪಾಟೀಲ್ನನ್ನು ಸಿಐಡಿ ಬಂಧಿಸಿತ್ತು. ರುದ್ರಗೌಡ ಪಾಟೀಲನ ಸಹಾಯದಿಂದ ಹಲವು ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದರು. ಇಂಥ ಹಲವು ಅಭ್ಯರ್ಥಿಗಳು ಮತ್ತು ಅಕ್ರಮಕ್ಕೆ ನೆರವಾಗಿದ್ದ ಸಿಬ್ಬಂದಿ, ಮಧ್ಯವರ್ತಿಗಳನ್ನು ಶೀಘ್ರ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.
ಮತ್ತೆ ಸಿಐಡಿ ವಶಕ್ಕೆ ಶಾಂತಕುಮಾರ್
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಸಿಐಡಿ ವಶಕ್ಕೆ ತೆಗೆದುಕೊಂಡಿದೆ. ಸಿಐಡಿ ಕಸ್ಟಡಿಗೆ ನೀಡಿದ್ದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ಗೆ ಸಿಐಡಿ ಹಾಜರುಪಡಿಸಿತ್ತು. ಸಿಐಡಿ ಪರ ವಕೀಲರ ಮನವಿ ಮೇರೆಗೆ ಶಾಂತಕುಮಾರ್ನನ್ನು ನ್ಯಾಯಾಲಯವು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ಕೊಟ್ಟಿದೆ.
6 ಜನರ ಬಂಧನ
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯನ್ನು ಸಿಐಡಿ ಬಂಧಿಸಿದೆ. ಇವರೆಲ್ಲರೂ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೂಚನೆಯಂತೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಬಂಧಿತ ಆರು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಎಎಚ್ಸಿ ಶ್ರೀಧರ್ ಬಳಿ ಸುಮಾರು ₹ 2 ಕೋಟಿ ನಗದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಪಡೆಯಲಾಗಿತ್ತು ಎಂಬ ಅಂಶವೂ ತನಿಖೆ ವೇಳೆ ಪತ್ತೆಯಾಯಿತು. ಸದ್ಯ ಐದರಿಂದ ಆರು ಅಭ್ಯರ್ಥಿಗಳಿಗೆ ಸೇರಿದ್ದ ಹಣ ಮಾತ್ರ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಗುಮಾಸ್ತ ಹರ್ಷನ ಮೂಲಕವೂ ಸಾಕಷ್ಟು ಅಕ್ರಮ ಅಗಿದೆ ಎಂದು ತಿಳಿಸಿದರು.
ರಾಜ್ಯದ ಹಲವು ಏಜೆಂಟ್ಗಳ ಮೂಲಕ ನೇಮಕಾತಿ ವಿಭಾಗಕ್ಕೆ ಹಣ ಪಾವತಿಯಾಗುತ್ತಿತ್ತು ಎಂಬ ಸಂಗತಿ ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ನೇಮಕಾತಿ ವಿಭಾಗದ ಯಾವ ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ಪಡೆದು ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿ ಪರಿಗಣಿಮಿಸಿದೆ. ಏಜೆಂಟ್ಗಳ ಮೂಲಕ ನಗದು ರೂಪದಲ್ಲಿ ಹಣ ಚಲಾವಣೆಯಾಗಿದೆ. ಇದೀಗ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸುತ್ತಿರುವ ಸಿಐಡಿ, ಅವರ ಮೂಲಕವೇ ಯಾರೆಲ್ಲಾ ಹಣ ಪಡೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದೆ. ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
Published On - 9:44 am, Wed, 25 May 22