ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ (PSI Recruitment Scam) ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಮೊದಲ ತಲೆದಂಡ ಆಗಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿಯಾಗಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ 1995 ಬ್ಯಾಚ್ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು (IPS officer Amrit Paul) ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ. ಆಂತರಿಕ ಭದ್ರತಾ ದಳದ ಎಡಿಜಿಪಿ ಆಗಿ ಪೌಲ್ ವರ್ಗಾವಣೆಯಾಗಿದ್ದಾರೆ. ನೇಮಕಾತಿ ವಿಭಾಗದ ನೂತನ ಎಡಿಜಿಪಿ ಆಗಿ ಹಿತೇಂದ್ರ ನೇಮಕಗೊಂಡಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಆರ್. ಹಿತೇಂದ್ರಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಪ್ರಸ್ತುತ ಅವರು ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಮೃತ್ ಪೌಲ್ ಅಕ್ರಮದಲ್ಲಿ ಭಾಗಿ- ಕಾಂಗ್ರೆಸ್‌ನಿಂದ ಆರೋಪ:
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರು ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಕಾಂಗ್ರೆಸ್‌ನಿಂದ ಆರೋಪ ಕೇಳಿಬಂದಿತ್ತು. ಅಮೃತ್ ಪೌಲ್ ವಿರುದ್ಧ ಕಾಂಗ್ರೆಸ್ ಆರೋಪದ ಹಿನ್ನೆಲೆ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ:
ನೇಮಕಾತಿ ಪ್ರಕ್ರಿಯೆ ಎಡಿಜಿಪಿ ಅಂಡರ್ ನಲ್ಲಿ ನಡೆದಿದೆ. ಯಾರೆಲ್ಲ ಅಂತಹ ಕ್ರಿಯೆಯೊಳಗೆ ಕೆಲಸ ಮಾಡಿದ್ದಾರೋ ಅಂತಹವರನ್ನು ಒಂದು ಗಳಿಗೆಯೂ ಮುಂದುವರಿಸುವುದು ಸರಿಯಲ್ಲ ಅಂತಾ ನಾನು ಹೇಳಿದ್ದೆ. ಈಗ ನೇಮಕಾತಿ ADGP ಟ್ರಾನ್ಸ್ಫರ್ ಆಗಿದೆ. ಎಲ್ಲೋ ಒಂದು ಕಡೆ ಸರ್ಕಾರ ಒಪ್ಪಿಕೊಳ್ಳುತ್ತಿದ್ದೆ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಅಮೃತ್ ಪೌಲ್ ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಡವಾಗಿಯಾದರೂ ಸರ್ಕಾರ ಎಡಿಜಿಪಿ ಅವರನ್ನ ವರ್ಗಾವಣೆ ಮಾಡಿದೆ. ಆದರೆ ಅವರ ವರ್ಗಾವಣೆಗೆ 15 ದಿನ ಬೇಕಿತ್ತಾ? ಇದರಿಂದ ಸರ್ಕಾರ ಹಗರಣವನ್ನ ಒಪ್ಪಿಕೊಂಡಂತಾಗಿದೆ. ಹಗರಣ ನಡೆದಿದೆ.. ಅಧಿಕಾರಿಗಳು ಶಾಮೀಲಾಗಿದ್ದಾರೆ ಅಂತಾ ಈಗ ಸರ್ಕಾರಕ್ಕೆ ಅನಿಸಿರಬಹುದು. ಹೀಗಾಗಿ ಎಡಿಜಿಪಿ ಅವರನ್ನ ವರ್ಗಾವಣೆ ಮಾಡಿದ್ದಾರೆ. ದಿವ್ಯಾ ಹಾಗರಗಿ ಅವರ ಫೋಟೋ ಯಾರ ಜೊತೆಯಾದರೂ ಇರಲಿ. ಅವರು ಬಿಜೆಪಿನೋ, ಕಾಂಗ್ರೆಸ್ ನವರೋ, ಜೆಡಿಎಸ್ ನವರೋ. ಅವರೊಬ್ಬ ಆರೋಪಿ, ಮೊದಲು ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿ. ಡಿ.ಕೆ ಶಿವಕುಮಾರ್ ಜೊತೆ ಇರುವ ಫೋಟೋಗೆ ಪಕ್ಷದ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ. ದಿವ್ಯಾ ಹಾಗರಗಿ ಅವರು ಅವರ ಮಗನ ಮದುವೆ ಆಮಂತ್ರಣ ಕೊಡಲು ನನ್ನ ಮನೆಗೂ ಬಂದಿದ್ದರು. ಅವರ ಜೊತೆ ನನ್ನ ಫೋಟೋನೂ ಇರಬಹುದು. ಮೋದಿ ಅವರ ಜೊತೆಯೂ ದಿವ್ಯಾ ಹಾಗರಗಿ ಅವರ ಫೋಟೋ ಇರಬಹುದು. ಹಾಗಂತ ವಿಚಾರಣೆ ನಡೆಸಬಾರದಾ? ಬಿಜೆಪಿ ಅವರ ಸಾಮಾಜಿಕ ಜಾಲತಾಣದವರು ಹಾಕುವ ಪೊಸ್ಟ್ ಗೆ ಉತ್ತರ ಕೊಡಲು ಹೋದರೆ ದಿನ ಪೂರ್ತಿ ಅದೇ ಕೆಲಸ ಮಾಡ್ಕೊಂಡಿರಬೇಕಾಗುತ್ತೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು.
ಇದನ್ನೂ ಓದಿ:
ಹಾಸನ ಜನರೆದುರೇ ತಾ.ಪಂ. ಅಧಿಕಾರಿಗೆ ಏಕವಚನದಲ್ಲಿ ತರಾಟೆ, ಜಿಲ್ಲಾಧಿಕಾರಿಗೂ ವಾರ್ನ್ ಮಾಡಿದ ಜೆಡಿಎಸ್ ಶಾಸಕ ರೇವಣ್ಣ
Published On - 2:39 pm, Wed, 27 April 22