‘ಸರ್ಕಾರಿ ಉದ್ಯೋಗಕ್ಕಾಗಿ ಮಂಚ ಹತ್ತಬೇಕು’: ಪ್ರಿಯಾಂಕ್ ಖರ್ಗೆ ವಿರುದ್ಧ ರಾಮುಲು ವಾಗ್ದಾಳಿ, ವ್ಯಕ್ತಿಯಿಂದ ತರಾಟೆ
ಸರ್ಕಾರದಲ್ಲಿ ಉದ್ಯೋಗ ಪಡೆಯಲು ಮಂಚ ಹತ್ತಬೇಕು ಎಂಬ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದು, ಓರ್ವ ವ್ಯಕ್ತಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು ಅವರು ಖರ್ಗೆ ವಿರದ್ಧ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿ: ಸರ್ಕಾರದಲ್ಲಿ ಉದ್ಯೋಗ ಪಡೆಯಲು ಮಂಚ ಹತ್ತಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ (Priyank Kharge) ನೀಡಿದ ಹೇಳಿಕೆಗೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದು, ಓರ್ವ ವ್ಯಕ್ತಿ ದೂರವಾಣಿ ಕರೆ ಮೂಲಕ ಖರ್ಗೆಯವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಬಿ. ಶ್ರೀರಾಮುಲು (B.Sriramulu), ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆಯ ಸಂಸ್ಕಾರವನ್ನು ಬೆಳೆಸಿಕೊಳ್ಳಲಿ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಲಂಚ, ಮಂಚ ಅಂತ ಹೇಳುವುದು ಹೀನಾಯ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ಹೀನಾಯ ಸಂಸ್ಕೃತಿಯನ್ನ ತೋರಿಸುತ್ತದೆ. ಪ್ರಿಯಾಂಕ್ ಖರ್ಗೆ ಅವರು ಸಂಸ್ಕಾರವಂತ ಅಂತ ಅಂದುಕೊಂಡಿದ್ದೆ. ಈ ಹಿಂದೆ ಸದನದಲ್ಲಿ ಸಣ್ಣ ಖರ್ಗೆ ಎಂದು ಉಲ್ಲೇಖಿಸಿ ಹೊಗಳಿದ್ದೆ. ಆದರೆ ಅವರು ತಮ್ಮ ತಂದೆಯನ್ನು ನೋಡಿ ಕಲಿಯಬೇಕಿದೆ. ಪ್ರಿಯಾಂಕ್ ಅವರ ತಂದೆ ಬುದ್ದಿವಂತರು. ದಲಿತ ನಾಯಕರ ಮಗನಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ಶಕ್ತಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಲಿ. ಮಹಿಳೆಯರ ವಿರುದ್ಧ ಇಂತಹ ಮಾತು ಬಳಕೆ ಆಗಬಾರದು. ಕೂಡಲೇ ಪ್ರಿಯಾಂಕ್ ಖರ್ಗೆ ಅವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವ್ಯಕ್ತಿಯ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ ಪ್ರಿಯಾಂಕ್ ಖರ್ಗೆ
ಹುಬ್ಬಳ್ಳಿ: ಸರ್ಕಾರಿ ಉದ್ಯೋಗ ಬೇಕಾದರೆ ಲಂಚ ಅಥವಾ ಮಂಚ ಹತ್ತಬೇಕು ಎಂಬ ಹೇಳಿಕೆ ಆಡಳಿತ ಪಕ್ಷಗಳಿಂದ ಅಲ್ಲದೆ ಜನಸಾಮಾನ್ಯರಿಂದಲೂ ಆಕ್ರೋಶ, ಟೀಕೆ ವ್ಯಕ್ತವಾಗುತ್ತಿದೆ. ಹೇಳಿಕೆಯನ್ನು ಖಂಡಿಸಿದ ಹುಬ್ಬಳ್ಳಿಯ ನೂಲ್ವಿ ಗ್ರಾಮದ ಹೇಮನಗೌಡ ಎಂಬವರು ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ರಮೇಶ್ ಜಾರಕಿಹೊಳಿ, ಸದಾನಂದಗೌಡ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಅವರ ಹೆಸರನ್ನು ಪ್ರಸ್ತಾಪ ಮಾಡಿ ತಮ್ಮ ಹೇಳಿಕೆಗೆ ಸಮರ್ಥನೆ ನೀಡಲು ಪ್ರಿಯಾಂಕ್ ಖರ್ಗೆ ಅವರು ಯತ್ನಿಸಿದರು. ಅಲ್ಲದೆ ರಮೇಶ್ ಜಾರಕಿಹೊಳಿ ಯಾಕೆ ರಾಜಿನಾಮೆ ನೀಡಿದರು ಎಂದು ಪ್ರಶ್ನಿಸಿದರು. ಈ ವೇಳೆ ಸುಮ್ಮನಾಗದ ಹೇಮನಗೌಡ ಅವರು ತಮ್ಮ ಅಸಮಧಾನ ಹೊರಹಾಕುತ್ತಾ ಪ್ರಶ್ನೆಗಳನ್ನು ಹಾಕಿದ್ದಾರೆ. ಆಗ ಉತ್ತರಿಸಲಾಗದೆ ತತ್ತರಿಸಿದ ಪ್ರಿಯಾಂಕ್ ಖರ್ಗೆ ದೂರವಾಣಿ ಕರೆ ಕಟ್ ಮಾಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 13 August 22