ಕಲ್ಯಾಣ ಕರ್ನಾಟಕದ 38 ಹಳ್ಳಿಗಳ ಮಹಿಳೆಯರಿಗಿಲ್ಲ ಶಕ್ತಿ ಯೋಜನೆ ಭಾಗ್ಯ: ಪ್ರಿಯಾಂಕ್ ಖರ್ಗೆಗೆ ಇದು ಕಾಣ್ಸಲ್ಲವೇ? ಅಶೋಕ್ ಪ್ರಶ್ನೆ

ಕಲ್ಯಾಣ ಕರ್ನಾಟಕದ 38 ಹಳ್ಳಿಗಳಲ್ಲಿ ಬಸ್, ರಸ್ತೆ ಇಲ್ಲದೆ ಶಕ್ತಿ ಯೋಜನೆ ನಿರುಪಯುಕ್ತವಾಗಿರುವ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ಬೆಂಗಳೂರು ಟೆಕ್ ಸಮ್ಮಿಟ್‌ಗೆ ಮುನ್ನ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕದ 38 ಹಳ್ಳಿಗಳ ಮಹಿಳೆಯರಿಗಿಲ್ಲ ಶಕ್ತಿ ಯೋಜನೆ ಭಾಗ್ಯ: ಪ್ರಿಯಾಂಕ್ ಖರ್ಗೆಗೆ ಇದು ಕಾಣ್ಸಲ್ಲವೇ? ಅಶೋಕ್ ಪ್ರಶ್ನೆ
ಪ್ರಿಯಾಂಕ್ ಖರ್ಗೆ, ಆರ್ ಅಶೋಕ್

Updated on: Nov 04, 2025 | 12:00 PM

ಬೆಂಗಳೂರು, ನವೆಂಬರ್ 4: ವಿದೇಶಾಂಗ ನೀತಿಯಿಂದ ಹಿಡಿದು ಮಿಲಿಟರಿ ತಂತ್ರಗಾರಿಕೆವರೆಗೆ ಎಲ್ಲದರ ಬಗ್ಗೆ ಉದ್ದುದ್ದ ಬೊಗಳೆ ಭಾಷಣ ಬಿಗಿಯುವ ಪ್ರಿಯಾಂಕ್ ಖರ್ಗೆ (Priyank Kharge) ಅವರೇ, ತಮಗೆ ಕಲ್ಯಾಣ ಕರ್ನಾಟಕದ (Kalyana Karnataka) ಹಳ್ಳಿಗಳ ಜನ ಬಸ್ಸಿಲ್ಲದೆ ದುಪ್ಪಟ್ಟು ಬೆಲೆ ತೆತ್ತು ಸ್ವಂತ ಗಾಡಿ, ಟಂಟಂ, ಜೀಪಿನಲ್ಲಿ ಪ್ರಯಾಣ ಮಾಡುವುದು ತಮಗೆ ಕಾಣುತ್ತಿಲ್ಲವೇ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಪ್ರಶ್ನಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ 38 ಹಳ್ಳಿಗಳಿಗೆ ಬಸ್ ಸೌಕರ್ಯವೇ ಇಲ್ಲ. ಇದರಿಂದಾಗಿ ಅಲ್ಲಿನ ಮಹಿಳೆಯರಿಗೆ ಶಕ್ತಿ ಯೋಜನೆಯ ಪ್ರಯೋಜನವೂ ದೊರೆಯುತ್ತಿಲ್ಲ ಎಂಬ ಮಾಧ್ಯಮ ವರದಿ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪ್ರಸ್ತಾಪಿಸಿದ ಅಶೋಕ್, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕಲ್ಯಾಣ ಕರ್ನಾಟಕದ 38 ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆ ಪ್ರಯೋಜನವಿಲ್ಲ ಅಂದರೆ 38 ಗ್ರಾಮಗಳಿಗೆ ಬಸ್ಸೇ ಇಲ್ಲ. ಬಸ್ಸು ಯಾಕಿಲ್ಲ ಅಂದರೆ ಅಲ್ಲಿ ಯೋಗ್ಯ ರಸ್ತೆಯೇ ಇಲ್ಲ. ಕಲ್ಯಾಣ ಕರ್ನಾಟಕದ ಜನರ ಮತ ಪಡೆದು, ಅಧಿಕಾರ ಅನುಭವಿಸಿ ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಂಡಿರುವುದೇ ನಿಮ್ಮ ಏಕೈಕ ಸಾಧನೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಆರ್​ಎಸ್​ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ನಿಮ್ಮ ಈ ವೈಫಲ್ಯಗಳನ್ನು ಮರೆಮಾಚಬಹುದು, ಜನರನ್ನು ಯಾಮಾರಿಸಬಹುದು ಎಂದು ಕನಸು ಕಾಣಬೇಡಿ. ಕಲ್ಯಾಣ ಕರ್ನಾಟಕದ ಜನ ಖರ್ಗೆ ಕುಟುಂಬವನ್ನ ಮತ್ತು ಕಾಂಗ್ರೆಸ್ ಪಕ್ಷವನ್ನ ನಿಷೇಧ ಮಾಡುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಬೆಂಗಳೂರು ಟೆಕ್ ಸಮ್ಮಿಟ್​ಗೆ ಬರುವವರು ಹೊಂಡ-ಗುಂಡಿಯಲ್ಲಿ ಸಂಚರಿಸಬೇಕೇ: ಅಶೋಕ್ ಪ್ರಶ್ನೆ

ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದಕ್ಕೆ ಸಂತೋಷ. ಈಗಲಾದರೂ ಅವರು ಮುಖ್ಯಮಂತ್ರಿ
ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು, ಬೆಂಗಳೂರು ಟೆಕ್ ಸಮ್ಮಿಟ​ಗೆ ಆಗಮಿಸುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ಗುಂಡಿ ಬಿದ್ದ, ಹೊಂಡ ತುಂಬಿದ, ಕಸದಿಂದ ತುಂಬಿ ತುಳುಕುವ ರಸ್ತೆಗಳನ್ನು ಸರಿಪಡಿಸಲು ಮನವಿ ಮಾಡುವರೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಆರ್ ಅಶೋಕ್ ಎಕ್ಸ್ ಸಂದೇಶ


ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit) ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ನೀಡುತ್ತದೆಯೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಚಿವ ಪ್ರಿಯಾಂಕ್​ ಖರ್ಗೆ ವಿದ್ಯಾರ್ಹತೆ ಬಗ್ಗೆ ವ್ಯಂಗ್ಯ: BJP ಪೋಸ್ಟ್​ನಲ್ಲಿ ಇರೋದೇನು?

ಕಳೆದ 2.5 ವರ್ಷಗಳಿಂದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯವನ್ನು ಹಾಳು ಮಾಡಿದೆ. ಟ್ರಾಫಿಕ್ ಸಮಸ್ಯೆ ಉಲ್ಬಣಗೊಳಿಸಿದೆ. ಹೂಡಿಕೆದಾರರನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ. ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಭಾಗಿಯಾಗಲು ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎನ್ನುವುದೇ ಜನರ ನಿರೀಕ್ಷೆ ಎಂದು ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ