ಉಡುಪಿ, ಮೇ 13: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ ಮಾಜಿ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ರಘುಪತಿ ಭಟ್ (Raghupati Bhat), ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ. ಮೇ 16ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಪಕ್ಷ ಉಚ್ಚಾಟನೆ ಮಾಡಿದ್ರೂ ನಾನು ಬಿಜೆಪಿ ಕಾರ್ಯಕರ್ತ. ನನಗೆ ಬಿ ಫಾರಂ ಕೊಟ್ಟು ಕರಾವಳಿಗೆ ಮಾನ್ಯತೆ ಕೊಡಿ. ಕರಾವಳಿಗೆ ಏನು ಮಾಡಿದ್ರೂ ನಡೆಯುತ್ತೆಂಬ ಭಾವನೆ ಬಿಡಲಿ. ಅಭ್ಯರ್ಥಿ ಬದಲಾವಣೆ ಮಾಡಿ ನನಗೆ ಅವಕಾಶ ಕೊಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ
ಕಾರ್ಯಕರ್ತರಿಗೆ ಬಹಳ ನೋವಾಗಿದೆ, ಒತ್ತಾಯ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಬಂಡಾಯವಲ್ಲ, ಪಕ್ಷದ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ. ಕರಾವಳಿ ಭಾಗದ ಧ್ವನಿಯಾಗಿ, ಕೆಲಸ ಮಾಡಬೇಕು. ಸೆಡ್ಡು ಹೊಡೆದು, ಬಂಡಾಯ ಮಾಡಿ ಕೆಲಸ ಮಾಡಬೇಕು. ಕರಾವಳಿ ಭಾಗವನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ ಎಂದಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿ ಕೆಲಸ ಮಾಡಿದ್ದೆ. ಕಳೆದ ಚುನಾವಣೆಯಲ್ಲಿ ಮಾಹಿತಿ ನೀಡದೆ ಟಿಕೆಟ್ ತಪ್ಪಿಸಲಾಗಿತ್ತು. ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಆಲೋಚನೆ ಮಾಡಿದ್ದೆ. ಆರ್ಎಸ್ಎಸ್, ಬಿಜೆಪಿ ಪಕ್ಷದ ನಾಯಕರ ಬಳಿ ನಿವೃತ್ತಿ ಬಗ್ಗೆ ಹೇಳಿದ್ದೆ. ಪದವೀಧರ ಕ್ಷೇತ್ರದ ಬೇಡಿಕೆ ಇಟ್ಟಾಗ ಭರವಸೆ ಮಾತಾಡಿದ್ದರು. ಎಲ್ಲಾ ಸ್ತರದ ನಾಯಕರಲ್ಲಿ ಪರಿಷತ್ತಿನ ಟಿಕೆಟ್ ಕೇಳಿದ್ದೆ. ದಕ್ಷಿಣ ಕನ್ನಡ ಉಡುಪಿಯಲ್ಲಿ 38 ಸಾವಿರ ಮತದಾರರ ಸೇರ್ಪಡೆ ಮಾಡಿದ್ದೇವೆ. ಆದರೆ ಬಳಿಕ ಟಿಕೆಟ್ ಡಾ. ಧನಂಜಯ ಸರ್ಜಿಗೆ ಘೋಷಣೆಯಾಗಿದೆ ಎಂದರು.
ಇದನ್ನೂ ಓದಿ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಒಂದು ವರ್ಷದ ಹಿಂದೆ ಪಕ್ಷಕ್ಕೆ ಬಂದ ಹೊಸಬರಿಗೆ ಟಿಕೆಟ್ ಕೊಡಲಾಗಿದೆ. ನನ್ನ ಮನಸ್ಸಿನ ಬೇಸರ ಫೇಸ್ ಬುಕ್ನಲ್ಲಿ ಹೇಳಿಕೊಂಡಿದ್ದೆ. ಡಾ. ಧನಂಜಯ ಸರ್ಜಿ ಸಂಘ ಪರಿವಾರದ ವಿರುದ್ಧ ಕೆಲಸ ಮಾಡಿದವರು. ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದೀರಿ ಎಂದು ಯಾರೂ ಸ್ಪಷ್ಟಪಡಿಸಿಲ್ಲ. ಜಾತಿ ಹಣದ ಬಲದಿಂದ ನೈರುತ್ಯ ಟಿಕೆಟ್ ಆಗಿದೆ ಎಂದು ಹೇಳಿದ್ದಾರೆ.
ಬೊಮ್ಮಾಯಿ, ಅಶೋಕ್, ಕಟೀಲ್ ಇದ್ದ ಸಭೆಯಲ್ಲಿ ಬೇಡಿಕೆ ಇಟ್ಟಿದ್ದೆ. ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಅವರಿಗೂ ಮಾಹಿತಿ ನೀಡಿದ್ದೆ. ಸಭೆಯಲ್ಲಿ ನನಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಪಕ್ಷದಿಂದ ಆದ ನೋವುಗಳನ್ನೆಲ್ಲಾ ಹೇಳಿದ್ದೇನೆ. ಯಾರು ನನ್ನ ಟಿಕೆಟ್ ತಪ್ಪಿಸಿದ್ದಾರೋ ಗೊತ್ತಿಲ್ಲ. ಇದು ಚಿಹ್ನೆ ಇಲ್ಲದ ಚುನಾವಣೆ ಎಂದಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.