ಜೈವಿಕ ತಂತ್ರಜ್ಞಾನ; ಕೀಟಭಾದೆಗೆ ರಾಮಬಾಣ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸೃಷ್ಟಿಸಿದ ಕೀಟನಾಶಕ
ಬೆವರಿಯಾ, ಮೆಟರೇಜಿಯಂ ಸೇರಿ ಒಟ್ಟು ನಾಲ್ಕು ವಿವಿಧ ಬಗೆಯ ಕೀಟನಾಶಕಗಳನ್ನ ಇಲ್ಲಿನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಕೀಟನಾಶಕಗಳು ತೊಗರಿ, ಕಬ್ಬು, ಹತ್ತಿ, ಭತ್ತ, ಶೆಂಗಾ ಸೇರಿದಂತೆ ಮತ್ತಿತರ ಬೆಳೆಗಳಿಗೆ ಮಾರಕವಾಗಿ ಕಾಡುವ ಕೀಟಗಳ ನಿಯಂತ್ರಣಕ್ಕೆ ರಾಮಬಾಣವಾಗಿವೆ.
ರಾಯಚೂರು: ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯ ಅನ್ನದಾತರ ಪಾಲಿಗೆ ಸಂಜೀವಿನಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳು ಅನ್ನದಾತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಆಸರೆಯಾಗುತ್ತಿವೆ. ಈ ಕೃಷಿ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಅಸಂಖ್ಯಾತ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿರಂತರ ಸಂಶೋಧನೆ ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ರೈತರ ಬದುಕನ್ನು ಬಂಗಾರವನ್ನಾಗಿಸಿದೆ.
ಬಿಸಿಲನಾಡು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅತ್ಯುತ್ತಮ ಜೈವಿಕ ಪರಿಕರಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಇಲ್ಲಿ ಉತ್ಪಾದನೆಯಾಗುತ್ತಿರುವ ಜೈವಿಕ ಕೀಟನಾಶಕಗಳು ಅಸಂಖ್ಯಾತ ರೈತರ ಬದುಕು ಬದಲಿಸಿವೆ. ಅದೆಷ್ಟೋ ರೈತರ ಯಶಸ್ವಿ ಬದುಕಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳು ಆಸರೆಯಾಗುತ್ತಿರುವುದೇ ಇಲ್ಲಿ ವಿಶೇಷ.
ಈ ವಿಶ್ವವಿದ್ಯಾಲಯವು ಆಲೂಗಡ್ಡೆ ಕಾಂಪೋಸ್ಟ್ ಮೂಲಕ ಅತ್ಯುತ್ತಮ ಕೀಟನಾಶಕವನ್ನ ತಯಾರಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿ ತಯಾರಿಸಿದ ಜೈವಿಕ ಕೀಟನಾಶಕಗಳನ್ನ ಬಳಸಿದ ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಅಸಂಖ್ಯಾತ ರೈತರ ಬದುಕು ಇಂದು ಬಂಗಾರವಾಗಿದೆ. ಬೆವರಿಯಾ, ಮೆಟರೇಜಿಯಂ ಸೇರಿ ಒಟ್ಟು ನಾಲ್ಕು ವಿವಿಧ ಬಗೆಯ ಕೀಟನಾಶಕಗಳನ್ನ ಇಲ್ಲಿನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಕೀಟನಾಶಕಗಳು ತೊಗರಿ, ಕಬ್ಬು, ಹತ್ತಿ, ಭತ್ತ, ಶೆಂಗಾ ಸೇರಿದಂತೆ ಮತ್ತಿತರ ಬೆಳೆಗಳಿಗೆ ಮಾರಕವಾಗಿ ಕಾಡುವ ಕೀಟಗಳ ನಿಯಂತ್ರಣಕ್ಕೆ ರಾಮಬಾಣವಾಗಿವೆ. ಹೀಗಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀಟನಾಶಕಗಳಿಗೆ ರೈತರಿಂದ ಹೆಚ್ಚು ಬೇಡಿಕೆ ಕೇಳಿ ಬಂದಿದೆ. ಈ ನಡುವೆ ರೈತರು ಸಹ ಸಾವಯವ ಕೃಷಿ ಪದ್ಧತಿ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಜೈವಿಕ ಪರಿಕರ ಉತ್ಪಾದನೆಯಾಗಿರುವ ಪಟ್ಟಿ: 2015-16 ನೇ ಸಾಲಿನಲ್ಲಿ 78,119 ಕೆ.ಜಿ. 2016-17ನೇ ಸಾಲಿನಲ್ಲಿ 62,922 ಕೆ.ಜಿ. 2017-18ನೇ ಸಾಲಿನಲ್ಲಿ 1,19, 413 ಕೆ.ಜಿ. 2018-19ನೇ ಸಾಲಿನಲ್ಲಿ 1,67,866 ಕೆ.ಜಿ. 2019-20 ನೇ ಸಾಲಿನಲ್ಲಿ1,16,646 ಕೆಜಿ.
ರೈತರಿಗೆ ಉಪಯೋಗವಾಗಲಿ ಎನ್ನುವ ನಿಟ್ಟಿನಲ್ಲಿ ಜೈವಿಕ ಕೀಟನಾಶಕಗಳನ್ನು ತಯಾರಿಸಿದ್ದೇವೆ. ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಕಂಡುಬರುವ ಗೊಣ್ಣೆ ಹುಳುವನ್ನು ನಿಯಂತ್ರಿಸಲು ಒಂದು ವಿಶೇಷವಾದ ಕೀಟನಾಶಕವನ್ನು ಕಂಡು ಹಿಡಿದಿದ್ದೇವೆ. ಇದರಿಂದ ಸಾವಯಾವ ಕೃಷಿಯಲ್ಲಿ ರೈತರು ಯಶಸ್ವಿಯಾಗಿದ್ದಾರೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅರುಣ ಕುಮಾರ್ ಹೇಳಿದ್ದಾರೆ.
ಪ್ರಕೃತಿ ವಿಕೋಪಕ್ಕೆ ರೈತರು ಬೆಳೆದ ಬೆಳೆ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಸ್ಥಿತಿಯ ನಡುವೆಯೂ ಸಾವಯವ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡ ಕೆಲ ರೈತರು ಕೊಂಚ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಿತ್ಯವೂ ಜೈವಿಕ ಪರಿಕರಗಳ ಉತ್ಪಾದನೆ ಜೋರಾಗಿ ನಡೆಯುತ್ತಿದೆ. ಇನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಾವಯವ ಕೃಷಿ ಪದ್ಧತಿಯ ಬಗ್ಗೆ ರೈತರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಾವಯವ ಕೃಷಿ ಬಗ್ಗೆ ಆಸಕ್ತಿ ವಹಿಸಿದ್ದಾರೆ.
ಹೀಗಾಗಿ ಮಳೆಯನ್ನೇ ನಂಬಿ ಕುಳಿತುಕೊಳ್ಳದೇ ರೈತರು ಸಮಗ್ರ ಬೆಳೆ ಪದ್ಧತಿಯತ್ತ ಹೆಚ್ಚಿನ ಚಿತ್ತ ಹರಿಸುವ ಮೂಲಕ ತಮ್ಮ ಯಶಸ್ವಿ ಬದುಕಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪಾತ್ರವೂ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಇನ್ನು ಹೆಚ್ಚಿನ ಸಂಶೋಧನೆಗಳನ್ನ ನಡೆಸುವ ಮೂಲಕ ರೈತರ ಬದುಕಿನಲ್ಲಿ ಮತ್ತಷ್ಟು ಆಶಾಕಿರಣ ಮೂಡಿಸುವ ಪ್ರಯತ್ನ ಮಾಡುತ್ತಿದೆ.
ಒಟ್ಟಿನಲ್ಲಿ ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೈತರು ಬದುಕು ಕಟ್ಟಿಕೊಳ್ಳುವತ್ತ ಹೊರಟಿರುವುದು ಒಳ್ಳೆಯ ಬೆಳವಣಿಗೆ. ಇನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸಿರುವ ರೈತರಿಗೆ ಕೃಷಿ ವಿಶ್ವವಿದ್ಯಾಲಯ ಅತ್ಯುತ್ತಮ ಅರಿವು ಮೂಡಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನೆ ಅಸಂಖ್ಯಾತ ರೈತರ ಬದುಕಿನ ದಿಕ್ಕನ್ನೇ ಬದಲಾಯಿಸಿಸುವುದು ನಿಜಕ್ಕೂ ಶ್ಲಾಘನೀಯ.
(ವರದಿ: ಸಿದ್ದು ಬಿರಾದಾರ್, 9980914169)
ಇದನ್ನೂ ಓದಿ:ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್
(Raichur Agricultural University made bio insecticides for insects)
Published On - 12:10 pm, Fri, 2 April 21