ಅಂಬೇಡ್ಕರ್ ಫೋಟೋಗೆ ಅಪಮಾನ: ಗ್ರಾಮ ವಾಸ್ತವ್ಯಕ್ಕೆ ಹೋದ ಸಚಿವ ಅಶೋಕ್ ವಿರುದ್ಧ ಸ್ಥಳೀಯರು ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2022 | 8:28 PM

ಕಂದಾಯ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ ಅರ್ಜಿ ಸ್ವೀಕಾರದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಫೋಟೋಗೆ ಅಪಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಗಲಾಟೆ ಮಾಡಿದರು.

ಅಂಬೇಡ್ಕರ್ ಫೋಟೋಗೆ ಅಪಮಾನ: ಗ್ರಾಮ ವಾಸ್ತವ್ಯಕ್ಕೆ ಹೋದ ಸಚಿವ ಅಶೋಕ್ ವಿರುದ್ಧ ಸ್ಥಳೀಯರು ಆಕ್ರೋಶ
ಡಾ.ಅಂಬೇಡ್ಕರ್ ಫೋಟೋ, ಸಚಿವ ಆರ್ ಅಶೋಕ
Follow us on

ರಾಯಚೂರು: ಕಂದಾಯ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ ಅರ್ಜಿ ಸ್ವೀಕಾರದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಫೋಟೋಗೆ ಅಪಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಗಲಾಟೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮ ನಡೆದಿದೆ. ಇಂದು (ಅ. 15) ಮಧ್ಯಾಹ್ನ ಕಾರ್ಯಕ್ರಮದ ಮಳಿಗೆಯೊಂದರ ಹಿಂಭಾಗ ಅಂಬೇಡ್ಕರ್ ಫೋಟೋ ಬಿಸಾಡಲಾಗಿದೆ. ವಿಷಯ ತಿಳಿದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಅಪಮಾನ ಎಸಗಿದ ಅಧಿಕಾರಿ ಅಮಾನತಿಗೆ ಆಗ್ರಹಿಸಿದರು. ಜೊತೆಗೆ ಸಚಿವ ಆರ್ ಅಶೋಕ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಅರ್ಜಿ ಸ್ವೀಕಾರ ತಡೆಹಿಡಿದಿದ್ದು, ಬಳಿಕ ಸಚಿವ ಆರ್ ಅಶೋಕ್ ಜೊತೆ ಮಾತಿಗೆ ಪೊಲೀಸರು ಕರೆ ತಂದರು. ಬಳಿಕ ಸ್ಟಾಲ್​ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಫೋಟೋ ಇರಿಸಲಾಯಿತು.

60 ಸಾವಿರ ಜನಕ್ಕೆ ಸ್ಪಾಟ್​ನಲ್ಲೇ ಹಕ್ಕು ಪತ್ರ ನೀಡುತ್ತೇವೆ: ಸಚಿವ ಆರ್.ಅಶೋಕ್ 

ಕಳೆದ ಎರಡು ವರ್ಷದಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ಜನರ ಜೊತೆ ಕೂತು ಮಾತನಾಡಿದರೆ ಮನೆ ಬಾಗಿಲಿಗೆ ಪರಿಹಾರ ಸಿಗತ್ತೆ. ಲಂಬಾಣಿ ತಾಂಡಾ, ಕುರುಬರ ಹಟ್ಟಿ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿಲ್ಲ. ನಮ್ಮ ಸರ್ಕಾರಿಂದ ಅವುಗಳನ್ನ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕಲ್ಯಾಣ ಕರ್ನಾಟಕದ 60 ಸಾವಿರ ಜನಕ್ಕೆ ಸ್ಪಾಟ್​ನಲ್ಲೇ ಹಕ್ಕು ಪತ್ರ ನೀಡುತ್ತೇವೆ. ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ನವೆಂಬರ್ ಕೊನೆ ವೇಳೆ ಕೊಡುತ್ತೇವೆ. ಮೂರು ತಿಂಗಳ ಕಾಲ ಈ ಪ್ರಕ್ರಿಯೆ ಜಾರಿಯಲ್ಲಿರತ್ತೆ. 94(c),94(cc) ಇತರೆ ಜಾತಿ ಜನಾಂಗದ ಬಡವರಿಗೂ ನೀಡುತ್ತೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣ ಆಗೇ ಆಗುತ್ತೆ

ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣ ಆಗೇ ಆಗುತ್ತದೆ. ಕರ್ನಾಟಕದ ಎಷ್ಟೋ ಕಡೆ ಛತ್ರಪತಿ ಶಿವಾಜಿ ಪ್ರತಿಮೆಗಳಿವೆ. ಭಾಷೆ ಒಂದು ಏರಿಯಾಗೆ ಸೀಮಿತಗೊಳಿಸುವುದು ಸರಿಯಲ್ಲ. ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಕ್ರಮ‌ಗಳನ್ನು ಕೈಗೊಳ್ಳುತ್ತದೆ. ಕರ್ನಾಟಕದಲ್ಲಿ ಬೇರೆ ಎಲ್ಲ ರಾಜ್ಯಗಳಿಗೂ ಅವಕಾಶ ಕೊಟ್ಟಿದ್ದೇವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಕನ್ನಡ ಭವನ‌ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಶ್ರೀಗಳನ್ನ ಪೀಠದಿಂದ ಕೆಳಗಿಳಿಸುವ ಸುಳಿವು ನೀಡಿದ ಅಶೋಕ್

ಮುರುಘಾ ಶ್ರೀಗಳನ್ನ ಪೀಠದಿಂದ ಕೆಳಗಿಳಿಸುವ ವಿಚಾರವಾಗಿ ಮಾತನಾಡಿದ ಅವರು ನಿನ್ನೆ ಮುಖ್ಯಮಂತ್ರಿ ಸಭೆ ಕರೆದಿದ್ದರು.
ಚಿತ್ರದುರ್ಗದ ಮುರುಘಾ ಮಠದ ಭಕ್ತರು ,ಮುಖ್ಯಸ್ಥರು ಬಂದಿದ್ದರು. ಏನು ಮಾಡಬೇಕು ಅಂತ ಸಲಹೆ ಕೊಟ್ಟಿದ್ದಾರೆ. ಆ ಪೀಠಕ್ಕೆ ಸಂಭಂಧಿಸಿದಂತೆ ಸಿಎಂ ಚರ್ಚೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸಿಎಂ ತೀರ್ಮಾನವನ್ನ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:07 pm, Sat, 15 October 22