ಭೋವಿ ನಿಗಮದ ಭೂ ಮಂಜೂರಾತಿಯಲ್ಲಿ ಅಕ್ರಮ: ಬರಡು ಭೂಮಿ ಹಂಚಿಕೆ ಆರೋಪ; ಘೇರಾವ್ ಯತ್ನ
ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಲ್ಲಿ ಭೂಮಿ ಹಂಚಿಕೆ ಅಕ್ರಮ ನಡೆದಿರುವ ಆರೋಪ ರಾಯಚೂರಿನಲ್ಲಿ ಸಂಚಲನ ಮೂಡಿಸಿದೆ. ಫಲಾನುಭವಿಗಳಿಂದ ಬ್ರೋಕರ್‌ಗಳು ಹಣ ವಸೂಲಿ ಮಾಡಿ, ಫಲವತ್ತಾದ ಭೂಮಿ ಬದಲು ಬರಡು ಭೂಮಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ನಿಗಮದ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದಾಗ ಹೈಡ್ರಾಮಾ ನಡೆದು, ಫಲಾನುಭವಿಗಳು ಪ್ರತಿಭಟಿಸಿದ್ದಾರೆ. ಅಧ್ಯಕ್ಷರು ಕ್ರಮದ ಭರವಸೆ ನೀಡಿದ್ದಾರೆ.

ರಾಯಚೂರು, ನವೆಂಬರ್ 20: ಭೋವಿ ನಿಗಮದಲ್ಲಿ ಹಂಚಿಕೆಯಾಗಿರುವ ಭೂ ಮಂಜೂರಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಭೋವಿ ನಿಗಮ ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿತ್ತು. ಅಕ್ರಮ ಭೂ ಹಂಚಿಕೆ ಆರೋಪ ಬೆನ್ನಲ್ಲೇ ಈಗ ಭೋವಿ ನಿಗಮ ಎಚ್ಚೆತ್ತುಕೊಂಡಿದ್ದು, ಖುದ್ದು ನಿಗಮದ ಅಧ್ಯಕ್ಷರು ವಿವಾದಿತ ಜಮೀನಿಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ.
ಭೂ ಒಡೆತನ ಯೋಜನೆಯಡಿ ಭೂಮಿ ಕೊಡಿಸುವ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗಿದೆಯಾ? ಫಲವತ್ತಾದ ಜಮೀನು ನೀಡುವ ಬದಲು ಬರಡು ಹಾಗೂ ಸವಳು ಭೂಮಿ ಹಂಚಿಕೆ ಮಾಡಲಾಗಿದೆಯಾ? ಹೀಗೊಂದು ಗಂಭೀರ ಆರೋಪ ರಾಯಚೂರು ಜಿಲ್ಲೆಯಲ್ಲಿ ಕೇಳಿಬಂದಿದೆ. ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಒಬ್ಬೊಬ್ಬ ಫಲಾನುಭವಿಯಿಂದ 80 ಸಾವಿರ ರೂ. ವಸೂಲಿ ಆರೋಪ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಫಲಾನುಭವಿಗಳು ಬ್ರೋಕರ್‌ಗಳ ವಿರುದ್ಧ ಹಣ ವಸೂಲಿ ಆರೋಪ ಮಾಡಿದ್ದು, ಒಬ್ಬೊಬ್ಬ ಫಲಾನುಭವಿಯಿಂದ ಬರೋಬ್ಬರಿ 80 ಸಾವಿರ ರೂ ವಸೂಲಿ ಮಾಡಲಾಗಿದೆ ಎಂದು ದೂರಿದ್ದಾರೆ. ಇದಷ್ಟೇ ಅಲ್ಲ, ಫಲಾನುಭವಿಗಳಿಗೆ ತೋರಿಸಿದ ಜಮೀನು ಒಂದಾದರೆ, ಮಂಜೂರು ಮಾಡಿರುವ ಜಮೀನೇ ಬೇರೆಯಾಗಿದೆ ಎಂಬುದು ಮತ್ತೊಂದು ಆರೋಪ. ಫಲವತ್ತಾದ ಭೂಮಿ ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಫಲಾನುಭವಿಗಳಿಗೆ ಬರಡು ಹಾಗೂ ಸವಳು ಭೂಮಿ ನೀಡಲಾಗಿದೆ ಎನ್ನಲಾಗಿದ್ದು, ಜಮೀನಿಗಾಗಿ ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ.
ಇದನ್ನೂ ಓದಿ: ಭೋವಿ ನಿಗಮ ಹಗರಣ: ಆರೋಪಿಗಳ ಸ್ಥಿರಾಸ್ತಿ ಮುಟ್ಟುಗೋಲು ಹಾಕಿದ ಇಡಿ
ಭೂ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪದ ಬೆನ್ನಲ್ಲೇ ಭೋವಿ ನಿಗಮ ಅಲರ್ಟ್ ಆಗಿದೆ. ಈ ವಿವಾದದ ನಡುವೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅವರೇ ಖುದ್ದು ರಾಯಚೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಜಮೀನು ಹಂಚಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಫಲಾನುಭವಿಗಳು ಹಾಗೂ ಹೋರಾಟಗಾರರು ಅಧ್ಯಕ್ಷರ ಎದುರೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮಾತುಕತೆ ವೇಳೆ ಅಧ್ಯಕ್ಷ ರಾಮಪ್ಪ ಅವರೊಂದಿಗೆ ಮಾತಿನ ಚಕಮಕಿ ಹಾಗೂ ವಾಗ್ವಾದವೂ ನಡೆದಿದೆ. ಕೆಲ ಹೋರಾಟಗಾರರು ಘೇರಾವ್ ಹಾಕಲು ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದೊಡ್ಡ ಹೈಡ್ರಾಮಾ ನಡೆದಿದೆ.
ಒಟ್ಟು 48 ಫಲಾನುಭವಿಗಳಿಗೆ ಜಮೀನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಹಲವರು ಭೂಮಿಯ ಗುಣಮಟ್ಟದ ಬಗ್ಗೆ ತಕರಾರು ತೆಗೆದಿದ್ದಾರೆ. ಮತ್ತೊಂದೆಡೆ, ಕೆಲ ಫಲಾನುಭವಿಗಳು ತಮಗೆ ತೋರಿಸಿರುವ ಅದೇ ಜಮೀನು ಬೇಕೆಂದು ಪಟ್ಟು ಹಿಡಿದಿದ್ದಾರೆ. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎದುರು ಕೆಲ ಫಲಾನುಭವಿಗಳು, ‘ಇದು ನಮಗಿಷ್ಟ ಜಮೀನು. ನಾವು ಒಪ್ಪಿಗೆ ಕೊಟ್ಟ ಮೇಲೆ ಭೂಮಿ ಪಡೆಯಲಾಗಿದೆ. ನಮ್ಮ ತಕರಾರು ಇಲ್ಲ’ ಅಂತ ಹೇಳಿದ್ದಾರೆ.
ಅಧ್ಯಕ್ಷ ರಾಮಪ್ಪ ಹೇಳಿದ್ದಿಷ್ಟು
ಇತ್ತ ವಿವಾದಕ್ಕೆ ಫುಲ್ ಸ್ಟಾಪ್ ಹಾಕಲು ಅಧ್ಯಕ್ಷ ರಾಮಪ್ಪ ಮುಂದಾಗಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ‘ಭೂ ಮಂಜೂರಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಭೂಮಿಯ ಫಲವತ್ತತೆ ವಿಚಾರದಲ್ಲಿ ಸಮಸ್ಯೆ ಇರಬಹುದು. ಹಂತ ಹಂತವಾಗಿ ಉಳುಮೆ ಮಾಡಿದರೆ ಜಮೀನು ಕೃಷಿಗೆ ಯೋಗ್ಯವಾಗಲಿದೆ. ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಭೋವಿ ನಿಗಮ ಬಹುಕೋಟಿ ಹಗರಣ: ಅಕ್ರಮ ಹಣ ವರ್ಗಾವಣೆ ಪತ್ತೆ, ಮಹತ್ವದ ದಾಖಲೆ ಕಲೆಹಾಕಿದ ED
ಒಟ್ಟಿನಲ್ಲಿ ಬಡ ಫಲಾನುಭವಿಗಳಿಗೆ ಭೂಮಿ ಒಡೆತನ ಕಲ್ಪಿಸಬೇಕಾದ ಯೋಜನೆಯಲ್ಲೇ ಅಕ್ರಮದ ಆರೋಪ ಕೇಳಿಬಂದಿದ್ದು, ಬ್ರೋಕರ್‌ಗಳ ಹಣ ವಸೂಲಿ ಆರೋಪ ಹಾಗೂ ಭೂಮಿಯ ಗುಣಮಟ್ಟದ ವಿವಾದಕ್ಕೆ ನಿಗಮದ ಅಧಿಕಾರಿಗಳು ಯಾವ ರೀತಿ ಪರಿಹಾರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




