ಮತ್ತೆ ಸದ್ದು ಮಾಡುತ್ತಿದೆ ಭೋವಿ ಅಭಿವೃದ್ಧಿ ನಿಗಮ ಅವ್ಯವಹಾರ: ಏನಿದು ಪ್ರಕರಣ? ಈವರೆಗೆ ಏನೇನಾಯ್ತು? ಇಲ್ಲಿದೆ ವಿವರ
Bhovi Corporation; ಭೋವಿ ಅಭಿವೃದ್ಧಿ ನಿಗಮದಲ್ಲಿ ಮತ್ತೆ ಅವ್ಯವಹಾರದ ಆರೋಪ ಕೇಳಿಬಂದಿದೆ. ನಿಗಮದಿಂದ ಅಕ್ರಮ ಹಣಕಾಸು ವರ್ಗಾವಣೆ ಮಾಡಿದ ಆರೋಪ ಕಳೆದ ವರ್ಷ ಕೇಳಿಬಂದಿತ್ತು. ಇದೀಗ ನಿಗಮದ ಅಧ್ಯಕ್ಷರ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಅಧ್ಯಕ್ಷರ ರಾಜೀನಾಮೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದೂ ಹೇಳಲಾಗಿದೆ. ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಧ್ಯಕ್ಷ ಎಸ್ ರವಿಕುಮಾರ್ ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಇಲ್ಲಿವರೆಗೆ ನಡೆದಿರುವ ಬೆಳವಣಿಗೆಗಳ ವಿವರ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 3: ಭೋವಿ ಅಭಿವೃದ್ಧಿ ನಿಗಮದಲ್ಲಿ (Bhovi Development Corporation)ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ ಕಳೆದ ವರ್ಷ (2024) ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿರುವ ನಿಗಮದ ಕಚೇರಿ ಮೇಲೆ ಸಿಐಡಿ (CID) ಅಧಿಕಾರಿಗಳು ದಾಳಿ ನಡೆಸಿದ್ದರು. 2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವ ಆಮಿಷವೊಡ್ಡಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಆಧಾರದಲ್ಲಿ ಸಿಐಡಿ ದಾಳಿ ನಡೆದಿತ್ತು. ಆ ವಿಚಾರದಲ್ಲಿ ತನಿಖೆಯೂ ನಡೆಯುತ್ತಿದೆ. ಇದೀಗ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮೇಲೆಯೇ ಆರೋಪ ಕೇಳಿಬಂದಿದೆ.
ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರ ವಿರುದ್ಧದ ಆರೋಪವೇನು?
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಯೋಜನೆಗಳಡಿ ಸವಲತ್ತು ಒದಗಿಸಿಕೊಡಲು ರವಿಕುಮಾರ್ ಶೇಕಡ 60 ರಷ್ಟು ಲಂಚ ಕೇಳುತ್ತಿದ್ದಾರೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಮೌರ್ಯ ಗಂಭೀರ ಆರೋಗ್ಯ ಮಾಡಿದ್ದರು. ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, 2021-22 ರಲ್ಲಿ ನಿಗಮದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ 85 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದರು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರ ರಾಜೀನಾಮೆಗೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ
ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರ ವಿರುದ್ಧದ ಲಂಚದ ಆರೋಪ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿದ್ದರು. ರಾಜೀನಾಮೆ ನೀಡುವಂತೆ ರವಿಕುಮಾರ್ಗೆ ಅವರಿ ಸೂಚಿಸಿದ್ದಾರೆ ಎಂದು ಮಂಗಳವಾರ ಮೂಲಗಳು ತಿಳಿಸಿದ್ದವು. ಆದರೆ, ಅದಾದ ನಂತರವೂ ರವಿಕುಮಾರ್ ರಾಜೀನಾಮೆ ನೀಡಿಲ್ಲ.
ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್ ಹೇಳಿದ್ದೇನು?
ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್ ಇದೀಗ ಶಿವಮೊಗ್ಗದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದು ತಮ್ಮ ವಿರುದ್ಧ ಮಾಡಿರುವ ಷಡ್ಯಂತ್ರ ಎಂದಿರುವ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಅಲ್ಲದೆ, ಎಐ ತಂತ್ರಜ್ಞಾನ ಬಳಕೆ ಮಾಡಿ ಕೆಲ ಸಂಗತಿಗಳನ್ನು ತಿರುಚಿದ್ದಾರೆ. ನಿಗಮದಲ್ಲಿ ಎಲ್ಲಾ ಕೆಲಸಗಳನ್ನು ಪಾರದರ್ಶಕವಾಗಿ ಮಾಡಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
