ರಾಯಚೂರು: ಸಿಂಧನೂರಿನ ಐವರಿಗೆ ಸಿಎಎ ಕಾಯ್ದೆಯಡಿ ಪೌರತ್ವ

| Updated By: ವಿವೇಕ ಬಿರಾದಾರ

Updated on: Aug 10, 2024 | 11:19 AM

1971ರಲ್ಲಿ ಬಾಂಗ್ಲಾದಿಂದ ಬಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.​ಹೆಚ್​ ಕ್ಯಾಂಪ್​​ಗಳಲ್ಲಿ ವಾಸವಿರುವ ಬಾಂಗ್ಲಾ​ ನಿರಾಶ್ರಿತರ ಪೈಕಿ ಐವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಡಿ ಭಾರತೀಯ ಪೌರತ್ವ ನೀಡಲಾಗಿದೆ. ಸಿಎಎ ಅಡಿ ಪೌರತ್ವ ಪಡೆದ ರಾಜ್ಯದ ಮೊದಲ ಪ್ರಕರಣವಾಗಿದೆ.

ರಾಯಚೂರು: ಸಿಂಧನೂರಿನ ಐವರಿಗೆ ಸಿಎಎ ಕಾಯ್ದೆಯಡಿ ಪೌರತ್ವ
ಪೌರತ್ವ ಪಡೆದ ಸುಕುಮಾರ್​​
Follow us on

ರಾಯಚೂರು, ಆಗಸ್ಟ್​​ 10: ಸಿಂಧನೂರು ತಾಲೂಕಿನ ಆರ್.​ಹೆಚ್​ ಕ್ಯಾಂಪ್​​ಗಳಲ್ಲಿ ವಾಸವಿರುವ ಬಾಂಗ್ಲಾ​ ನಿರಾಶ್ರಿತರ ಪೈಕಿ ಐವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (CCA)ಯಡಿ ಭಾರತೀಯ ಪೌರತ್ವ ನೀಡಲಾಗಿದೆ. ಇದು ಕಾಯ್ದೆಯಡಿ ಪೌರತ್ವ (Citizenship) ಪಡೆದ ರಾಜ್ಯದ ಮೊದಲ ಪ್ರಕರಣವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸಿಎಎ ಅಡಿ ಕೆಲವರಿಗೆ ಈಗಾಗಲೇ ಪೌರತ್ವ ನೀಡಲಾಗಿದೆ. ಇದೀಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್​.ಹೆಚ್​. ಕ್ಯಾಂಪ್​ಗಳಲ್ಲಿರುವ ರಾಮಕೃಷ್ಣನ್ ಅಭಿಕರಿ, ಅದ್ವಿತ, ಸುಕುಮಾರ, ಬಿಪ್ರದಾಸ್ ಗೋಲ್ಡರ್, ಜಯಂತ ಮಂಡಲ್ ಅವರಗೆ ಪೌರತ್ವ ನೀಡಲಾಗಿದೆ.

ಕಳೆದ ಬಾರಿ ಸಿಂಧನೂರಿಗೆ ಪ್ರಧಾನಿ ಮೋದಿ ಆಗಮಿಸಿದ್ದ ವೇಳೆ ವಲಸಿಗರು ಪೌರತ್ವಕ್ಕಾಗಿ ಬಿಜೆಪಿ ಮಾಜಿ ಸಂಸದ ವೀರುಪಾಕ್ಷಪ್ಪ ಮೂಲಕ ಮನವಿ ಪತ್ರ ನೀಡಿದ್ದರು. ಇದೇ ವೇಳೆ ವಿವಿಧ ಸಮಸ್ಯೆಗಳ ಬಗ್ಗೆಯೂ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದರು. ಬಳಿಕ ಅಂಚೆ ಕಚೇರಿ, ರೈಲ್ವೆ ಮತ್ತು ಗುಪ್ತಚರ ಇಲಾಖೆಗಳನ್ನೊಳಗೊಂಡ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿ, ವಾಸಸ್ಥಳ, ದಾಖಲೆಗಳನ್ನು ಪರಿಶೀಲಿಸಿ ಪೌರತ್ವಕ್ಕೆ ಶಿಫಾರಸ್ಸು ಮಾಡಿತ್ತು. ನಂತರ ರಾಜ್ಯ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯ ಪೌರತ್ವ ನೀಡಿದೆ.

ಇದನ್ನೂ ಓದಿ: ಬಂಗಾಳದ ಫಲಾನುಭವಿಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರ ವಿತರಣೆ; ಕೇಂದ್ರ ಸರ್ಕಾರ ಮಾಹಿತಿ

1971ರಿಂದ ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರು

1971ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಭಾರತದಲ್ಲಿ ನೆಲೆಸಲಿಚ್ಚಿಸಿದ್ದ ಕುಟುಂಬಗಳಿಗೆ ಸಿಂಧನೂರು ತಾಲೂಕಿನಲ್ಲಿ ಒಟ್ಟು 5 ಪುನರ್ವಸತಿ ಕೇಂದ್ರ ಸ್ಥಾಪಿಸಿ 932 ಕುಟುಂಬಗಳಿಗೆ ನೆಲೆ ಒದಗಿಸಲಾಗಿತ್ತು. ಈ ಪೈಕಿ, 1 ರಿಂದ 4 ಕ್ಯಾಂಪ್ ಗಳಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ 727 ಕುಟುಂಬ, 5ನೇ ಕ್ಯಾಂಪ್‌ನಲ್ಲಿ ಬರ್ಮಾದಿಂದ ಬಂದ 205 ಕುಟುಂಬಗಳಿವೆ.

ನಾಲ್ಕು ದಶಕಗಳಿಂದ ಆರ್. ಎಚ್.ಕ್ಯಾಂಪ್‌ನಲ್ಲಿಯೇ ವಾಸಿಸುತ್ತಿರುವವರ ಸಂಖ್ಯೆ ಈಗ ಸುಮಾರು 25,000 ಗಡಿ ದಾಟಿದೆ. ಆ ಪೈಕಿ, 20 ಸಾವಿರ ಮಂದಿ ಬಾಂಗ್ಲಾ ನಿರಾಶ್ರಿತರಾಗಿದ್ದು, 5 ಸಾವಿರ ಮಂದಿ ಬರ್ಮಾದವರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ