ಬಂಗಾಳದ ಫಲಾನುಭವಿಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರ ವಿತರಣೆ; ಕೇಂದ್ರ ಸರ್ಕಾರ ಮಾಹಿತಿ

ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಪೌರತ್ವ ಪ್ರಮಾಣಪತ್ರಗಳ ಮೊದಲ ಸೆಟ್‌ಗಳನ್ನು ವಿತರಿಸಿದ ಎರಡು ವಾರಗಳ ನಂತರ ಪಶ್ಚಿಮ ಬಂಗಾಳದಲ್ಲಿಯೂ ಪೌರತ್ವ ಪ್ರಮಾಣಪತ್ರಗಳ ವಿತರಣೆ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಿಎಎ ಜಾರಿಯನ್ನು ಬಲವಾಗಿ ವಿರೋಧಿಸಿದ್ದರು. 

ಬಂಗಾಳದ ಫಲಾನುಭವಿಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರ ವಿತರಣೆ; ಕೇಂದ್ರ ಸರ್ಕಾರ ಮಾಹಿತಿ
ಸಿಎಎ
Follow us
ಸುಷ್ಮಾ ಚಕ್ರೆ
|

Updated on:May 29, 2024 | 10:21 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 2024ರ ಪೌರತ್ವ (ತಿದ್ದುಪಡಿ) ನಿಯಮಗಳ (CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇಂದು (ಬುಧವಾರ) ಪ್ರಾರಂಭಿಸಿದೆ. ಪಶ್ಚಿಮ ಬಂಗಾಳ (West Bengal) ರಾಜ್ಯದಿಂದ ಮೊದಲ ಸೆಟ್ ಅರ್ಜಿದಾರರಿಗೆ ಇಂದು ಅಧಿಕಾರ ಸಮಿತಿಯು ಪೌರತ್ವವನ್ನು ನೀಡಿತು. ಹರಿಯಾಣ ಮತ್ತು ಉತ್ತರಾಖಂಡದ ಸಶಕ್ತ ಸಮಿತಿಗಳು ಕೂಡ ಸಿಎಎ ಅಡಿಯಲ್ಲಿ ಅರ್ಜಿದಾರರ ಮೊದಲ ಸೆಟ್‌ಗೆ ಇಂದು ಪೌರತ್ವವನ್ನು ನೀಡಿವೆ.

ಮಾರ್ಚ್ 11ರಂದು ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ನಿಯಮಗಳ ಅಧಿಸೂಚನೆ ಮಾಡಿತ್ತು. ಆ ನಿಯಮಗಳನ್ನು ಸೂಚಿಸಿದ 2 ತಿಂಗಳ ನಂತರ ಸಿಎಎ ಅಡಿಯಲ್ಲಿ ಮೊದಲ ಸೆಟ್ ಪೌರತ್ವ ಪ್ರಮಾಣಪತ್ರಗಳನ್ನು ಮೇ 15ರಂದು 14 ಜನರಿಗೆ ನೀಡಲಾಯಿತು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲು 2019ರ ಡಿಸೆಂಬರ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗಿದೆ. ಇದು 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಅರ್ಹತಾ ಅವಧಿಯನ್ನು 11 ವರ್ಷಗಳಿಂದ 5ಕ್ಕೆ ಇಳಿಸಿತು. ಸಿಎಎ ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು ಭಾರತದಲ್ಲಿ ಪೌರತ್ವವನ್ನು ಪಡೆಯಬಹುದು.

ಇದನ್ನೂ ಓದಿ: Mamata Banerjee: ಚುನಾವಣೆ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್; ವಿಡಿಯೋ ವೈರಲ್

ಪಶ್ಚಿಮ ಬಂಗಾಳದಲ್ಲಿ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಂಗಾಳದ ಗಡಿ ಪ್ರದೇಶಗಳಲ್ಲಿನ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲಾಗುತ್ತಿದೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದನ್ನು ಟಿಎಂಸಿ ವಿರೋಧಿಸುತ್ತದೆ. ಅವರು ಸಿಎಎಯನ್ನು ಏಕೆ ವಿರೋಧಿಸುತ್ತಿದ್ದಾರೆ? ಈ ಟಿಎಂಸಿ ನಾಯಕರು ಸಿಎಎ ಬಗ್ಗೆ ಏಕೆ ಸುಳ್ಳು ಹೇಳುತ್ತಿದ್ದಾರೆ?” ಎಂದು ಮೋದಿ ಪ್ರಶ್ನಿಸಿದ್ದರು.

ಹಿಂದೂಗಳು ಮತ್ತು ಮತುವ ಸಮುದಾಯದವರು ಬಂಗಾಳದಲ್ಲಿ ಉಳಿಯುವುದನ್ನು ಟಿಎಂಸಿ ಬಯಸುವುದಿಲ್ಲ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಸಮಾಜದ ಒಂದು ವರ್ಗವನ್ನು ಸಮಾಧಾನಪಡಿಸಲು ಟಿಎಂಸಿ ಸರ್ಕಾರವು ದಲಿತರು ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿರುವ ಸಂವಿಧಾನದ ಹಕ್ಕಿನ ಮೇಲೆ ಬಹಿರಂಗವಾಗಿ ದಾಳಿ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮೀಸಲಾತಿಯನ್ನು ಲೂಟಿ ಮಾಡಲಾಗಿದೆ ಮತ್ತು ಮುಸ್ಲಿಮರಿಗೆ ಸುಳ್ಳು OBC ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಸಿಎಂ ನವೀನ್ ಪಟ್ನಾಯಕ್ ಆರೋಗ್ಯದ ತನಿಖೆಗೆ ವಿಶೇಷ ಸಮಿತಿ ರಚನೆ; ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ನಾನು ನನ್ನ ಪ್ರಾಣ ತ್ಯಾಗ ಬೇಕಾದರೂ ಮಾಡಲು ಸಿದ್ಧ. ಆದರೆ ಪಶ್ಚಿಮ ಬಂಗಾಳದಲ್ಲಿ ಸಿಎಎ, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯಂತಹ ಬಿಜೆಪಿಯ ಒಡೆದು ಆಳುವ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Wed, 29 May 24