ಸಿಎಂ ನವೀನ್ ಪಟ್ನಾಯಕ್ ಆರೋಗ್ಯದ ತನಿಖೆಗೆ ವಿಶೇಷ ಸಮಿತಿ ರಚನೆ; ಪ್ರಧಾನಿ ಮೋದಿ

ಸಿಎಂ ನವೀನ್ ಪಟ್ನಾಯಕ್ ಆರೋಗ್ಯದ ತನಿಖೆಗೆ ವಿಶೇಷ ಸಮಿತಿ ರಚನೆ; ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on:May 29, 2024 | 4:16 PM

ಒಡಿಶಾದಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಎಂ ನವೀನ್ ಪಟ್ನಾಯಕ್ (ನವೀನ್ ಬಾಬು) ಅವರ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಅವರ ಆರೋಗ್ಯದ ಹಿಂದೆ ಯಾರದಾದರೂ ಷಡ್ಯಂತ್ರವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಡಿಶಾದಲ್ಲಿ (Odisha) ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik Health) ಅವರ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಹದಗೆಟ್ಟಿರುವ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ತನಿಖೆ ನಡೆಸಲು ಜೂನ್ 10ರ ನಂತರ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚುನಾವಣಾ ರ್ಯಾಲಿಯಲ್ಲಿ ಸಿಎಂ ಆಪ್ತ ಮತ್ತು ಬಿಜೆಡಿ ನಾಯಕ ವಿಕೆ ಪಾಂಡಿಯನ್ ನಡುಗುತ್ತಿರುವ ಕೈ ಹಿಡಿದ ವಿಡಿಯೋ ವೈರಲ್ ಆಗಿದ್ದು, ಒಡಿಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಒಡಿಶಾದ ಮಯೂರ್‌ಭಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇತ್ತೀಚಿನ ದಿನಗಳಲ್ಲಿ ನವೀನ್ ಬಾಬು ಅವರ ಎಲ್ಲಾ ಹಿತೈಷಿಗಳು ತುಂಬಾ ಚಿಂತಿತರಾಗಿದ್ದಾರೆ. ಕಳೆದ ವರ್ಷ ನವೀನ್ ಬಾಬು ಅವರ ಆರೋಗ್ಯವು ಹೇಗೆ ಹದಗೆಟ್ಟಿದೆ ಎಂಬುದನ್ನು ನೋಡಿ ಅವರು ತುಂಬಾ ಚಿಂತಿತರಾಗಿದ್ದಾರೆ. ನವೀನ್ ಬಾಬು ಅವರ ಆಪ್ತರು ನನ್ನನ್ನು ಭೇಟಿಯಾದಾಗಲೆಲ್ಲಾ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ಚರ್ಚಿಸುತ್ತಾರೆ. ನವೀನ್ ಬಾಬು ಅವರು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ, ಅವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗಬೇಕಾಗಿದೆ. ನವೀನ್ ಬಾಬು ಅವರ ಅನಾರೋಗ್ಯದ ಹಿಂದೆ ಕೆಲವರ ಷಡ್ಯಂತ್ರವಿದೆ ಎಂಬ ಅನುಮಾನ ನಮಗಿದೆ ಎಂದು ಮೋದಿ ಹೇಳಿದ್ದಾರೆ.

ನವೀನ್ ಬಾಬು ಅವರ ಅನಾರೋಗ್ಯದ ಹಿಂದೆ ಏನಾದರೂ ಷಡ್ಯಂತ್ರವಿದೆಯೇ? ಇದನ್ನು ತಿಳಿಯುವುದು ಒಡಿಶಾದ ಜನರ ಹಕ್ಕು. ನವೀನ್ ಪಟ್ನಾಯಕ್ ಹೆಸರಿನಲ್ಲಿ ತೆರೆಮರೆಯಲ್ಲಿ ಒಡಿಶಾದಲ್ಲಿ ಅಧಿಕಾರ ಅನುಭವಿಸುತ್ತಿರುವವರ ಲಾಬಿಯ ಕೈವಾಡ ಇದರಲ್ಲಿ ಇದೆಯೇ ಎಂಬುದು ಪ್ರಶ್ನೆ. ಈ ನಿಗೂಢವನ್ನು ಬಯಲಿಗೆಳೆಯುವುದು ಮುಖ್ಯವಾದ್ದರಿಂದ ಜೂನ್ 10ರಂದು ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನವೀನ್ ಬಾಬು ಅವರ ಆರೋಗ್ಯ ಏಕಾಏಕಿ ಹದಗೆಡಲು ಕಾರಣವೇನು ಎಂದು ತನಿಖೆ ನಡೆಸಲಿದೆ ಎಂದಿದ್ದಾರೆ

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 29, 2024 04:16 PM