ದೇವಸ್ಥಾನದ ಗೇಟ್​​ ಬೀಗ ತೆಗೆಯುವ ವಿಚಾರಕ್ಕೆ ಗಲಾಟೆ; ರಾಜಕೀಯ ಮೇಲಾಟದ ಶಂಕೆ

| Updated By: ವಿವೇಕ ಬಿರಾದಾರ

Updated on: Nov 14, 2022 | 11:06 PM

ದೇವಸ್ಥಾನ ಕ್ಲೋಸ್ ಮಾಡಿದ್ದ ವಿಚಾರಕ್ಕೆ ಬಡಿದಾಟ ನಡೆದಿರುವ ಘಟನೆ ರಾಯಚೂರು ನಗರದ ಎಲ್​ಬಿಎಸ್ ಕಾಲೋನಿಯಲ್ಲಿ ನಡೆದಿದೆ.

ದೇವಸ್ಥಾನದ ಗೇಟ್​​ ಬೀಗ ತೆಗೆಯುವ ವಿಚಾರಕ್ಕೆ ಗಲಾಟೆ; ರಾಜಕೀಯ ಮೇಲಾಟದ ಶಂಕೆ
ದೇವಸ್ಥಾನದ ಗೇಟ್​ ಬೀಗ ತೆಗೆಯುವ ವಿಚಾರಕ್ಕೆ ಓಂಕಾರ ಮತ್ತು ತಿಪ್ಪಾರೆಡ್ಡಿ ನಡುವೆ ಗಲಾಟೆ
Follow us on

ಅಲ್ಲಿ ದೇವಸ್ಥಾನ ಕ್ಲೋಸ್ ಮಾಡಿದ್ದ ವಿಚಾರಕ್ಕೆ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮಾಜಿ ಕೌನ್ಸಿಲರ್ ಹಾಗೂ ಸ್ಥಳೀಯ ವ್ಯಕ್ತಿಯ ನಡುವಿನ ಕಾಳಗಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಅಲ್ಲಿ ರಾಜಕೀಯ ಮೇಲಾಟದ ಶಂಕೆ ಇದ್ದು, ಈಗಲೂ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಅದು ರಾಯಚೂರು ನಗರದ ಎಲ್​ಬಿಎಸ್ ಕಾಲೋನಿ. ಇಲ್ಲಿನ ಆಂಜನೇಯ ದೇವಸ್ಥಾನ ಇಡಿ ನಗರದಾದ್ಯಂತ ಪ್ರಖ್ಯಾತಿ ಪಡೆದಿದೆ. ಇದೇ ದೇವಸ್ಥಾನದಲ್ಲಿ ನ.12 ರಂದು ಮಾರಾಮಾರಿ ನಡೆದು ಹೋಗಿದ್ದು, ಈಗಲೂ ಅಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಷ್ಟಕ್ಕೂ ನ.12 ಶನಿವಾರವಾಗಿದ್ದರಿಂದ ಆಂಜನೇಯ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತಂತೆ. ಇದೇ ವೇಳೆ ರಾಯಚೂರು ನಗರದ ಮಾಜಿ ಕೌನ್ಸಲರ್ ತಿಮ್ಮಾರೆಡ್ಡಿ ಆಂಡ್ ಟೀಂ ಅಲ್ಲಿಗೆ ಬಂದಿದೆ. ಆಗ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದ ಓಂಕಾರ ಅನ್ನೋ ವ್ಯಕ್ತಿಗೆ ಕರೆ ಮಾಡಿ, ದೇವಸ್ಥಾನದ ಗೇಟ್​ಗೆ ಹಾಕಿರುವ ಬೀಗ ತೆಗೆಯುವಂತೆ ಹೇಳಿದ್ದಾರೆ. ಆಗ ಓಂಕಾರ, ದೇವಸ್ಥಾನದಲ್ಲಿ ಕಟ್ಟಡ ಕಾಮಗಾರಿಗೆ ಬೇಕಾಗುವ ವಸ್ತುಗಳಿವೆ, ಕಳ್ಳತನವಾಗುವ ಶಂಕೆಯಿಂದ ದೊಡ್ಡ ಗೇಟ್​ಗೆ ಬೀಗ ಹಾಕಲಾಗಿದೆ. ಆದರೆ ಸಣ್ಣ ಗೇಟ್​ಗೆ ಬೀಗ ಹಾಕಲ್ಲ. ಆದರೆ ಅರ್ಚಕರು ಹಾಕಿಕೊಂಡು ಹೋಗಿರ್ಬೇಕು ಅಂತ ಹೇಳಿದ್ದರು.

ನಂತರ ಕೆಲಹೊತ್ತಲ್ಲೇ ಓಂಕಾರ ದೇವಸ್ಥಾನದ ಬಳಿಯೂ ಬಂದಿದ್ದರು. ಆಗ ಓಂಕಾರ ಹಾಗೂ ಮಾಜಿ ಕೌನ್ಸಲರ್ ತಿಮ್ಮಾರೆಡ್ಡಿ ಆಂಡ್​ ಟೀಂ ನಡುವೆ ಮಾತಿಗೆ ಮಾತು ಬೆಳೆದು ಕಿರಿಕ್ ಆಗಿದೆ. ಆಗ ನೋಡನೋಡುತ್ತಲೇ ತಿಮ್ಮಾರೆಡ್ಡಿ ಹಾಗೂ ಆತನ ಬೆಂಬಲಿಗರು ಓಂಕಾರ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರಂತೆ. ಆಗ ಇಡೀ ದೇವಸ್ಥಾನ ರಣಾಂಗಣವಾಗಿ ಹೋಗಿತ್ತು.

ವಿಷಯ ತಿಳಿದು ಮಾರ್ಕೆಟ್ ಯಾರ್ಡ್ ಪೊಲೀಸರು ಅಲರ್ಟ್ ಆಗಿದ್ದು, ಎರಡು ಗುಂಪುಗಳ ಮಾರಾಮಾರಿ ಬಳಿಕ ಇಡೀ ದೇವಸ್ಥಾನದ ಸುತ್ತಲೂ ಖಾಕಿ ಕಟ್ಟೆಚ್ಚರ ವಹಿಸಿತ್ತು. ಇತ್ತ ಹಲ್ಲೆಗೊಳಗಾದ ಓಂಕಾರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ತಿಮ್ಮಾರೆಡ್ಡಿ ವಿರೋಧಿ ಬಣದವರ ಜೊತೆ ನಾನು ಅನ್ಯೋನ್ಯವಾಗಿದ್ದು, ಇದನ್ನು ಸಹಿಸಲಾಗದೇ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಅಂತ ಓಂಕಾರ, ತಿಮ್ಮಾರೆಡ್ಡಿ  ವಿರುದ್ಧ ಆರೋಪಿಸಿದ್ದಾರೆ. ಇದರ ನಡುವೆಯೇ ಮತ್ತೊಂದು ಆರೋಪ ಕೇಳಿ ಬಂದಿದ್ದು, ತಿಮ್ಮಾರೆಡ್ಡಿ ಈ ದೇವಸ್ಥಾನದವನ್ನು ಕಬ್ಜ ಮಾಡಿಕೊಳ್ಳಲು ಹಪಹಪಿಸುತ್ತಿದ್ದಾನೆ. ಇದೇ ಕಾರಣಕ್ಕೆ ದೇವಸ್ಥಾನವನ್ನು ನಿರ್ವಹಣೆ ಮಾಡುತ್ತಿರುವ ಓಂಕಾರನನ್ನು ಟಾರ್ಗೆಟ್ ಮಾಡಿರುವ ಅನುಮಾನ ಮೂಡಿದೆ.

ಆದರೆ ಘಟನೆ ಸಂಬಂಧ ಮಾಜಿ ಕೌನ್ಸಿಲರ್ ಹೇಳೋದೇ ಬೇರೆ. ಆ ದೇವಸ್ಥಾನದಲ್ಲಿ ಮಿನಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ನಿನ್ನೆ ದೇವಸ್ಥಾನಕ್ಕೆ ಬಂದು ಕಲ್ಯಾಣ ಮಂಟಪ ನಿರ್ಮಾಣದ ಕುರಿತು ಎಸ್ಟಿಮೇಟ್ ತೆಗೆದುಕೊಳ್ಳಲು ಬಂದಿದ್ವಿ. ದೇವಸ್ಥಾನಕ್ಕೆ ಬೀಗ ಹಾಕಿದ್ದರಿಂದ, ಭಕ್ತರಿಗೆ ತೊಂದರೆಯಾಗುತ್ತೆ ಅಂತ ಓಂಕಾರನನ್ನು ವಿಚಾರಿಸಿದ್ವಿ. ಆಗ ಆತ ನಮ್ಮ ಬೆಂಬಲಿಗರ ಮೇಲೆ ಹಲ್ಲೆಗೆ ಮುಂದಾದಾಗ ಈ ಘಟನೆ ನಡೆದಿದೆ ಅಂತ ತಿಮ್ಮಾರೆಡ್ಡಿ ಹೇಳಿದ್ದಾರೆ.

ಘಟನೆ ಬಳಿಕ ಪೊಲೀಸರೇ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟು ಪೂಜೆ ಮಾಡಿ, ಆಂಜನೇಯನ ದರ್ಶನ ಪಡೆದರು. ನಂತರ ಘಟನೆ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎರಡು ಕಡೆಯವರಿಂದ ಮಾಹಿತಿ ಪಡೆಯಲಾಗಿದ್ದು, ಘಟನೆಗೆ ಅಸಲಿ ಕಾರಣ ಏನು? ಯಾರ ತಪ್ಪಿದೆ ಅನ್ನೋದು ತನಿಖೆ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.

ವರದಿ- ಭೀಮೇಶ್ ಪೂಜಾರ್,ಟಿವಿ9 ರಾಯಚೂರು

Published On - 11:00 pm, Mon, 14 November 22