ಅವ್ರು ತಾನಾಯ್ತು ತಮ್ಮ ಕೆಲಸ ಆಯ್ತು ಅಂತ ಜೀವನ ನಡೆಸ್ತಿದ್ದೋರು.. ಆದ್ರೆ ಮಗಳ ಪ್ರೇಮ್ ಕಹಾನಿಗೆ ಅಲ್ಲೊಂದು ನಡೆಯಬಾರದ ಘಟನೆ ನಡೆದಿತ್ತು.. ಆ ಮರ್ಯಾದೆಗೆ ಹೆದರಿ ಆ ಕುಟುಂಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು ತಂದೆ ತಾಯಿ ಖಲ್ಲಾಸ್ ಆಗಿದ್ರೆ, ಮಗಳು ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ..
ಹೌದು.. ಅದು ರಾಯಚೂರು ನಗರದಲ್ಲಿ ವಾಸವಿದ್ದ ಬಡ ಕುಟುಂಬ..ಅಲ್ಲಿ ಮನೆ ಯಜಮಾನ 44 ವರ್ಷದ ಸಮೀರ್ ಅಹ್ಮದ್, ಪತ್ನಿ ಜುಲ್ಲಾಕಾ ಬೇಗಂ.. ಈ ದಂಪತಿಗೆ ಮೆಹಾಮುನ್ ಅನ್ನೋ ಮುದ್ದು ಮಗಳಿದ್ಲು.. ಸಮೀರ್ ಆಟೋ ಓಡಿಸುತ್ತಿದ್ರೆ, ಪತಿಗೆ ಆರ್ಥಿಕ ಸಹಾಯ ತುಂಬಲು ಪತ್ನಿ ಜುಲ್ಲಾಕಾ ಬೇಗಂ ಮೊಹಮ್ಮದ್ ಹುಸೇನ್ ಅನ್ನೋ ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ರು.. ಕಷ್ಟ ಪಟ್ಟು ಹಗಲಿರುಳು ದುಡಿದು ಮಗಳು ಮೆಹಾಮುನ್ ಳನ್ನ ಇಂಜಿನಿಯರಿಂಗ್ ಓದಿಸಿದ್ರು..
ಮೆಹಾಮುನ್ ಕೂಡ ಹೆತ್ತವರ ಆಸೆಯಂತೆ ಚೆನ್ನಾಗಿ ಓದಿದ್ಲು.. ಇನ್ನೇನು ಆಕೆಯೂ ಒಳ್ಳೆ ಕೆಲಸಕ್ಕೆ ಸೇರಿ ಹೆತ್ತವರ ಪೋಷಣೆ ಮಾಡೋ ಕಾಲ ಕೂಡಿಬಂದಿತ್ತು.. ಮೆಹಮುನ್ ಜಾಣೆ ಅಂತ ಮನೆ ಮಾಲೀಕರು, ತಮ್ಮ ಮಕ್ಕಳಿಗೆ ಟ್ಯೂಷನ್ ಹೇಳೊ ಕೆಲಸ ಕೊಟ್ಟಿದ್ರು.. ಅದರಂತೆ ಮೆಹಮುನ್ ಓನರ್ ಮಕ್ಕಳಿಗೆ ಮನೆಪಾಠ ಹೇಳಿ ಕೊಡ್ತಿದ್ಲು.. ಈ ಮಧ್ಯೆ ಮೊನ್ನೆ ಶನಿವಾರ ಏಕಾಏಕಿ ಮೆಹಮುನ್, ತಂದೆ ಸಮೀರ್ ಅಹ್ಮದ್, ತಾಯಿ ಜುಲ್ಲಾಕಾ ಬೇಗಂ ಆತ್ಮಹತ್ಯೆಗೆ ಮುಂದಾಗಿದ್ರು.. ಅದರಂತೆ ರಾಯಚೂರು ತಾಲ್ಲೂಕಿನ ಯರಮರಸ್ ಬಳಿ ರೈಲಿಗೆ ತಲೆ ಕೊಟ್ಟು ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ..
ಹೌದು..ಹೀಗೆ ಆತ್ಮಹತ್ಯೆಗೆ ಯತ್ನಿಸಿದ ಮೂವರ ಪೈಕಿ ತಂದೆ ಸಮೀರ್ ಅಹ್ಮದ್ ಹಾಗೂ ತಾಯಿ ಜುಲ್ಲಾಕಾ ಬೇಗಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಇತ್ತ ಮಗಳು ಮೆಹಮುನ್ ಗಂಭೀರವಾಗಿ ಗಾಯಗೊಂಡಿದ್ದು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿದೆ. ಅಷ್ಟಕ್ಕೂ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸೋದರ ಹಿಂದೆ ಕರುಳು ಹಿಂಡುವ ಕಥೆ ಇದೆ..
ತಾಯಿ ಜುಲ್ಲಾಕಾ ಬೇಗಂ ಮನೆಗೆಲಸ ಮಾಡ್ತಿದ್ದ ಮನೆಯಲ್ಲಿ ಡೈಮಂಡ್ ಹಾಗೂ ಚಿನ್ನದ ಆಭರಣ ಕಳ್ಳತನ ಆಗಿತ್ತು..ಈ ಬಗ್ಗೆ ಮನೆ ಮಾಲೀಕರು ಪಶ್ಚಿಮ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು.. ತನಿಖೆ ವೇಳೆ ತಾಯಿ ಜುಲ್ಲಾಕಾ ಬೇಗಂ ಮಗಳು ಮೆಹಮುನ್ ಕಳ್ಳತನ ಮಾಡಿರೊ ಸತ್ಯ ಬೆಳಕಿಗೆ ಬಂದಿತ್ತು..
ಆಗ ಪೋಷಕರು ಕಳ್ಳತನ ಮಾಡೋ ಸ್ಥಿತಿ ನಮಗೆ ಬಂದಿಲ್ಲ.. ಯಾಕೆ ಕಳ್ಳತನ ಮಾಡಿದಿಯಾ ಅಂತ ಕೇಳಿದ್ರು.. ಈ ವೇಳೆ ಮೆಹಮುನ್ ತನ್ನ ಲವ್ ಸ್ಟೋರಿ ವಿಚಾರ ಬಿಚ್ಚಿಟ್ಟಿದ್ಲು.. ಸರ್ಫರಾಜ್ ಅನ್ನೋನನ್ನ ಪ್ರೀತಿಸುತ್ತಿದ್ದು, ಆತ ಹೇಳಿದ ಹಾಗೆ ಕಳ್ಳತನ ಮಾಡಿ ಕಳ್ಳತನ ಮಾಡಿರೊ ಆಭರಣ ಅವನಿಗೆ ಕೊಟ್ಟಿದ್ದಾಗಿ ತಿಳಿಸಿದ್ಲು.
ನಂತರ ಆಕೆಯ ಪ್ರಿಯತಮ ಸರ್ಫರಾಜ್ ಕಡೆಯಿಂದ ಆಭರಣ ಪಡೆದು ಮಾಲೀಕರಿಗೆ ಹಸ್ತಾಂತರಿಸಿ ಕೈಕಾಲು ಬಿದ್ದು ಇದನ್ನ ಇಲ್ಲಿಗೆ ಬಿಟ್ಟು ಬಿಡಿ ಅಂತ ಹೇಳೋಕೆ ಪೋಷಕರು ಯೋಚಿಸಿದ್ರು.. ಆದ್ರೆ ಸರ್ಫರಾಜ್ ಎಸ್ಕೇಪ್ ಆಗಿದ್ದ.. ಆತನ ಸಂಪರ್ಕ ಸಿಗದೇ ಹೋಗಿತ್ತು.. ಇದರಿಂದ ಕಂಗಾಲಾಗಿದ್ದ ಇಡೀ ಕುಟುಂಬವು ಮಾಲೀಕರಿಗೆ ಅದ್ಹೇಗೆ ಆಭರಣ ಹಿಂದಿರುಗಿಸೋದು ಅಂತ ತಲೆಕೆಡಿಸಿಕೊಂಡಿದ್ರು.. ಮಗಳ ಬಾಯ್ ಫ್ರೆಂಡ್ ಕೊನೆಗೂ ಸಿಗಲೇ ಇಲ್ಲ..ಮನೆ ಮಾಲೀಕರು ನೀಡಿದ ದೂರಿನ ಅನ್ವಯ ಮಗಳು ಅರೆಸ್ಟ್ ಆಗ್ತಾಳೆ.. ಮರ್ಯಾದೆ ಹೋಗುತ್ತೆ ಅಂತ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ ಅಂತ ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂದು ಮೃತ ತಂದೆ ತಾಯಿಯ ಮೃತದೇಹಗಳನ್ನ ಪೋಸ್ಟ್ ಮಾರ್ಟಮ್ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.. ಸದ್ಯ ಘಟನೆ ಸಂಬಂಧ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೀತಿದೆ..
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 am, Mon, 11 March 24