Dragon fruit: ಯೂಟ್ಯೂಬ್ ವಿಡಿಯೋ ನೋಡಿ ಕೃಷಿ ಮಾಡೋಕ್ಕೆ ಹೋದ ರೈತರು ಕೈ ಸುಟ್ಟುಕೊಂಡರು!
ಭರಣಿ ಕಂಪೆನಿ ಅವ್ರು ಈಗ ಬರ್ತಿವಿ, ನಾಳೆ ಬರ್ತಿವಿ ಅಂತ ಈಗ ಒಂಬತ್ತು ತಿಂಗಳು ಕಾಯಿಸಿ ರೈತರನ್ನ ಹೈರಾಣಾಗುವಂತೆ ಮಾಡಿದ್ದಾರೆ.. ಸರಿ ನಿಮ್ಮೂರಿಗೆ ಬಂದು ನಿಮ್ಮ ಸಮಸ್ಯೆ ಕೇಳ್ತಿವಿ ಹಣ ಹಾಕಿ ಅಂತ ಮತ್ತೆ ಇಬ್ಬರೂ ಬಡ ರೈತರಿಂದ ಹಣ ಕಟ್ಟಿಸಿಕೊಂಡು ಈಗ ಕ್ಯಾರೆ ಎನ್ನುತ್ತಿಲ್ಲ
ಅವ್ರೆಲ್ಲಾ ಬಿಸಿಲುನಾಡಿನ ಬಡ ರೈತರು.. ಆದ್ರೆ ಡಿಜಿಟಲ್ ಯುಗ ಅಂತ ಆ ರೈತರು ಯೂಟ್ಯೂಬ್ (youtube) ನೋಡಿಕೊಂಡು ಡ್ರಾಗನ್ ಫ್ರೂಟ್ ಬೆಳೆದು, ಒಳ್ಳೆಯ ಆದಾಯ ಪಡೆಯೋ ಕನಸು ಕಂಡಿದ್ರು.. ಆದ್ರೆ ಅಲ್ಲಿ ಆಗಿದ್ದೇ ಬೇರೆ.. ಲಕ್ಷ ಲಕ್ಷ ಹಣ ಕೊಟ್ಟ ರೈತರು ಈಗ ಕೈ ಸುಟ್ಟುಕೊಂಡಿದ್ದಾರೆ (farmers cheated). ಜಮೀನಿನಲ್ಲಿ ಬೇಸಾಯದ ಕೆಲಸ ಮಾಡ್ತಿರೊ ರೈತರು ಕಾಗದ ಪತ್ರಗಳನ್ನ ಓದುತ್ತಾ ನಿಂತಿರೊ ರೈತರು, ಹೀಗೆ ಲಕ್ಷ-ಲಕ್ಷ ಹಣ ಕಳೆದುಕೊಂಡು ಆಂತಕದಲ್ಲಿರೊ ಈ ರೈತರೆಲ್ಲಾ ಗಡಿ ಜಿಲ್ಲೆ ರಾಯಚೂರಿನವ್ರು.. ಇವ್ರನ್ನ ಸಂಕಷ್ಟಕ್ಕೀಡು ಮಾಡಿದ್ದು ಡ್ರಾಗನ್ ಫ್ರೂಟ್ (Dragon fruit). ರಾಯಚೂರು ತಾಲ್ಲೂಕಿನ ಸಗಮಕುಂಟಾ ಗ್ರಾಮದ ರೈತರು ಬಹಳ ಬಡವರು.. ತೆಲಂಗಾಣ ಗಡಿಯ ರಾಜ್ಯದ ಕೊನೆ ಭಾಗದ ಈ ರೈತರು ಓದಿನಲ್ಲೂ ಅನಕ್ಷರಸ್ಥರು.. ಆದ್ರೆ ಎಲ್ಲರಂತೆ ತಾವೂ ಕೂಡ ಒಳ್ಳೆ ಬೆಳೆಗಳನ್ನ ಬೆಳೆದು ಹಣ ಸಂಪಾದಿಸಬೇಕು ಅನ್ನೋ ಆಸೆ ಈ ರೈತರಲ್ಲಿತ್ತು. ಹೀಗಾಗಿ ತಮ್ಮ ಒಂದು-ಎರಡು ಎಕರೆಗಳ ಹೊಲದಲ್ಲೇ ಏನೋ ಹೊಸದನ್ನ ಬೆಳೆಯಬೇಕು ಅಂದುಕೊಂಡಿದ್ರು.
ಅದರಂತೆ ಈ ರೈತರು ಡಿಜಿಟಲ್ ಯುಗ ಅಂತ ಯೂಟ್ಯೂಬ್ನಲ್ಲಿ ಡ್ರಾಗನ್ ಫ್ರೂಟ್ ಬೆಳೆಗೆ ಸಂಬಂಧಿಸಿದ ವಿಡಿಯೋ ನೋಡಿದ್ರು.. ಅದರಲ್ಲಿ ಡ್ರಾಗನ್ ಫ್ರೂಟ್ ಬೆಳೆಯೋದ್ರಿಂದ ಲಕ್ಷ ಲಕ್ಷ ಆದಾಯ ಬರತ್ತೆ.. ಅದು ಕಡಿಮೆ ಖರ್ಚಿನಲ್ಲಿ ಅಂತ ಸಖತ್ ವೆರೈಟಿಯಾಗಿ ಹೇಳಿದ್ದರು.. ಬಣ್ಣ ಬಣ್ಣದ ಮಾತುಗಳನ್ನ ನಂಬಿದ್ದ ಬಡೇಸಾಬ್ ಮತ್ತು ಸುರೇಶ್ ಅನ್ನೋ ರೈತರು ಬಳ್ಳಾರಿ, ವಿಜಯಪುರಗಳಲ್ಲಿ ವಿಚಾರಿಸಿದ್ರು.. ಅಲ್ಲಿ ಒಂದು ಡ್ರಾಗನ್ ಫ್ರೂಟ್ ಸಸಿಗೆ 40 ರೂ ಅಂತ ಹೇಳಿದ್ರಂತೆ.. ಆದ್ರೆ ಆ ಯೂಟ್ಯೂಬ್ ಚಾನೆಲ್ನಲ್ಲಿ ದಾವಣಗೆರೆ ಮೂಲದ ಭರಣಿ ಅನ್ನೋ ಕಂಪೆನಿಯನ್ನ ನಂಬಿ ಈಗ ರಾಯಚೂರಿನ ರೈತರಿ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಯೂಟ್ಯೂಬ್ನಲ್ಲಿ ತೋರಿಸಿದಂತೆ ರೈತರಾದ ಬಡೇಸಾಬ್ ಹಾಗೂ ಸುರೇಶ್ ದಾವಣಗೆರೆಗೆ ಹೋಗಿದ್ರು.. ಅಲ್ಲಿ ಭರಣಿ ಅನ್ನೋ ಕಂಪೆನಿಯವ್ರನ್ನ ಭೇಟಿಯಾಗಿದ್ರು.. ಕಂಪೆನಿಯವ್ರು ಎಕರೆಗೆ 3 ಲಕ್ಷ ಕಟ್ಟಿ.. ಸಸಿ ನಮ್ದು, ಬಂಬುಗಳು ನಮ್ಮವೇ.. ಅಷ್ಟೇ ಅಲ್ಲದೇ ಅವುಗಳನ್ನ ಇನ್ಸ್ಟಾಲ್ ಕೂಡ ನಾವೇ ಮಾಡಿ ಕೊಡ್ತೀವಿ ಅಂತ ಹೇಳಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡಿದ್ರು.. ಅಷ್ಟೇ ಅಲ್ಲ ನೀವು ಕೇವಲ ಡ್ರಾಗನ್ ಫ್ರುಟ್ ಬೆಳಿರಿ, ಎಕ್ಸ್ ಪೋರ್ಟ್ ಎಲ್ಲಾ ನಾವೇ ನೋಡಿಕೊಳ್ತಿವಿ ಅಂದಿದ್ರಂತೆ..
ಹೀಗಾಗಿ ಸುರೇಶ್ ತನ್ನ ಎರಡು ಎಕರೆಯಲ್ಲಿ ಡ್ರಾಗನ್ ಫ್ರುಟ್ ಬೆಳೆಯಲು 6 ಲಕ್ಷ ಕಟ್ಟಿದರೆ, ಬಡೇಸಾಬ್ ಒಂದು ಎಕರೆಗೆ 2.5 ಲಕ್ಷ ಕಟ್ಟಿದ್ರು.. ನಂತರ ಒಪ್ಪಂದಂತೆ ಕಂಪೆನಿ ಅವ್ರು ಮೊದಮೊದಲು ಸಸಿಗಳನ್ನು ಕೊಟ್ಟಿದ್ರು.. ನಂತರ ಕಂಬಗಳನ್ನ ಕೊಡ್ಲಿಲ್ಲವಂತೆ.. ಆಗ ರೈತರೇ ಹೆಚ್ಚುವರಿ ಖರ್ಚು ಮಾಡಿ ಕಂಬಗಳನ್ನ ಹಾಕಿದ್ದಾರೆ.. ನಂತರ ಸಸಿಗಳ ಕೊರತೆ ಉಂಟಾಗಿದೆ.. ಒಂದು ಸಾಲಿಗೆ 100 ಸಸಿಗಳ ಕೊರತೆ ಇದೆ..
ಅವುಗಳನ್ನ ಕೊಡಿ ಅಂತ ಭರಣಿ ಕಂಪೆನಿ ಅವ್ರನ್ನ ಕೇಳಿದ್ರಂತೆ.. ಆಗ ಅವ್ರು ಈಗ ಬರ್ತಿವಿ, ನಾಳೆ ಬರ್ತಿವಿ ಅಂತ ಈಗ ಒಂಬತ್ತು ತಿಂಗಳು ಕಾಯಿಸಿ ರೈತರನ್ನ ಹೈರಾಣಾಗುವಂತೆ ಮಾಡಿದ್ದಾರೆ.. ಸರಿ ನಿಮ್ಮೂರಿಗೆ ಬಂದು ನಿಮ್ಮ ಸಮಸ್ಯೆ ಕೇಳ್ತಿವಿ ಹಣ ಹಾಕಿ ಅಂತ ಮತ್ತೆ ಇಬ್ಬರೂ ಬಡ ರೈತರಿಂದ ಹಣ ಕಟ್ಟಿಸಿಕೊಂಡು ಈಗ ಕ್ಯಾರೆ ಎನ್ನುತ್ತಿಲ್ಲ.. ಪೊಲೀಸರಿಗಾದ್ರೂ ದೂರು ಕೊಡಿ ಯಾರಿಗಾದ್ರೂ ಕೊಡಿ ಅಂತ ದುರ್ವರ್ತನೆ ತೋರುತ್ತಿದ್ದಾರಂತೆ ಕಂಪೆನಿ ಅವ್ರು..
ಹೀಗೆ ಲಕ್ಷ ಲಕ್ಷ ರೂ ವಂಚನೆಗೊಳಗಾದ ಬಳಿಕ ತುಮಕೂರು ಭಾಗದ ರೈತರು ಈ ರಾಯಚೂರಿನ ಸಂತ್ರಸ್ತ ರೈತರಿಗೆ ಕರೆ ಮಾಡಿದ್ರಂತೆ.. ಭರಣಿ ಕಂಪೆನಿ ಅವ್ರು ತುಮಕೂರು ಭಾಗದಲ್ಲಿ ರೈತರಿಗೆ ಮೋಸ ಮಾಡಿದ್ದಾರೆ.. ಕೇವಲ ತುಮಕೂರು ಅಲ್ಲದೇ ಬೇರೇ ಬೇರೆ ಭಾಗದ ಅನೇಕ ರೈತರಿಗೆ ಇದೇ ರೀತಿ ಮೋಸ ಮಾಡಿರೊ ಬಗ್ಗೆ ತಿಳಿಸಿದ್ದಾರಂತೆ.. ಹೀಗೆ ಯೂಟ್ಯೂಬ್ ವಿಡಿಯೋ ಮೂಲಕ ಯಾಮಾರಿರೊ ಬಡ ರೈತರೀಗ ಖಾಸಗಿ ಕಂಪೆನಿಯ ಬಣ್ಣದ ಮಾತುಗಳನ್ನ ನಂಬಿ ಸಾಲದ ಹೊರೆಯನ್ನ ಮೈಮೇಲೆ ಎಳೆದುಕೊಂಡಿದ್ದಾರೆ.. ಕೂಡಲೇ ಕೃಷಿ ಇಲಾಖೆ ಈ ಬಗ್ಗೆ ಕ್ರಮವಹಿಸಿ ರೈತರಿಗೆ ಪರಿಹಾರ ದೊರಕಿಸಿ ಕೊಡಬೇಕಿದೆ.
ವರದಿ: ಭೀಮೇಶ್ ಪೂಜಾರ್, ಟಿವಿ 9 ರಾಯಚೂರು
Published On - 1:49 pm, Tue, 21 February 23