ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ: ಕಾನೂನು ಹೋರಾಟಕ್ಕಿಳಿದ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ: ಕಾನೂನು ಹೋರಾಟಕ್ಕಿಳಿದ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ
ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ

7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋದಾಗಿ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ ಹೊಸಮನಿ ಆರೋಪ ಮಾಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 22, 2022 | 12:26 PM

ರಾಯಚೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, 20 ವರ್ಷಗಳ ಹಳೆಯ ಕವಿತೆ ಕದ್ದು ಹೊಸ ಪಠ್ಯ ಪುಸ್ತಕದಲ್ಲಿ ಪ್ರಕಟಣೆ ಆರೋಪಿಸಿ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಈ ಹಿನ್ನೆಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಎಡವಟ್ಟಾಗಿದೆ. ಸದ್ಯ 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋ ಆರೋಪ ಮಾಡಿದ್ದು, ಆಮೆಯ ಕವಿತೆಯ ಬಗ್ಗೆ ಅದರ ಮೂಲ‌ ರಚನೆಕಾರ ಗಿರಿರಾಜ್ ಹೊಸಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ 3ನೇ ತರಗತಿಯಲ್ಲಿ ಆಮೆ ಹೆಸರಿನ ಕವಿತೆ ಪ್ರಕಟವಾಗಿದ್ದು, ಈಗ ಅದನ್ನೇ ಜಾಣ ಆಮೆ ಎಂದು ತಿರುಚಿ 7ನೇ ತರಗತಿಯಲ್ಲಿ ಪ್ರಕಟ ಮಾಡಲಾಗಿದೆ. 1973ರಲ್ಲೇ ಪ್ರಕಟಗೊಂಡಿದ್ದ ಕವಿತೆಯನ್ನ ನಕಲು ಮಾಡಿದ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ನವರು ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ: ಪಠ್ಯ ಪರಿಷ್ಕರಣೆ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕಿಡಿ

ರಾಯಚೂರು ಮೂಲದ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ ಹೊಸಮನಿ ಆಮೆ ಕವಿತೆ ಬರೆದಿದ್ದರು. 20 ವರ್ಷಗಳ ಹಿಂದೆ ಇದೇ ಕವಿತೆ 3ನೇ ತರಗತಿ ಪಠ್ಯದಲ್ಲಿ ಪ್ರಕಟಣೆಯಾಗಿದೆ. ಆದರೀಗ ಅದೇ ಕವಿತೆಯನ್ನ ಭಾಸ್ಕರ್ ನೆಲ್ಯಾಡಿ ಅನ್ನೋರು ತಿರುಚಿ ಬರೆಯಲಾಗಿದೆ. ಯಾವುದೇ ಪರಿಷ್ಕರಣೆ ಮಾಡದೇ ಪಠ್ಯದಲ್ಲಿ ಕವಿತೆ ಅಳವಡಿಸಿದ್ದಕ್ಕೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ದ ಕಸಾಪ ಹಾಗೂ ಕವಿತೆಯ ಮೂಲ ಕತೃ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆಗಿರುವ ಲೋಪದೋಷ ಸರಿಪಡಿಸಬೇಕು. ಈಗಿನ 7 ನೇ ತರಗತಿ ಪಠ್ಯದಿಂದ ತಿರುಚಲಾದ ಕವಿತೆಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಲಾಗಿದೆ.

ಪಠ್ಯ ಪರಿಷ್ಕರಣೆ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕಿಡಿ

ರಾಯಚೂರು: ಆರ್​ಎಸ್​ಎಸ್​ನವರು (RSS) ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ. ಅಂಥವರ ವಿಚಾರವನ್ನ ಪಠ್ಯದಲ್ಲಿ (Text book) ಸೇರಿಸಿ, ದೇಶಪ್ರೇಮ ಹೇಳುತ್ತಿರುವುದು ಅಪಹಾಸ್ಯ. ಈಗಿನ ಪಠ್ಯಕ್ರಮ ಅಪಾಯಕಾರಿಯಾಗಿದೆ. ಇದಕ್ಕೆಲ್ಲಾ ಆರ್​ಎಸ್​ಎಸ್​ ಕಾರಣ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಟಿವಿ 9ಗೆ ಹೇಳಿಕೆ ನೀಡಿದ ಕುಂ ವೀರಭದ್ರಪ್ಪ, ಪಠ್ಯ ಪುಸ್ತಕ ಪರಿಷ್ಕರಣೆ ದುರಂತ ನಾಟಕ. ಯಾವ ರಾಜ್ಯ ಮತ್ತು ದೇಶದಲ್ಲಿ ನಡೆದಿಲ್ಲ. ಮಕ್ಕಳನ್ನ ರಾಷ್ಟ್ರ ನಿರ್ಮಾಣಕ್ಕೆ ರೂಪಿಸಲು ಪಠ್ಯಕ್ರಮ ಜಾರಿಗೊಳಿಸಬೇಕು. ಬಿಸಿ ನಾಗೇಶ್ ಅನ್ನೋ ಮಹಾನುಭಾವ ಶಿಕ್ಷಣ ಸಚಿವ, ಟುಟೋರಿಯಲ್ ಶಿಕ್ಷಕ ರೋಹಿತ್ ಚಕ್ರತೀರ್ಥ ಅನ್ನೋನನ್ನ ಅಯ್ಕೆ ಮಾಡಿದ್ದಾರೆ. ಬ್ರಾಹ್ಮಣ್ಯದ ಬಗ್ಗೆ ಅಪಾರ ಕಾಳಜಿಯಿರುವ ಉಡಾಫೆ ಹಿನ್ನೆಲೆ ವ್ಯಕ್ತಿ ಆತ. ಕುವೆಂಪು ಅವರ ನಾಡಗೀತೆ ತಿರುಚಿ, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಈತ ಸಮೀತಿ ಅಧ್ಯಕ್ಷ ಅಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ. ಇಲ್ಲಿನ ಬಹುತ್ವವನ್ನ ಪ್ರೀತಿಸಬೇಕು. ಗುಡಿ ಕೈಗಾರಿಕೆಗಳಿವೆ. ಅವರನ್ನೆಲ್ಲಾ ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳಿದರು.

ಪೇಚಿಗೆ ಸಿಲುಕಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ

ಪಠ್ಯ ಪರಿಷ್ಕರಣೆ ಹಿನ್ನೆಲೆ ಡಿ.ಕೆ. ಶಿವಕುಮಾರ ಪುಸ್ತಕ ಹರಿದು ಹಾಕಿದ್ದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದ್ದು, ಬಹಳ ಆವೇಷದಿಂದ ಹರಿದು ಹಾಕಿದ್ದಾರೆ. ನಮ್ಮ ಡಿ.ಕೆ. ಶಿವಕುಮಾರ ಹಾಗೇ ಮಾಡೋ ವ್ಯಕ್ತಿಯಲ್ಲ. ನಾನು ಕಾಂಗ್ರೆಸಿಸಮ್ ಅಲ್ಲ, ಬಿಜೆಪಿಗೂ ಸಂಬಂಧವಿಲ್ಲ. ನಾನು ಮನುಷ್ಯನ ಪರವಾಗಿರೋನು. ಪುಸ್ತಕಗಳನ್ನು ಹರಿದು ಎಸೆಯೋದು, ಸುಡೋದು ಇಷ್ಟಪಡಲ್ಲ ಎಂದರು. ಇದಕ್ಕೂ ಮುನ್ನ ಪಠ್ಯ ಪರಿಕ್ಷರಣೆಗೆ ಆರ್​ಎಸ್​ಎಸ್​ ಕಾರಣ ಅಂತ ಕಿಡಿ ಕಾರಿದ್ದ ಕುಂ ವೀರಭದ್ರಪ್ಪ, ಈ ಮಧ್ಯೆ ನಮ್ಮ ಡಿ.ಕೆ. ಶಿವಕುಮಾರ ಅಂತ ಹೇಳಿ ಪೇಚಿಗೆ ಸಿಲುಕಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada