ಆರ್ಎಸ್ಎಸ್ನವರು ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ: ಪಠ್ಯ ಪರಿಷ್ಕರಣೆ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕಿಡಿ
ಪಠ್ಯ ಪರಿಷ್ಕರಣೆ ಹಿನ್ನೆಲೆ ಡಿ.ಕೆ. ಶಿವಕುಮಾರ ಪುಸ್ತಕ ಹರಿದು ಹಾಕಿದ್ದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದ್ದು, ಬಹಳ ಆವೇಷದಿಂದ ಹರಿದು ಹಾಕಿದ್ದಾರೆ ಎಂದರು.
ರಾಯಚೂರು: ಆರ್ಎಸ್ಎಸ್ನವರು (RSS) ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ. ಅಂಥವರ ವಿಚಾರವನ್ನ ಪಠ್ಯದಲ್ಲಿ (Text book) ಸೇರಿಸಿ, ದೇಶಪ್ರೇಮ ಹೇಳುತ್ತಿರುವುದು ಅಪಹಾಸ್ಯ. ಈಗಿನ ಪಠ್ಯಕ್ರಮ ಅಪಾಯಕಾರಿಯಾಗಿದೆ. ಇದಕ್ಕೆಲ್ಲಾ ಆರ್ಎಸ್ಎಸ್ ಕಾರಣ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಟಿವಿ 9ಗೆ ಹೇಳಿಕೆ ನೀಡಿದ ಕುಂ ವೀರಭದ್ರಪ್ಪ, ಪಠ್ಯ ಪುಸ್ತಕ ಪರಿಷ್ಕರಣೆ ದುರಂತ ನಾಟಕ. ಯಾವ ರಾಜ್ಯ ಮತ್ತು ದೇಶದಲ್ಲಿ ನಡೆದಿಲ್ಲ. ಮಕ್ಕಳನ್ನ ರಾಷ್ಟ್ರ ನಿರ್ಮಾಣಕ್ಕೆ ರೂಪಿಸಲು ಪಠ್ಯಕ್ರಮ ಜಾರಿಗೊಳಿಸಬೇಕು. ಬಿಸಿ ನಾಗೇಶ್ ಅನ್ನೋ ಮಹಾನುಭಾವ ಶಿಕ್ಷಣ ಸಚಿವ, ಟುಟೋರಿಯಲ್ ಶಿಕ್ಷಕ ರೋಹಿತ್ ಚಕ್ರತೀರ್ಥ ಅನ್ನೋನನ್ನ ಅಯ್ಕೆ ಮಾಡಿದ್ದಾರೆ. ಬ್ರಾಹ್ಮಣ್ಯದ ಬಗ್ಗೆ ಅಪಾರ ಕಾಳಜಿಯಿರುವ ಉಡಾಫೆ ಹಿನ್ನೆಲೆ ವ್ಯಕ್ತಿ ಆತ. ಕುವೆಂಪು ಅವರ ನಾಡಗೀತೆ ತಿರುಚಿ, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಈತ ಸಮೀತಿ ಅಧ್ಯಕ್ಷ ಅಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ. ಇಲ್ಲಿನ ಬಹುತ್ವವನ್ನ ಪ್ರೀತಿಸಬೇಕು. ಗುಡಿ ಕೈಗಾರಿಕೆಗಳಿವೆ. ಅವರನ್ನೆಲ್ಲಾ ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳಿದರು.
ಪಠ್ಯ ಪರಿಷ್ಕರಣೆ ಹಿನ್ನೆಲೆ ಡಿ.ಕೆ. ಶಿವಕುಮಾರ ಪುಸ್ತಕ ಹರಿದು ಹಾಕಿದ್ದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದ್ದು, ಬಹಳ ಆವೇಷದಿಂದ ಹರಿದು ಹಾಕಿದ್ದಾರೆ. ನಮ್ಮ ಡಿ.ಕೆ. ಶಿವಕುಮಾರ ಹಾಗೇ ಮಾಡೋ ವ್ಯಕ್ತಿಯಲ್ಲ. ನಾನು ಕಾಂಗ್ರೆಸಿಸಮ್ ಅಲ್ಲ, ಬಿಜೆಪಿಗೂ ಸಂಬಂಧವಿಲ್ಲ. ನಾನು ಮನುಷ್ಯನ ಪರವಾಗಿರೋನು. ಪುಸ್ತಕಗಳನ್ನು ಹರಿದು ಎಸೆಯೋದು, ಸುಡೋದು ಇಷ್ಟಪಡಲ್ಲ ಎಂದರು. ಇದಕ್ಕೂ ಮುನ್ನ ಪಠ್ಯ ಪರಿಕ್ಷರಣೆಗೆ ಆರ್ಎಸ್ಎಸ್ ಕಾರಣ ಅಂತ ಕಿಡಿ ಕಾರಿದ್ದ ಕುಂ ವೀರಭದ್ರಪ್ಪ, ಈ ಮಧ್ಯೆ ನಮ್ಮ ಡಿ.ಕೆ. ಶಿವಕುಮಾರ ಅಂತ ಹೇಳಿ ಪೇಚಿಗೆ ಸಿಲುಕಿದರು.
ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹ
ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿ ಜೂನ್ 18ರಂದು ನಗರದಲ್ಲಿ ಬೃಹತ್ ಪ್ರತಿಭಟನೆ (Protest) ನಡೆಯಿತು. ಕೆಎಸ್ಆರ್ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೂ (Freedom Park) ಪ್ರತಿಭಟನಾ ಮೆರವಣಿಗೆ ಸಡೆಸಲು ಸಜ್ಜಾಗಿದ್ದು, ಈ ವೇಳೆ ರ್ಯಾಲಿಗೆ ಅವಕಾಶ ನೀಡದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಸಿಎಸ್. ದ್ವಾರಕನಾಥ್, ಎಪಿ ರಂಗನಾಥ್, ಪ್ರವೀಣ್ ಶೆಟ್ಟಿ, ಸಾ.ರಾ ಗೋವಿಂದ್, ಮುಖ್ಯಮಂತ್ರಿ ಚಂದ್ರು ಅಕೈ ಪದ್ಮಾಶಾಲಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಮಾವೇಶದಲ್ಲಿ ಕುವೆಂಪು ಹೋರಾಟ ಸಮಿತಿ, ಸ್ವಾಮೀಜಿಗಳು, ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಾಹಿತಿ, ಚಿಂತಕರು, ಸಾರಿಗೆ ಒಕ್ಕೂಟ, ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳು ಭಾಗಿಯಾಗಿದ್ದರು. ಸದ್ಯ ಪರಿಷ್ಕೃತ ಆಗಿರುವ ಪಠ್ಯಪುಸ್ತಕವನ್ನ ರದ್ದು ಮಾಡಬೇಕು. ರೋಹಿತ್ ಚಕ್ರತೀರ್ಥರನ್ನ ಬಂಧಿಸಬೇಕೆಂದು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಆಗ್ರಹಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.