ರಾಯಚೂರು, ಅ.11: ರೊಟ್ಟಿ, ಬೆಂಡೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಏಳು ಜನ ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ(Maski) ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ, ಮಳಾಪ್ಪ, ಬಸಲಿಂಗಪ್ಪ, ಗೌರಮ್ಮ, ಗುರುಬಸಮ್ಮ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಒಟ್ಟು 7 ಜನರಲ್ಲಿ ತೀವ್ರ ವಾಂತಿ-ಭೇದಿ ಕಾಣಿಸಿಕೊಂಡಿದೆ. ಬೆಳಗ್ಗೆ ಎಲ್ಲರೂ ಹೊಲದಲ್ಲೇ ಕುಳಿತು ಒಟ್ಟಾಗಿ ಊಟ ಮಾಡಿದ್ದರು. ಊಟದ ಬಳಿಕ ಏಕಾಏಕಿ ಅಸ್ವಸ್ಥರಾಗಿದ್ದು, ಕೂಡಲೇ ಏಳು ಜನರಿಗೆ ಲಿಂಗಸಗೂರು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಸ್ವಸ್ಥರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆಯಷ್ಟೇ ಲಿಂಗಸುಗೂರು(Lingasugur) ತಾಲೂಕಿನ ಪರಂಪುರ ತಾಂಡಾದಲ್ಲಿ ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ನಡೆದಿತ್ತು. ಸುಮಾರು 250 ಕುಟುಂಬಗಳು ವಾಸಿಸುವ ತಾಂಡಾ ನಿವಾಸಿಗಳು ಸೇರಿಕೊಂಡು ದೇವರ ಕಾರ್ಯಕ್ಕಾಗಿ ಮಾಂಸದ ಅಡುಗೆ ಮಾಡಿಸಿದ್ದರು. ಮಧ್ಯಾಹ್ನ ಊಟ ಸೇವಿಸಿದ ಬಳಿಕ ಮಕ್ಕಳು, ಹಿರಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಕೂಡಲೇ ಅಸ್ವಸ್ಥರಾದವರನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇಂದು ಒಂದೇ ಕುಟುಂಬದ ಏಳು ಜನ ಅಸ್ವಸ್ಥರಾಗಿದ್ದಾರೆ.
ಇದನ್ನೂ ಓದಿ:ರಾಯಚೂರು: ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ
ಇನ್ನು ಇತ್ತೀಚೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿಯೂ ಕೂಡ ಕಲುಷಿತ ನೀರು ಕುಡಿದು ಎರಡು ವಾರ್ಡ್ಗಳ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಲುಷಿತ ನೀರು ಕುಡಿದ ಪರಿಣಾಮದಿಂದ ಕಾಯಿಲೆಗಳು ಶುರುವಾಗಿದೆ ಎಂದು ದೃಢಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Fri, 11 October 24