ರಾಯಚೂರು ಲೋಕ ಅದಾಲತ್​; ನ್ಯಾಯಾದೀಶರ ಎದುರು ಮತ್ತೆ ಒಂದಾದ 8 ಜೋಡಿ

| Updated By: ವಿವೇಕ ಬಿರಾದಾರ

Updated on: Sep 10, 2023 | 11:27 AM

ವಿಚ್ಚೇದನಕ್ಕಾಗಿ ಅಲೆದಾಡುತ್ತಿದ್ದ ಜೋಡಿಗಳನ್ನು ಶನಿವಾರ ರಾಯಚೂರಿನ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್​ನಲ್ಲಿ ರಾಜಿ-ಸಂಧಾನದ ಮೂಲಕ ಒಂದು ಮಾಡಲಾಗಿದೆ.

ರಾಯಚೂರು ಲೋಕ ಅದಾಲತ್​; ನ್ಯಾಯಾದೀಶರ ಎದುರು ಮತ್ತೆ ಒಂದಾದ 8 ಜೋಡಿ
ಒಂದಾದ ಜೋಡಿಗಳು
Follow us on

ರಾಯಚೂರು: ನಗರದ ಕೌಟುಂಬಿಕ ನ್ಯಾಯಾಲಯದ (Family Court) ಆವರಣದಲ್ಲಿ ನಡೆದ ಶನಿವಾರ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್​ನಲ್ಲಿ (Lok Adalat) ರಾಜಿ-ಸಂಧಾನದ ಮೂಲಕ ಎಂಟು ಜೋಡಿಗಳು ಒಂದಾಗಿವೆ. ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಮಾರುತಿ ಬಗಾಡೆ ಮತ್ತು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ್​ ಅವರು ಜೋಡಿಗಳನ್ನು ಒಂದುಗೂಡಿಸಿದರು.

ಕೂಡಿ ಸ್ವರ್ಗ ಸುಖ ಅನುಭವಿಸಬೇಕಾಗಿದ್ದ ಜೋಡಿಗಳು ವಿಚ್ಚೇದನಕ್ಕಾಗಿ ಅಲೆದಾಡುತ್ತಿದ್ದವು. ಒಂದೊಂದು ಜೋಡಿಯ ವಿಚ್ಚೇದನದ ಕಾರಣ ವಿಚಿತ್ರವಾಗಿದೆ. ಕೆಲವೊಂದು ಜೋಡಿಯದ್ದು ಕಣ್ಣೀರಿನ ಕಥೆಯಾದರೇ, ಮತ್ತೆ ಕೆಲವು ಜೋಡಿ ಬುದ್ದಿ ಕಲಿಸಲು ವಿಚ್ಚೇದನ ಪಡೆಯಲು ಮುಂದಾಗಿದ್ದರು.

ಅತ್ತೆಗೆ ಬುದ್ದಿ ಕಲಿಸಲು ಪತಿಗೆ ವಿಚ್ಚೇದನ ನೀಡಲು ಮುಂದಾಗಿದ್ದ ಬ್ಯೂಟಿಷಿಯನ್ ಪತ್ನಿ

ನಾಲ್ಕು ವರ್ಷಗಳ ಹಿಂದೆ ದೇವದುರ್ಗ ಮೂಲದ ಬ್ಯೂಟಿಷಿಯನ್ ನಂದಿತಾ ಜೊತೆ ಮಂಜುನಾಥ ಅವರ ಮದುವೆಯಾಗಿದೆ. ಸೊಸೆ ನಂದಿತಾ ಅವರಿಗೆ ಅತ್ತೆ ಕಿರುಕುಳ ಕೊಡುತ್ತಿದ್ದರು. ಇದಕ್ಕೆ ಬೇಸತ್ತ ನಂದಿತಾ, ಅತ್ತೆಗೆ ಬುದ್ದಿ ಕಲಿಸಲು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಶನಿವಾರ ನಡೆದ ಲೋಕ ಅದಾಲತ್​ನಲ್ಲಿ ನ್ಯಾಯಾದೀಶರು ನಂದಿತಾ ಮತ್ತು ನಂದಿತಾ ಅತ್ತೆಗೆ ಬುದ್ದಿ ಹೇಳಿ ಜೋಡಿಗೆ ಮರು ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: ಧಾರವಾಡ: ದೂರಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದ ಜಿಲ್ಲಾ ನ್ಯಾಯಾಲಯ

ಮೊದಲ ಪತ್ನಿ ಬದುಕಿದ್ದಾಗಲೇ‌ ಎರಡನೇ ಮದುವೆಯಾಗಿದ್ದ ಭೂಪ

ದೇವದುರ್ಗ ಮೂಲದ ಗಂಗಾಧರ್ ಎಂಬವರು ಪತ್ನಿ ಲಕ್ಷ್ಮೀ ಬದುಕಿರುವಾಗಲೇ ಮತ್ತೊಂದು ಮದುವೆಯಾಗಿದ್ದನು. ಅಲ್ಲದೇ ನಿತ್ಯ ಕುಡಿದು ಬಂದು ಪತ್ನಿ ಲಕ್ಷ್ಮೀಗೆ ಸಿಗರೇಟ್​​​ನಿಂದ​ ಮೈ ಸುಡುತ್ತಿದ್ದನು. ಅಲ್ಲದೇ ಬ್ಲೇಡ್​ನಿಂದ ಪತ್ನಿಯ ಕೈ ಕೊಯ್ದು ಕಿರುಕುಳ ಕೊಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಲಕ್ಷ್ಮೀ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಲೋಕ್​ ಅದಾಲತ್​​ನಲ್ಲಿ ನ್ಯಾಯಾದೀಶರು ಸಂಧಾನಕ್ಕೆ ಯತ್ನಿಸಿದ್ದರೂ, ಲಕ್ಷ್ಮೀ ಸಂಧಾನಕ್ಕೊಪ್ಪದೇ ಎರಡೂ ಮಕ್ಕಳು‌ ನನಗೆ ಬೇಕೇ ಬೇಕು ಅಂತ ನ್ಯಾಯಾದೀಶರ ಮುಂದೆ ಕಣ್ಣೀರಿಟ್ಟರು. ಈ ಪ್ರಕರಣ ಇನ್ನೂ ಇತ್ಯರ್ಥವಾಗಬೇಕಿದೆ.

ಹೆತ್ತವರ ಒತ್ತಡಕ್ಕೆ ಮಣಿದು ದೂರಾಗಲು ನಿರ್ಧಾರ

ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳು ಆಗದ ಹಿನ್ನೆಲ್ಲೆಯಲ್ಲಿ ಯಾದಗಿರಿ ಮೂಲದ ಶಶಿಕಲಾ ಹಾಗೂ ಶರಣಬಸವ ದಂಪತಿ ವಿಚ್ಚೇದನಕ್ಕೆ ಮುಂದಾಗಿದ್ದರು. ಆದರೆ ಈ ಜೋಡಿ ಹೆತ್ತವರ ಒತ್ತಡಕ್ಕೆ ಮಣಿದು ದೂರಾಗಲು ನಿರ್ಧರಿಸಿ ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದರು. ಆದರೂ ದಂಪತಿ ಪ್ರೀತಿಸುತ್ತಿದ್ದರು. ಫೋನ್​​ನಲ್ಲಿ ಮಾತನಾಡುತ್ತಾ, ಆಗಾಗ ಅಲ್ಲಲ್ಲಿ ಭೇಟಿಯಾಗುತ್ತಿದ್ದರು.

ಶನಿವಾರ ನಡೆದ ಲೋಕ ಅದಾಲತ್​ನಲ್ಲಿ ನ್ಯಾಯಾಧೀಶರು ದಂಪತಿಯ ಪೋಷಕರಿಗೆ ಬುದ್ದಿವಾದ ಹೇಳಿ ಮತ್ತೆ ಜೋಡಿಯನ್ನು ಒಂದು ಮಾಡಿದ್ದಾರೆ. ಹೀಗೆ ಒಟ್ಟು ಎಂಟು ಜೋಡಿ ಮರು ಒಂದಾಗಿದ್ದಾರೆ. ಶ್ರಾವಣದ ಶುಭ ಮಾಸದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಎಂಟು ಜೋಡಿಗಳು ಒಂದಾದ ಖುಷಿಗೆ ನೆರೆದಿರುವ ಜನರಿಗೆ ಜನರಿಗೆ ಸಿಹಿ ಬೂಂದಿ ಸಂಭ್ರಮಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ