ರಾಯಚೂರು: ಗಂಡ ದುಡಿಯಲ್ಲ ಕಿರುಕುಳ ಕೊಡ್ತಾನೆ ಅಂತ ಗಂಡನ ಮನೆ ಬಿಟ್ಟು ತವರು ಸೇರುವ ಹಣ್ಣುಮಕ್ಕಳ ನಡುವೆ ರಾಯಚೂರಿನ ಮಹಿಳೆಯೊಬ್ಬರು(Woman) ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಗಂಡನ(Husband) ಕಿರುಕುಳಕ್ಕೆ ಬೇಸತ್ತು ದೂರ ಆಗೋ ಅದೆಷ್ಟೋ ಮಹಿಳೆಯರಿಗೆ ಈ ಆಟೋ ಚಾಲಕಿ(Auto driver) ಪ್ರೇರಣೆಯಾಗಿದ್ದಾರೆ. ಅಷ್ಟಕ್ಕು ಈಕೆ ಯಾರೂ ಅಂದರೆ ರಾಯಚೂರು ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಆಟೋ ಚಾಲಕಿ. ಈ ಆಟೋ ಚಾಲಕಿ ಹೆಸರು ನಿರ್ಮಲಾ. ವಯಸ್ಸು 53. ರಾಯಚೂರು ನಗರದ ಆಶಾಪುರ ರಸ್ತೆಯ ಸಣ್ಣದೊಂದು ಮನೆಯೊಂದರಲ್ಲಿ ಪತಿ ರಾಮುಲು ಜೊತೆ ವಾಸವಿದ್ದಾರೆ. ಈ ಆಟೋ ಚಾಲಕಿ ನಿರ್ಮಲಾ, ರಾಯಚೂರು ಜಿಲ್ಲೆಯ ಮೊದಲ ಹಾಗೂ ಏಕೈಕ ಮಹಿಳಾ ಆಟೋ ಚಾಲಕಿ.
ನಿರ್ಮಲಾ ಪತಿ ರಾಮುಲು ಕೂಡ ಆಟೋ ಚಾಲಕ. ಆತ ದುಡಿಯೊದನ್ನು ಬಿಟ್ಟು ಪತ್ನಿ ನಿರ್ಮಲಾ ಹಾಗೂ ಮಕ್ಕಳಿಗೆ ಕಿರುಕುಳ ಕೊಡೋಕೆ ಶುರುಮಾಡಿದ್ದ. ಆಗ ಗಂಡನ ಮನೆ ಬಿಟ್ಟು ಹೋದರೆ ಸಮಾಜ ನೋಡೊದೇ ಬೇರೆ ಥರ ಅಂತ ತಾನೇ ಮುಂದೆನಿಂತು ಮನೆ ಜವಾಬ್ದಾರಿ ಹೊತ್ತಿದ್ದರು. ನಿರ್ಮಲಾ ಕೊನೆಗೆ ಆಟೋ ಚಾಲನೆ ಕಲಿತು ಗಂಡ ರಾಮುಲು ಬದಲು ತಾನೇ ಆಟೋ ಚಾಲನೆಗೆ ನಿಂತರು. 1992 ರಲ್ಲಿ ಆಟೋ ಚಾಲನೆ ಶುರುಮಾಡಿದ ನಿರ್ಮಲಾ ಇಲ್ಲಿಯವರೆಗೆ ಸುಮಾರು 30 ವರ್ಷಗಳ ಕಾಲ ಸತತವಾಗಿ ಆಟೋ ಚಾಲನೆ ಮಾಡ್ತಾ ಸ್ವಾವಲಂಬನೆಯಿಂದ ಜೀವನ ನಡೆಸ್ತಿದ್ದಾರೆ.
ಸಂಸಾರದ ನೌಕೆ ಸಾಗಿಸುತ್ತಾ, ಪತಿ ರಾಮುಲು ಅವರನ್ನು ತಿದ್ದಿ, ಮೊದಲಿನಂತೆ ಒಳ್ಳೆ ದಾರಿಗೆ ತಂದಿದ್ದಾರೆ. ಇನ್ನೇನು ವಯಸ್ಸಾಯ್ತು ಮನೆಯಲ್ಲಿರುವ ಎಂದು ಯೋಚಿಸುತ್ತಿರುವಾಗಲೇ ಹೆಗಲೆತ್ತರಕ್ಕೆ ಬೆಳೆದಿದ್ದ ಮಗ ವಿರೇಶ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದ. ಆಗ ವಿಧಿಯಿಲ್ಲದೇ ಎದೆಗುಂದದೇ ಮತ್ತೆ ಅದೇ ಆಟೋ ಚಾಲನೆಯನ್ನು ನಿರ್ಮಲಾ ಮುಂದುವರೆಸಿದ್ದಾರೆ. ಇದೇ ದುಡಿಮೆಯಿಂದ ಅನಾರೋಗ್ಯ ಪೀಡಿತ ಪತಿಯ ಚಿಕಿತ್ಸಾ ಖರ್ಚು, ಮನೆ ಖರ್ಚು ನಿಭಾಯಿಸಿಕೊಂಡು ಮಗಳು ರೇಖಾ ಮದುವೆ ಮಾಡಿಸಿದ್ದಾರೆ.
ಜೊತೆಗೆ ಮತ್ತೊಬ್ಬ ಮಗ ನರೇಶ್ನನ್ನು ಉನ್ನತ ವ್ಯಾಸಂಗಕ್ಕಾಗಿ ವಿಶಾಖಪಟ್ಟಣಂಗೆ ಕಳುಹಿಸಿದ್ದಾರೆ. ಹೀಗೆ, ಆಟೋ ಚಾಲನೆ ವೇಳೆ ಬಡವರು, ತುರ್ತು ಪರಿಸ್ಥಿತಿಯದಲ್ಲಿರೋರು, ಮಹಿಳೆಯರ ಸಹಜ ಕಷ್ಟಗಳನ್ನು ಕಣ್ಣಾರೆ ಕಂಡು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದರು. ಅಂದರೆ ಜೀವನ ನಡೆಸಲು ಬೇಕಾಗೋ ದುಡಿಮೆ ಜೊತೆ ಅದೇ ಆಟೋ ಉಚಿತ ಸೇವೆ ಮೂಲಕ ಬಡವರಿಗೆ, ಗರ್ಭಿಣಿಯರಿಗೆ, ಹಣವಿಲ್ಲದ ವೃದ್ಧರಿಗೆ ಉಚಿತ ಸೇವೆಯನ್ನು ಕೊಡುತ್ತಿದ್ದಾರೆ. ಆಟೋ ಚಾರ್ಜ್ ಕೊಡುವ ವೇಳೆ ಹಣವಿಲ್ಲ ಅಂತ ಯಾರಾದ್ರೂ ಮನವಿ ಮಾಡಿದ್ರೇ, ಅಂಥವರ ಜೊತೆ ಜಗಳವಾಡದೆ, ಕೊಟ್ಟಷ್ಟು ಹಣ ಪಡೆದು ಆಟೋ ಸೇವೆ ನೀಡುತ್ತಾರೆ.
ಸಾರ್ಥಕ 30 ವರ್ಷಗಳ ಆಟೋ ಸೇವೆಯಲ್ಲಿ ಅದೇಷ್ಟೋ ಮಹಿಳೆಯರು, ಹೆಣ್ಣು ಮಗಳಾಗಿ ಆಟೋ ಓಡಿಸೋದು ಕಷ್ಟ ಆಗಲ್ವ. ಅಂತೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ವೇಳೆ, ಎಲ್ರೂ ಒಂದೇ ರೀತಿ ಇರಲ್ಲ. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರಂತೆ.ಮಹಿಳೆಯರು ಮನೆಯಿಂದ ಹೊರ ಬಂದು ಸ್ವಾವಲಂಬಿಯಾಗಿ ದುಡಿ ಬೇಕು ಅಂತ ಮಹಿಳೆಯರಿಗೆ ಸಂದೇಶ ನೀಡುತ್ತೇನೆ ಎಂದು ಸ್ವಾವಲಂಬಿ ಆಟೋ ಚಾಲಕಿ ನಿರ್ಮಲಾ ಹೇಳಿದ್ದಾರೆ.
ವರದಿ: ಭೀಮೇಶ್ ಪೂಜಾರ್
ಇದನ್ನೂ ಓದಿ:
International Women’s Day: ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು? ಇಲ್ಲಿದೆ ಇತಿಹಾಸ
Women’s Day Special : ಮಹಿಳೆಯ ಶೋಷಣೆ ಆಕೆಯ ಸಾಧನೆಗೆ ಮಾರಕವಾಗಬಾರದು
Published On - 2:36 pm, Tue, 8 March 22