
ರಾಯಚೂರು, ಜನವರಿ 31: ನೀರು ತರಲು ಹೋದಾಗ ವಾಟರ್ ಪ್ಯೂರಿಫೈರ್ ಸ್ವಿಚ್ನಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಕರೆಂಟ್ ಶಾಕ್ಗೆ ಸರಕಾರಿ ಶಾಲೆಯ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಶಾಮಣ್ಣ ಎಂಬವರ ಪುತ್ರಿಯಾಗಿರುವ ತನುಶ್ರೀ (11) ಮೃತ ದುರ್ದೈವಿ. ಶಿಕ್ಷಕಯೊಬ್ಬರು ಬಾಟಲ್ನಲ್ಲಿ ನೀರು ತುಂಬಿಸಿಕೊಂಡು ಬರಲು ಹೇಳಿದ ಕಾರಣ ಆಕೆ ವಾಟರ್ ಪ್ಯೂರಿಫೈರ್ ಬಳಿ ತೆರಳಿದ್ದಳು ಎನ್ನಲಾಗಿದೆ.
ಗ್ರಾಮದ ಕಿರಿಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ತನುಶ್ರೀ, ಓದಿನಲ್ಲಿಯೂ ಜಾಣೆಯಾಗಿದ್ದಳು. ಒಂದು ದಿನವೂ ತಪ್ಪಿಸದೆ ಶಾಲೆಗೆ ತೆರಳುತ್ತಿದ್ದಳು. ಶಿಕ್ಷಕರು ಹೇಳಿದ್ದಾರೆ ಎಂದು ನೀರು ತರಲು ಹೋದ ಈಕೆ ವಾಟರ್ ಪ್ಯೂರಿಫೈರ್ ಸ್ವಿಚ್ ಆನ್ ಮಾಡಿದ್ದಾಳೆ. ಆ ವೇಳೆ ಬಾಲಕಿಯ ಎಡಗೈಗೆ ವಿದ್ಯುತ್ ಶಾಕ್ ತಗುಲಿದ್ದು, ಅಲ್ಲೇ ಆಕೆ ಕುಸಿದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಶಿಕ್ಷಕರು ಕೂಡಲೇ ಸ್ಥಳೀಯ ವೈದ್ಯರೊಬ್ಬರನ್ನ ಕರೆಸಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ವೈದ್ಯರು ತನುಶ್ರೀ ಸ್ಥಿತಿ ಗಂಭಿರವಾಗಿದೆ ಎಂದು ಹೇಳಿದ ಕಾರಣ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ತಾಲೂಕು ಆಸ್ಪತ್ರೆ ಆವರಣದಲ್ಲಿಯೇ ಆಕೆ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ
ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ., ಸಿಂಧನೂರು ತಹಶಿಲ್ದಾರ್ ಗೆ ಆದೇಶಿಸಿದ್ದಾರೆ. ಬಿಇಒ, ತಹಶೀಲ್ದಾರ್, ಜೆಸ್ಕಾಂ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ತಪ್ಪಿತಸ್ಥ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಆಗಲಿದೆ ಎನ್ನಲಾಗಿದೆ. ಅಲ್ಲದೆ ಜಿಲ್ಲೆಯ ಉಳಿದ ಶಾಲೆಗಳಲ್ಲಿಯೂ ವಿದ್ಯುತ್ ಸಮಸ್ಯೆಗಳಿದ್ದರೆ ತಕ್ಷಣ ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಮೃತಳ ಕುಟುಂಬಕ್ಕೆ ಪರಿಹಾರ ನೀಡೋ ಭರವಸೆ ಜಿಲ್ಲಾಧಿಕಾರಿಗಳಿಂದ ಸಿಕ್ಕಿದೆ. ಇನ್ನು ಘಟನಾ ಸ್ಥಳಕ್ಕೆ ತುರ್ವಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತಳ ತಂದೆ ಶಾಮಣ್ಣ ನೀಡಿದ ದೂರಿನನ್ವಯ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.