ರಾಯಚೂರಿನಲ್ಲಿ ಮೂರೇ ತಿಂಗಳಲ್ಲಿ 11 ಬಾಣಂತಿಯರ ಮರಣ: ಸಿಂಧನೂರು ಬಳಿಕ ರಿಮ್ಸ್ ಆಸ್ಪತ್ರೆಯಲ್ಲೇ ನಾಲ್ಕು ಸಾವು

| Updated By: Ganapathi Sharma

Updated on: Jan 03, 2025 | 9:58 AM

ಗಡಿ ಜಿಲ್ಲೆ ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವಿಗೆ ಕೊನೆಯೇ ಇಲ್ಲದಂತಾಗಿದೆ. ಅಕ್ಟೋಬರ್ ನಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 11 ಬಾಣಂತಿಯರು ಉಸಿರು ಚೆಲ್ಲಿದ್ದು, ಮೂರು ಹಸುಗೂಸುಗಳು ಕೂಡ ಸಾವನ್ನಪ್ಪಿವೆ. 11 ಪ್ರಕರಣಗಳಲ್ಲಿ ನಾಲ್ಕು ಕೇಸ್ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ವರದಿಯಾಗಿದ್ದರೆ, ನಾಲ್ಕು ರಿಮ್ಸ್​ನಲ್ಲಿ ವರದಿಯಾಗಿದೆ. ಈವರೆಗೆ ವೈದ್ಯರ ನಿರ್ಲಕ್ಷದ ಆರೋಪದ ಬಗ್ಗೆ ತನಿಖೆಯೇ ನಡೆದಿಲ್ಲ.

ರಾಯಚೂರಿನಲ್ಲಿ ಮೂರೇ ತಿಂಗಳಲ್ಲಿ 11 ಬಾಣಂತಿಯರ ಮರಣ: ಸಿಂಧನೂರು ಬಳಿಕ ರಿಮ್ಸ್ ಆಸ್ಪತ್ರೆಯಲ್ಲೇ ನಾಲ್ಕು ಸಾವು
ರಿಮ್ಸ್ ಆಸ್ಪತ್ರೆ
Follow us on

ರಾಯಚೂರು, ಜನವರಿ 3: ಬಳ್ಳಾರಿ ಬಳಿಕ ರಾಯಚೂರಿನಲ್ಲೂ ಬಾಣಂತಿಯರ ಮರಣ ಮೃದಂಗ ಶುರುವಾಗಿದೆ. ಅಕ್ಟೋಬರ್​ನಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಒಟ್ಟು 11 ಬಾಣಂತಿಯರ ಸಾವಾಗಿದೆ. ಬಾಣಂತಿಯರ ಸಾವಿನ ಸರಮಾಲೇ ಶುರುವಾಗಿದ್ದೇ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಾಗಿತ್ತು. ಬಳ್ಳಾರಿ ಕೇಸ್​ಗಳಂತೆ ಇಲ್ಲಿಯೂ ಪಶ್ಚಿಮ ಬಂಗಾಳ ಕಂಪೆನಿಯ ಆರ್​ಎಲ್ ಫ್ಲುಯಿಡ್ ಅನ್ನು ಬಾಣಂತಿಯರಿಗೆ ನೀಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಆರ್​ಎಲ್ ಫ್ಲುಯಿಡ್​ನ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಬೆಂಗಳೂರು ಹಾಗೂ ಹೈದರಾಬಾದ್​ ಲ್ಯಾಬ್​ಗಳಿಂದ ವರದಿ ಬಂದಿದೆ. ಅದು ಸರ್ಕಾರಕ್ಕೂ ತಲುಪಿದೆ.

ಆ ವರದಿಯಲ್ಲಿ ಆರ್​ಎಲ್​​ ಫ್ಲುಯಿಡ್ ಕಳಪೆ ಎಂಬ ವಿಷಯ ಬಹಿರಂಗವಾಗಿದ್ದು ಬೆಚ್ಚಿ ಬೀಳಿಸಿತ್ತು. ಜಿಲ್ಲೆಯಲ್ಲಿ ನಡೆದ ಉಳಿದ ಕೇಸ್​ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ಮೃತ ಬಾಣಂತಿಯರ ಕುಟುಂಬಸ್ಥರು ಹಾಗೂ ಹೋರಾಟಗಾರರು ಆಗ್ರಹಿಸಿದ್ದರು. ಆದರೆ, ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿರಲಿಲ್ಲ.

ಈ ಮಧ್ಯೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಂತೆ ರಿಮ್ಸ್ ಆಸ್ಪತ್ರೆಯಲ್ಲೂ ನಾಲ್ಕು ಜನ ಬಾಣಂತಿಯರು ಉಸಿರು ಚೆಲ್ಲಿದ್ದು, ರಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಮೂಲದ ಉಮಾ ತನ್ನ ಹಸುಗೂಸು ಸಮೇತ ರಿಮ್ಸ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಬಳಿಕ ಜಾಗಿರ ವೆಂಕಟಾಪುರ ಗ್ರಾಮದ ರೆಹಮತ್ ಬೀ ಮಗುವಿಗೆ ಜನ್ಮ ನೀಡಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ರಿಮ್ಸ್ ನಲ್ಲಿ ಅಸುನೀಗಿದ್ದಾರೆ. ನಂತರ ರಾಯಚೂರು ತಾಲ್ಲೂಕಿನ ರಂಗಾಪುರ ಗ್ರಾಮದ ನಿಂಗಮ್ಮ ಎಂಬ ಮಹಿಳೆ ಸಾಮಾನ್ಯ ಹೆರಿಗೆಯಾಗಿ ಮನೆ ಸೇರಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ರಿಮ್ಸ್ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಿಮ್ಸ್​​ನಲ್ಲೇ ಕೊನೆಯುಸಿರೆಳೆದಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ಸಾವು

ಹೊಸ ವರ್ಷದ ದಿನವೇ ಮಸೀದಾಪುರ ಗ್ರಾಮದ ಶಿವಲಿಂಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಸಮೇತ ತಾಯಿಯೂ ರಿಮ್ಸ್​ನಲ್ಲೇ ಸಾವನ್ನಪ್ಪಿದ್ದಾರೆ. ಈಕೆಯ ಪೋಷಕರು ಡಿಸ್ಚಾರ್ಜ್ ಮಾಡಿ ಬೇರೆಡೆ ಕರೆದೊಯ್ಯುತ್ತೇವೆ ಎಂದರೂ ರಿಮ್ಸ್ ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಆಕೆಯ ಸಾವಾಗಿದೆ. ಆಕೆಯ ಸಾವಿಗೆ ರಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಶಿವಲಿಂಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಭಾಸ್ಕರ್, ಆಕೆಗೆ ರಕ್ತದ ಒತ್ತಡ ಹೆಚ್ಚಿತ್ತು. ಡೆಲಿವರಿಗೂ ಮುಂಚೆಯೂ ರಕ್ತದೊತ್ತಡ ಇತ್ತು. ಆ ಬಳಿಕ ಹೆರಿಗೆ ಬಳಿವೂ ಹೆಚ್ಚಾಗಿತ್ತು. ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗಿ ಸಾವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಂಧನೂರು: ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ, ವರದಿ

ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಬಾಣಂತಿಯರ ಸಾವಾಗಿದ್ದು ನಾಲ್ಕು ಕೇಸ್​ಗಳಲ್ಲೂ ಮೃತರ ಕುಟುಂಬಸ್ಥರು ವೈದ್ಯರ ನಿರ್ಲಕ್ಷ ಅಂತಲೇ ಆರೋಪ ಮಾಡಿದ್ದಾರೆ. ಆದರೆ, ಈ ವರೆಗೆ ಸರ್ಕಾರವಾಗಲಿ, ಆರೋಗ್ಯ ಇಲಾಖೆ ಆಗಲಿ ಯಾವುದೇ ಕ್ರಮಗೈಕೊಂಡಿಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ