ರಾಯಚೂರು, ಮೇ 04: ಜೈ ಶ್ರೀರಾಮ (Jai Shri ram) ಎಂದಾಗ ಪೊಲೀಸರು (Police) ಬೂಟಲ್ಲಿ ಹೊಡೆದು ಒಳಗೆ ಹಾಕಬೇಕಿತ್ತು ಅಂತ ಕಾಂಗ್ರೆಸ್ (Congress) ಮುಖಂಡ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪತಿ ಬಷರುದ್ದಿನ್ ಆಡಿರುವ ಮಾತಿನ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡ ಬಷರುದ್ದಿನ್ ಹೇಳಿಕೆ ಖಂಡಿಸಿ ರಾಯಚೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ (Shivaraj Patil) ನೇತೃತ್ವದಲ್ಲಿ ಬಿಜೆಪಿ (BJP) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನೂರಾರು ಜನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಆಗಮಿಸಿ, ದೂರು ಸ್ವೀಕರಿಸಿದರು.
ಘಟನೆ ಸಂಬಂಧ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿ, ಬಷರುದ್ದಿನ್ ಹೇಳಿಕೆಯಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಅವಮಾನವಾಗಿದೆ. ಈತನನ್ನು ಪೊಲೀಸರು ಬಂಧಿಸಿ ಲೆದರ್ ಬೂಟಿನಿಂದ ಹೊಡೆಯಬೇಕು. ನಾವು ಜೈ ಶ್ರೀರಾಮ, ಇನ್ ಶಾ ಅಲ್ಲಾ, ಯೇಸುಕ್ರಿಸ್ತನ ಪರ ಘೋಷಣೆ ಕೂಗುತ್ತೇವೆ. ಇದು ನಮಗೆ ಸಂವಿಧಾನ ಕೊಟ್ಟ ಹಕ್ಕು ಅಂತ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರದ ತೀನ್ ಕಂದೀಲ್ ಸರ್ಕಲ್ ಬಳಿ ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾ ಇದೆ. ಈ ದರ್ಗಾ ಎದುರು ಮುಸ್ಲಿಂ ಸಮುದಾಯದವರು ಕಮಾನ್ ನಿರ್ಮಿಸುತ್ತಿದ್ದರು. ದರ್ಗಾದ ಕಮಾನ್ ನಿರ್ಮಿಸುತ್ತಿರುವ ಪ್ರದೇಶದ ಬಳಿ ಐತಿಹಾಸಿಕ ರಾಯಚೂರು ಕೋಟೆ ಇದೆ.
ಇದನ್ನೂ ಓದಿ: ಶಿವ ವರ್ಸಸ್ ರಾಮ; ಚುನಾವಣೆ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ
ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ, ಆಯಾ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಅಷ್ಟೇ ಅಲ್ಲದೇ 200 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತಿದೆ. ಹೀಗಾಗಿ ಪುರಾತನ ಕಟ್ಟಡಗಳ ಸುತ್ತ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.
ಆದರೂ ಕೂಡ ಮುಸ್ಲಿಂ ಸಮುದಾಯದವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕಮಾನ್ ನಿರ್ಮಿಸುತ್ತಿದ್ದರು. ಈ ವಿಚಾರ ತಿಳಿದ ಹಿಂದೂ ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಸ್ಥಳಕೆ ಧಾವಿಸಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದವರ ಮಧ್ಯೆ ವಾಗ್ವಾದ ಶುರುವಾಯಿತು. ಈ ವೇಳೆ ಘೋಷಣೆಗಳು ಮೊಳಗಿದವು. ಹಿಂದೂ ಕಾರ್ಯಕರ್ತರು ಜೈ ಶ್ರೀರಾಮ ಘೋಷಣೆ ಕೂಗಿದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದರು.
ಗಲಾಟೆ ಬಳಿಕ ನಗರಸ ಸಭೆ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ಮುಖಂಡ ಬಷರುದ್ದಿನ್ ಸಭೆ ನಡೆಸಿದರು. ಸಭೆಯಲ್ಲಿ “ಯಾವುದಕ್ಕೂ ಸಂಬಂಧಿಲ್ಲದ ವ್ಯಕ್ತಿ ರಾಯಚೂರು ನಗರದಲ್ಲಿ ಅಶಾಂತಿ ಸೃಷ್ಟಿಸಲೆಂದು ಜೈ ಶ್ರೀರಾಮ ಅಂತ ಕೂಗಿದರೇ, ಪೊಲೀಸರು ಬೂಟಿನಲ್ಲಿ ಹೊಡೆದು ಓಳಗೆ ಹಾಕಬೇಕಿತ್ತು” ಎಂದು ಅಧಿಕಾರಿಗಳಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ರಾಜು ಕಾಗೆ
ಪುರಾತನ ಕೋಟೆ ಜಾಗದಲ್ಲಿನ ನಿರ್ಮಿಸುತ್ತಿದ್ದ ಕಮಾನ್ ಅನ್ನು ತೆರವು ಮಾಡಲು ರಾಯಚೂರು ನಗರಸಭೆಗೆ ಪುರಾತತ್ವ ಇಲಾಖೆ ಸೂಚಿಸಿತ್ತು. ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಆದರೂ ಕಾಮಗಾರಿ ಮಾಡಿರುವುದರಿಂದ ತೆರವುಗೊಳಿಸುವಂತೆ ಆದೇಶ ಹೊರಡಿಸಿತ್ತು.
ಈ ವಿಡಿಯೋ ಆರು ತಿಂಗಳ ಹಿಂದಿನದ್ದು. ನಾವು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Sat, 4 May 24