ರಾಯಚೂರು, ಏಪ್ರಿಲ್ 27: ರಾಯಚೂರು (Raichur) ಜಿಲ್ಲೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ (Sindhanur Government Hospital) ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆ ಸಿಬ್ಬಂದಿ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ವಿಚಾರ ಬಹಿರಂಗವಾಗಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆಯೇ ಲಂಚ ಪಡೆದಿದ್ದ ಹಣವನ್ನು ವಾಪಸ್ ನೀಡಿ ಸಿಬ್ಬಂದಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2000 ರೂ. ಲಂಚಕ್ಕೆ ಬೇಡಿಕೆ ಇಟ್ಟು 1,500 ರೂ. ಕೊಟ್ಟರೂ ಪೋಸ್ಟ್ ಮಾರ್ಟಂ ಮಾಡಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.
ಸಿಂಧನೂರು ತಾಲ್ಲೂಕಿನ ಕೆಂಗಲ್ ಗ್ರಾಮದ ಅಂಬಮ್ಮ (57) ಎಂಬವರು ಶುಕ್ರವಾರ ಕೆಂಗಲ್ ಗ್ರಾಮದಿಂದ ದಡೆಸುಗೂರು ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮೂರ್ಛೆ ರೋಗದಿಂದ ಮೃತಪಟ್ಟಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗೆ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ಈ ವೇಳೆ, ಮಂಜುನಾಥ್ ಎಂಬ ಸಿಬ್ಬಂದ ಮರಣೋತ್ತರ ಪರೀಕ್ಷೆಗೆ 2000 ರೂ.ಡಿಮ್ಯಾಂಡ್ ಮಾಡಿದ್ದಾರೆ. ಸಿಬ್ಬಂದಿ ದರ್ಪಕ್ಕೆ ಬೇಸತ್ತು ಮೃತ ಮಹಿಳೆಯ ಕುಟುಂಬದವರು 1500 ರೂ.ನೀಡಿದ್ದರು. ಆದರೆ, ಇನ್ನೂ 500 ರೂ.ಕೊಟ್ಟರೆ ಮಾತ್ರ ಪೋಸ್ಟ್ ಮಾರ್ಟಮ್ ಎಂದಿ ಬೀಗ ಹಾಕಿಕೊಂಡು ಸಿಬ್ಬಂದಿ ಹೋಗಿದ್ದಾರೆ.
ಇದನ್ನೂ ಓದಿ: ರಾಯಚೂರು: ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ
ಆಗ ಶವಾಗಾರದ ಬಳಿ ಕರ್ನಾಟಕ ಪ್ರಾಂತ್ಯ ಕೂಲಿಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಲಂಚ ಪಡೆದ ಸಿಬ್ಬಂದಿ ಮಂಜುನಾಥ್ ಅಮಾನತಿಗೆ ಆಗ್ರಹಿಸಿದ್ದಾರೆ. ಕೊನೆಗೆ ಲಂಚ ಪಡೆದಿದ ವ್ಯಕ್ತಿ 1500 ರೂ. ವಾಪಸ್ ನೀಡಿ ಓಡಿ ಹೋಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ