
ರಾಯಚೂರು, ಜನವರಿ 14: ಸಮಾಜ ಕಲ್ಯಾಣ ಇಲಾಖೆ (Social Welfare Dept), ತಮ್ಮ ಹಾಸ್ಟೆಲ್‌ಗಳಿಗೆ ರೇಷನ್ ಸರಬರಾಜು ಮಾಡಿರುವ ವ್ಯಾಪಾರಿಗೆ ಕೋಟ್ಯಂತರ ರೂ ಬಿಲ್ ಪಾವತಿಸದೇ (Ration Bill) ಡೋಂಟ್ ಕೇರ್ ಎಂದಿದೆ. ಕೋರ್ಟ್ ಸಮ್ಮುಖದಲ್ಲಿ ಹಣ ಕೊಡುತ್ತೇವೆ ಅಂತ ಒಪ್ಪಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ಪೀಠೋಪಕರಣಗಳ ಜಪ್ತಿಗೆ ಆದೇಶಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.
ದೂರುದಾರ ಮತಿ ಸಾಗರ್ ಎನ್ನುವವರು ಕೋರ್ಟ್ ಆದೇಶದನ್ವಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಇವರು ಪದ್ಮಾವತಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ರಾಯಚೂರಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಾನ್ವಿ, ಲಿಂಗಸುಗೂರು ತಾಲೂಕಿನಲ್ಲಿ ಇಲಾಖಾ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ರೇಷನ್ ಸಪ್ಲೈ ಮಾಡುತ್ತಿದ್ದರು. ಈ ಬಗ್ಗೆ ಟೆಂಡರ್ ಪಡೆದಿದ್ದ ಮತಿ ಸಾಗರ್ಗೆ ಹಳೆ ಬಿಲ್ ಪಾವತಿಯಾಗಿಲ್ಲ.
ಇದನ್ನೂ ಓದಿ: ರೈತರಿಗೆ ಪರಿಹಾರ ನೀಡಲು ವಿಳಂಬ: ಡಿಸಿ ಕಾರು, ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶ
ಮಾನ್ವಿ ತಾಲೂಕು ಕಚೇರಿಯ 1 ಕೋಟಿ 87 ಲಕ್ಷ ರೂ ಹಾಗೂ ಲಿಂಗಸುಗೂರು ತಾಲೂಕು ಕಚೇರಿಯಿಂದ 32 ಲಕ್ಷ 50 ಸಾವಿರ ರೂ. ಹಣ ಬಾಕಿ ಇದೆ. ಹೀಗೆ ಒಟ್ಟು 2 ಕೋಟಿ 19 ಲಕ್ಷ ರೂ. ಬಿಲ್ ಬಾಕಿ ಇದೆ. ಬಿಲ್ ಕ್ಲಿಯರ್ ಮಾಡುವುದುಕ್ಕೆ ತಾಲೂಕು ಅಧಿಕಾರಿಗಳು ಬಿಲ್ ಮಾಡ್ತಿದ್ದಾರೆ. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರ ತಿರಸ್ಕರಿಸಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಸುಮಾರು 20 ಪತ್ರಗಳನ್ನ ಬರೆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ಮಾಲೀಕ ಮತಿ ಸಾಗರ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ವಿಚಾರಣೆ ವೇಳೆ ಅಧಿಕಾರಿಗಳು ಬಾಕಿ ಬಿಲ್ ಪಾವತಿಗೆ ಒಪ್ಪಿಕೊಂಡಿದ್ದರು. ಆದರೆ ಸಂಧಾನದಂತೆ ಹಣ ಪಾವತಿ ಮಾಡದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ.
ಜಿಲ್ಲಾ ಸತ್ರ ನ್ಯಾಯಾಲಯದ ಕಮರ್ಷಿಯಲ್ ಕೋರ್ಟ್ ಆದೇಶ ಬೆನ್ನಲ್ಲೇ ಜಪ್ತಿ ಮಾಡಲಾಗಿದೆ. ಜಪ್ತಿ ವೇಳೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಉಪ ನಿರ್ದೇಶಕಿ ಸಿಂಧು ಕೂಡ ಕಚೇರಿಯಲ್ಲೇ ಇದ್ದರು. ಈ ವೇಳೆ ಉಪ ನಿರ್ದೇಶಕಿ ಸಿಂಧು ಕೊಠಡಿಯ ಖುರ್ಚಿ ಸಹ ಬಿಡದೇ ಜಪ್ತಿ ಕಾರ್ಯ ಮಾಡಲಾಯಿತು. ಈ ವೇಳೆ ಅವರು ಗಲಿಬಿಲಿಗೊಂಡಿದ್ದು ಕಂಡುಬಂತು.
ಕುರ್ಚಿಗಳು, ಟೇಬಲ್ಗಳು, ಕಂಪ್ಯೂಟರ್ಗಳು, ಪ್ರಿಂಟರ್ ಸೇರಿ ವಿವಿಧ ಬೆಲೆ ಬಾಳುವ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಈ ಜಪ್ತಿ ಕಾರ್ಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಮಾತನಾಡಿದ್ದು, ಈ ಕೇಸ್ನ ಎಲ್ಲಾ ಬಿಲ್ ಆಗಿದ್ದು ಹಣ ಪಾವತಿ ಮಾಡಿದ್ದೇವೆ. ಆ ಬಗ್ಗೆ ದಾಖಲೆಗಳು ನಮ್ಮಲ್ಲಿವೆ. ದೂರುದಾರರ ಬಳಿ ಸಾಕ್ಷಿಗಳಿದ್ದರೇ ನಾವು ಬಿಲ್ ಮಾಡುತ್ತೇವೆ. ಇಲ್ಲಾ ಹಿರಿಯ ಅಧಿಕಾರಿಗಳು ಹೇಳುವ ರೀತಿ ಕ್ರಮಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡು 30 ವರ್ಷವಾದರೂ ಪರಿಹಾರ ನೀಡದ ನೀರಾವರಿ ಇಲಾಖೆ: ಕಚೇರಿಯ ಎಲ್ಲ ಪೀಠೋಪಕರಣ ಜಪ್ತಿ ಆಯ್ತು
ಒಟ್ಟಿನಲ್ಲಿ ಸದ್ಯ ಕೋರ್ಟ್ ಆದೇಶದನ್ವಯ ಜಪ್ತಿ ಕಾರ್ಯ ಮಾಡಲಾಗಿದ್ದು, 2 ಕೋಟಿ ರೂ ಬಾಕಿ ಬಿಲ್ ಅನ್ನ ಸಮಾಜ ಕಲ್ಯಾಣ ಇಲಾಖೆ ಹೇಗೆ ಪಾವತಿಸತ್ತೆ ಕಾದುನೋಡಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.