RTPS: ರಾಯಚೂರಿನಲ್ಲಿ ಕೋಲ್ ಬಂಕರ್ ಕುಸಿತ; ಬೃಹತ್ ಯಂತ್ರಗಳಿಗೆ ಹಾನಿ, ವಿದ್ಯುತ್ ಉತ್ಪಾದನೆ ಸ್ಥಗಿತ

| Updated By: ಸುಷ್ಮಾ ಚಕ್ರೆ

Updated on: Aug 10, 2022 | 1:08 PM

ಸದ್ಯಕ್ಕೆ 8 ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಹಾಗೂ ಬೃಹತ್ ಯಂತ್ರಗಳಿಗೆ ಹಾನಿಯಾಗಿರುವ ಕಾರಣದಿಂದ ದುರಸ್ತಿ ಕಾರ್ಯಕ್ಕೆ ಬೆಂಗಳೂರಿನಿಂದ ತಜ್ಞರು ಬರುವ ಸಾಧ್ಯತೆಯಿದೆ

RTPS: ರಾಯಚೂರಿನಲ್ಲಿ ಕೋಲ್ ಬಂಕರ್ ಕುಸಿತ; ಬೃಹತ್ ಯಂತ್ರಗಳಿಗೆ ಹಾನಿ, ವಿದ್ಯುತ್ ಉತ್ಪಾದನೆ ಸ್ಥಗಿತ
ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕ
Follow us on

ರಾಯಚೂರು: ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ (Raichur Thermal Power Station) ಕಲ್ಲಿದ್ದಲು ಬಂಕರ್‌ ಕುಸಿತವಾಗಿದೆ. ಈ ವೇಳೆ ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿರುವ ಆರ್​​ಟಿಪಿಎಸ್​ನ (RTPS) 1ನೇ ಘಟಕದ ಕಲ್ಲಿದ್ದಲು ಬಂಕರ್ ಕುಸಿತವಾಗಿ ಅಪಾರ ಹಾನಿಯಾಗಿದ್ದು, ಯಂತ್ರೋಪಕರಣಗಳು ಧ್ವಂಸವಾಗಿವೆ. ಮಳೆಯಿಂದ ತೊಯ್ದ ಕಲ್ಲಿದ್ದಲನ್ನು ಕಲ್ಲಿದ್ದಲು ಬಂಕರ್​ಗೆ (Coal Bunker) ಹಾಕಲಾಗಿತ್ತು. ಇದರಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.

ಒಟ್ಟು 8 ವಿದ್ಯುತ್ ಉತ್ಪಾದನಾ ಘಟಕ ಹೊಂದಿರುವ RTPS ಘಟಕದ ಕೋಲ್ ಬಂಕರ್​ನಲ್ಲಿದ್ದ 500 ಟನ್ ಕಲ್ಲಿದ್ದಲು ಮಳೆಯಿಂದ ಒದ್ದೆಯಾಗಿತ್ತು. ತೇವಗೊಂಡಿದ್ದ ಕಲ್ಲಿದ್ದಲನ್ನು ಬಂಕರ್​ಗೆ ಹಾಕಿದ್ದರಿಂದ ಒತ್ತಡ ಹೆಚ್ಚಾಗಿ, ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರವಾಗಿದ್ದಕ್ಕೆ ಈ ಅವಘಡ ಸಂಭವಿಸಿದೆ. ಹಾಗೇ, ಕಲ್ಲಿದ್ದಲು ಬಂಕರ್​​ನ ಸಾಮರ್ಥ್ಯದ ಮಿತಿಗಿಂತಲೂ ಹೆಚ್ಚು ಕಲ್ಲಿದ್ದಲನ್ನು ಸಂಗ್ರಹಿಸಿದ್ದರಿಂದ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹೊರನಾಡು ಸಮೀಪ ಭಾರೀ ಭೂ ಕುಸಿತ, ಮಡಿಕೇರಿ ಊರುಬೈಲು ಗ್ರಾಮದಲ್ಲಿ 15 ಅಡಿ ಕುಸಿದು, ಕೊಚ್ಚಿ ಹೋದ ಗ್ರಾಮೀಣ ರಸ್ತೆ

ಈ ಹಿನ್ನೆಲೆಯಲ್ಲಿ ಏಕಾಏಕಿ ಕೋಲ್ ಬಂಕರ್ ಕುಸಿದು ಬಿದ್ದಿದೆ. ಈ ವೇಳೆ ಕಾರ್ಮಿಕರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸದ್ಯ 8 ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಹಾಗೂ ಬೃಹತ್ ಯಂತ್ರಗಳಿಗೆ ಹಾನಿಯಾಗಿರುವ ಕಾರಣದಿಂದ ದುರಸ್ತಿ ಕಾರ್ಯಕ್ಕೆ ಬೆಂಗಳೂರಿನಿಂದ ತಜ್ಞರು ಬರುವ ಸಾಧ್ಯತೆಯಿದೆ ಎಂದು ಟಿವಿ9ಗೆ ಆರ್​​ಟಿಪಿಎಸ್ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.

ಕೋಲ್ ಬಂಕರ್ ತುಂಬಾ ಹಳೆಯದ್ದಾಗಿದ್ದರಿಂದ ಕುಸಿದಿದೆ. ಈ ಘಟನೆಯಲ್ಲಿ ಯಾವುದೇ ದುರಂತ ಸಂಭವಿಸಿಲ್ಲ ಎಂದು ಕಲ್ಲಿದ್ದಲು ಬಂಕರ್​ನ ಸಿಬ್ಬಂದಿ ಹೇಳಿದ್ದಾರೆ. ಸದ್ಯಕ್ಕೆ ವಿದ್ಯುತ್ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Wed, 10 August 22